ನಗರ : ಕಸ ವಿಲೇವಾರಿ – ಚರಂಡಿ ಸ್ವಚ್ಛಗೊಳಿಸಲು ಕೈ ಮುಗಿದು ಕೇಳುತ್ತಿರುವ ಜನ

ಅಧ್ಯಕ್ಷರೇ, ಜಿಲ್ಲಾಧಿಕಾರಿಗಳೇ, ಶಾಸಕರೇ ನಮ್ಮ ಮನೆಗಳಲ್ಲಿ ವಾಸ ಮಾಡಿ – ದುರ್ವಾಸನೆ ನೋಡಿ
ರಾಯಚೂರು.ಮಾ.26- ಬಡಾವಣೆ, ಮುಖ್ಯರಸ್ತೆಗಳಲ್ಲಿ ಕೊಳೆತು ನಾರುತ್ತಿರುವ ಕಸ, ತುಂಬಿ ಹರಿಯುತ್ತಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ, ನಮ್ಮನ್ನು ರಕ್ಷಿಸಿಯೆಂದು ಜನ ನಗರಸಭೆ, ಜಿಲ್ಲಾಡಳಿತ ಮತ್ತು ಶಾಸಕರಿಗೆ ಜನ ಕೈ ಮುಗಿದು ಬೇಡುತ್ತಿದ್ದಾರೆ.
ದಿನ ಕಳೆದಂತೆ ತಿಪ್ಪೆಗುಂಡಿಯಲ್ಲಿ ಹೆಚ್ಚುತ್ತಿರುವ ಕಸ ಪ್ರಮಾಣ ಮತ್ತು ಹಸಿ ಕಸ ಕೊಳೆತು ದುರ್ವಾಸನೆ ಜನ ಮೂಗು ಮುಚ್ಚಿ ಓಡಾಡುವಂತಹ ಅನಾಹುತಕ್ಕೆ ದಾರಿ ಮಾಡಿದೆ. ಇದ್ದರಿಂದ ತೀವ್ರ ತೊಂದರೆಗೆ ಗುರಿಯಾಗುತ್ತಿರುವ ಜನರು ದಯವಿಟ್ಟು ಈ ಕಸ ವಿಲೇವಾರಿ ಮತ್ತು ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಅಂಗಲಾಚುವಂತಹ ಶೋಚನೀಯ ಸ್ಥಿತಿ ನಗರವನ್ನು ಆವರಿಸಿದೆ.
ಮನೆ ಮನೆ ಕಸ ವಿಲೇವಾರಿಯೂ ಸ್ಥಗಿತಗೊಂಡಿದ್ದರಿಂದ ಮನೆಯಲ್ಲಿ ಕಸದ ಮೂಟೆ ಹೆಚ್ಚಿದ ಕಾರಣಕ್ಕೆ ಜನ ಪ್ಲಾಸ್ಟಿಕ್ ಸಮೇತ ಸುಟ್ಟು ಹಾಕುಂವತಹ ಘಟನೆಗಳು ಹೆಚ್ಚುತ್ತಿವೆ. ಇನ್ನೂ ಕೆಲವರು ಕಸ ತುಂಬಿದ ಪ್ಲಾಸ್ಟಿಕ್‌ನ್ನು ಸಂದಿ, ಗೊಂದಿಗಳಲ್ಲಿ ಎಸೆದು ಹೋಗಿದ್ದಾರೆ. ಹಸಿ ಕಸ ನಿಧಾನಕ್ಕೆ ಕೊಳೆಯುತ್ತಿರುವುದರಿಂದ ಮತ್ತು ಹಂದಿ, ನಾಯಿ, ದನ ಇತ್ಯಾದಿ ಪ್ರಾಣಿಗಳು ಕಸವನ್ನು ಚೆಲ್ಲಾಪಿಲ್ಲಿ ಮಾಡಿದ್ದರಿಂದ ರಸ್ತೆಗಳಲ್ಲೂ ಕಸದ ಪ್ಲಾಸ್ಟಿಕ್ ಚೀಲಗಳು ಬಿದ್ದು, ಜನ ಓಡಾಟಕ್ಕೂ ಸಮಸ್ಯೆಯಾಗುತ್ತಿದೆ.
ಈ ಬಗ್ಗೆ ಕೆಲ ಬಡಾವಣೆಗೆ ಭೇಟಿ ನೀಡಿ, ಅಲ್ಲಿಯ ಜನರ ಅಭಿಪ್ರಾಯ ಕೇಳಿದಾಗ ಪ್ರತಿಯೊಬ್ಬರು ಕೈಮುಗಿದು ಈ ಕಸ ವಿಲೇವಾರಿಗೆ ನಗರಸಭೆಗೆ ಮನವಿ ಮಾಡಿದರು. ನಗರಸಭೆಯಿಂದ ನಮಗೆ ಯಾವುದೇ ಮೂಲಭೂತ ಸೌಕರ್ಯ ನೀಡದಿದ್ದರೂ, ಸಮಸ್ಯೆಯಿಲ್ಲ. ದಯವಿಟ್ಟು ಕಸ ವಿಲೇವಾರಿ ಮಾಡುವಂತೆ ಅಂಗಲಾಚಿ ಬೇಡಿದರು. ನಮಗೆ ನಗರಸಭೆಯಿಂದ ಯಾವುದೇ ಮೂಲಭೂತ ಸೌಕರ್ಯ ಇಲ್ಲದಿದ್ದರೂ, ಕಸ ಮತ್ತು ಚರಂಡಿ ಸ್ವಚ್ಛಗೊಂಡರೇ ಸಾಕು ಎಂದು ಮನವಿ ಮಾಡಿದರು.
