ನಗರ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.10: ನಗರದ ಸಿಂಧನೂರು ಬೈಪಾಸ್ ರಸ್ತೆಯಲ್ಲಿ ಜಿಲ್ಲಾ ಖನಿಜ ನಿಧಿ ಯೋಜನೆಯಡಿ ರೂ.25ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನಗರ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಗುರುವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ತಾಲೂಕಿನ ಅಭಿವೃದ್ಧಿಗಾಗಿ ಅನೇಕ ಯೋಜನೆಗಳಡಿ ವಿವಿಧ ಅನುದಾನಗಳನ್ನು ತಂದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ಕೂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನೆ ಮಾಡಬೇಕು, ಇದರಿಂದ ಉತ್ತಮ ಗುಣಮಟ್ಟದ ಕೆಲಸಗಳನ್ನು ಗುತ್ತಿಗೆದಾರರು ಮಾಡುತ್ತಾರೆ. ಯಾರು ಕೇಳದೆ ಇದ್ದರೆ ಕಳಪೆ ಕಾಮಗಾರಿ ನಡೆಯುವ ಸಾಧ್ಯತೆ ಇರುತ್ತದೆ.
ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ದಾದಿಯರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ಜಾಗದಲ್ಲಿ ರೂ.25ಲಕ್ಷ ವೆಚ್ಚದಲ್ಲಿ ದಾದಿಯರ ವಸತಿ ಗೃಹವನ್ನು ನಿರ್ಮಾಣ ಮಾಡಲಾಗುತ್ತದೆ, ಇದರಿಂದ ದಾದಿಯರಿಗೆ ವಸತಿ ಸೌಲಭ್ಯ ದೊರೆಯುತ್ತದೆ ಎಂದು ಹೇಳಿದರು.
ನಗರಸಭೆ ಸದಸ್ಯರಾದ ಲಕ್ಷ್ಮಿದೇವಿ, ವಿಕ್ರಮ್‌ಜೈನ್, ಮುಖಂಡರಾದ ಬಿ.ಇ.ದೊಡ್ಡಯ್ಯ, ಉಡೇಗೋಳ ಖಾಜಪ್ಪ, ಅಶೋಕ್‌ಜೈನ್, ವೈ.ಡಿ.ವೆಂಕಟೇಶ ಇನ್ನಿತರರು ಇದ್ದರು.