ಕಳೆದ ಅನೇಕ ದಿನಗಳಿಂದ ತಮ್ಮ ಬಡಾವಣೆಗಳಲ್ಲಿ ತಿಪ್ಪೆಗಳು ತುಂಬಿ, ವಾಸ ಮತ್ತು ಓಡಾಡಲು ಸಮಸ್ಯೆಯಾಗಿದೆ. ಚರಂಡಿಗಳ ಸ್ಥಿತಿಯಂತೂ ಹೇಳತೀರದು. ಮನೆ ಮನೆ ಕಸ ವಿಲೇವಾರಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳ ಮುಂದೆ ಇಂದೋ, ನಾಳೆಯೋ ಕಸ ಪಡೆಯುವವರು ಬರಬಹುದೆಂಬ ಭರವಸೆಯಿಂದ ಪ್ಲಾಸ್ಟಿಕ್ ಚೀಲ ಮತ್ತು ಡಬ್ಬಿಗಳಲ್ಲಿ ಕಸ ಕಟ್ಟಿ ಸಂಗ್ರಹಿಸಿದ್ದೇವೆ. ನಗರಸಭೆಯಿಂದ ಯಾರು ಬಾರದಿರುವ ಕಾರಣಕ್ಕೆ ಈಗ ಈ ಕಸ ಸುಡಲಾಗುತ್ತಿದೆ. ಇನ್ನೆಷ್ಟು ದಿನ ಈ ಸಮಸ್ಯೆ ಎನ್ನುವುದು ತಿಳಿಯದೇ, ಗೊಂದಲಕ್ಕೆಡೆಯಾಗುವಂತಾಗಿದೆ.
ತಮ್ಮ ಬಡಾವಣೆ ಮತ್ತು ರಸ್ತೆಗಳನ್ನು ತೋರಿಸಿ, ಇಂತಹ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಬದುಕಬೇಕು. ಈ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರು, ಜಿಲ್ಲಾಧಿಕಾರಿ ಇವರೆಲ್ಲರೂ ತಮ್ಮ ಮನೆಗಳ ಸುತ್ತಮುತ್ತ ಸ್ವಚ್ಛವಾಗಿ ಉತ್ತಮ ಜೀವನ ಮಾಡುವ ಅದೃಷ್ಟ ಪಡೆದಿದ್ದರೇ, ನಾವು ಮಾತ್ರ ಅವರನ್ನು ಗೆಲ್ಲಿಸಿದ ಪಾಪಕ್ಕೆ ಈ ಕಸದ ಪ್ರಾಯಶ್ಚಿತ ಪಡೆಯುವಂತಾಗಿದೆ. ನಗರಸಭೆಯಲ್ಲಿ ಯಾವುದೇ ಕೆಲಸಕ್ಕೂ ಹೋದರೂ, ಲಂಚ ಸ್ವೀಕರಿಸುವ ಅಧಿಕಾರಿಗಳಿಗೆ ಈ ಕಸ ತೆಗೆದರೇ, ಮನೆ ಮನೆಯಿಂದ ಇಂತಿಷ್ಟು ಲಂಚ ಕೊಡಲು ಸಿದ್ಧರಿದ್ದೇವೆ. ದಯವಿಟ್ಟು ಈ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ಮನುಷ್ಯತ್ವ ಇರುವ ಯಾವುದೇ ಜನಪ್ರತಿನಿಧಿ, ಇಂತಹ ಪರಿಸ್ಥಿತಿಯಲ್ಲಿ ಜನರನ್ನು ನರಳುವಂತೆ ಮಾಡುವುದಿಲ್ಲ. ಚುನಾವಣೆಯಲ್ಲಿ ಮನೆ ಮನೆಗೆ ಬಂದು ಅಕ್ಕ, ಅಣ್ಣ, ತಮ್ಮ, ತಂಗಿ, ಮಾಮಾ ಎಂದು ನಾಟಕ ಮಾಡಿ, ಗೆದ್ದ ನಂತರ ಸರ್ಕಾರಿ ಜಾಗ ಅತಿಕ್ರಮಣ, ಪರ್ಸೆಂಟೇಜ್‌ಗೆ ರಸ್ತೆ ನಿರ್ಮಾಣ, ಕಟ್ಟಡ ಮತ್ತಿತರ ಆಸ್ತಿ ವರ್ಗಾವಣೆಗೆ ಲಂಚ ಪಡೆಯುವ ಮೂಲಕ ಕೋಟಿಗಟ್ಟಲೇ ಹಣಗಳಿಸುವ ಈ ಜನರಿಗೆ ನಾವು ಕೊಟ್ಟ ಮತ ಅವರ ಶ್ರೀಮಂತಿಕೆಗೆ ಕಾರಣವೆನ್ನುವ ಕನಿಷ್ಟ ಕಾಳಜಿಯಿಂದಾದರೂ, ಈ ದುಸ್ಥಿತಿಯಿಂದ ನಮ್ಮನ್ನು ಪಾರು ಮಾಡಲಿ ಎಂದು ಬೇಡಿಕೊಂಡರು.
ನಗರಸಭೆ ಸದಸ್ಯರು, ಅಧ್ಯಕ್ಷರು, ಶಾಸಕರಿಗೆ ಇತ್ತ ತಿಪ್ಪೆ ಗುಂಡಿಗಳ ದುರ್ವಾಸನೆ ಮಧ್ಯೆ ಜನ ಬದುಕುವುದಾದರೂ ಹೇಗೆ ಎನ್ನುವ ಕನಿಷ್ಟ ಯೋಚನೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾವು ನಮ್ಮ ಮನೆಗಳನ್ನು ಖಾಲಿ ಮಾಡಿಕೊಡುತ್ತೇವೆ. ಈ ಜನಪ್ರತಿನಿಧಿಗಳು ಒಮ್ಮೆ ತಮ್ಮ ಬಂಗಲೆ ಮತ್ತು ಏಸಿ ಕಾರುಗಳನ್ನು ಬಿಟ್ಟು 24 ಗಂಟೆ ಈ ದುರ್ವಾಸನೆಯ ಮಧ್ಯೆ ವಾಸ್ತವ್ಯ ಹೂಡಲಿ ಎಂದು ಸವಾಲ್ ಹಾಕಿದರು. ನಿತ್ಯ ನಮಗೆ ನಮ್ಮ ಊಟಕ್ಕಾಗಿ ದುಡಿದು ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ನಗರಸಭೆ, ಜಿಲ್ಲಾಧಿಕಾರಿ ಕಛೇರಿ ಹಾಗೂ ಶಾಸಕರ ಕಛೇರಿಗಳ ಮುಂದೆ ಪ್ರತಿಭಟನೆ ಮಾಡುವ ಶಕ್ತಿ, ಸಮಯ ನಮಗಿಲ್ಲ.
ನಮ್ಮ ಈ ಅಸಹಾಯಕತೆಯನ್ನೇ ದುರ್ಬಳಕೆ ಮಾಡಿಕೊಂಡು ಜನಪರ ಸೇವೆಯನ್ನೇ ಮರೆತು, ಕೇವಲ ಗುತ್ತೇದಾರಿಗೆ, ಮಧ್ಯವರ್ತಿ ಕೆಲಸ ಹಾಗೂ ಸರ್ಕಾರಿ ಜಮೀನು ಗುಳುಂ ಮಾಡುವ ಹಾಗೂ ಅಭಿವೃದ್ಧಿಗೆ ಬಂದ ಅನುದಾನದಲ್ಲಿ ಪರ್ಸೆಂಟೇಜ್‌ ನುಂಗುವುದನ್ನೇ ಜನಪ್ರತಿನಿಧಿಗಳು ಜವಾಬ್ದಾರಿ ಎಂದುಕೊಂಡರೇ ನಮ್ಮ ಕಷ್ಟಗಳನ್ನು ಕೇಳುವುದು ಯಾರು ಎಂದು ನಿರ್ದಾಕ್ಷಿಣ್ಯವಾಗಿ ಕೇಳುವ ಮಹಿಳೆಯರು, ಈ ನಾಯಕರಿಗೆ ಕನಿಷ್ಟ ನಾಚಿಕೆ ಇದ್ದರೇ, ದಯವಿಟ್ಟು ನಮ್ಮ ಕಷ್ಟಕ್ಕೆ ಸ್ಪಂದಿಸಿ, ನಮ್ಮ ಬಡಾವಣೆಗಳಿಗೆ ಬಂದು ಕಸದ ಪರಿಸ್ಥಿತಿ ಒಮ್ಮೆ ನೋಡಿ ಎಂದು ವಿನಂತಿಸಿದರು.
ವಿವಿಧ ಬಡಾವಣೆಗಳ ಜನರ ಈ ಬೇಡಿಕೆಗಾದರೂ, ನಗರಸಭೆ, ಜಿಲ್ಲಾಧಿಕಾರಿ ಮತ್ತು ಶಾಸಕರು ಸ್ಪಂದಿಸುವರೇ?. ಒಂದೆರಡು ದಿನಗಳಲ್ಲಿ ಈ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವರೇ? ಅಥವಾ ಜನ ಹೇಳಿದಂತೆ ಎಲ್ಲವನ್ನು ಬಿಟ್ಟು, ತಿಪ್ಪೆಗುಂಡಿಗಳಲ್ಲಿ ನಾಗರೀಕರು ಬದುಕಲಿ ಇಲ್ಲ ಬಿಡಲಿ ಎಂದು ಕಣ್ಮುಚ್ಚಿ ಕೂಡುವರೆ?.