ನಗರ ಅಭಿವೃದ್ಧಿಯೇ ಪ್ರಥಮಾದ್ಯತೆ

ಯಾದಗಿರಿ;ನ.7: ನಗರದ ಅಭಿವೃದ್ಧಿಯನ್ನು ಮಾದರಿಯಾಗಿ ಮಾಡಲು ಬದ್ಧರಾಗಿದ್ದೇವೆ ಯಾದಗಿರಿ ನಗರಾಭಿವೃದ್ಧಿಯೇ ನಮ್ಮ ಪ್ರಥಮಾದ್ಯತೆ ಎಂದು ನಗರಸಭೆ ನೂತನ ಅಧ್ಯಕ್ಷ ಉಪಾದ್ಯಕ್ಷರು ಭರವಸೆ ನೀಡಿದರು.
ನಗರದ ಸೊಪ್ಪಿಮಠದಲ್ಲಿ ಏರ್ಪಡಿಸಿದ ಸನ್ಮಾನ, ಗುರುರಕ್ಷೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ವಿಲಾಸ ಪಾಟೀಲ್, ಜನರ ನಿರೀಕ್ಷೆ ಬಹಳ ಇದೆ. ಜೊತೆಗೆ ಸಮಸ್ಯೆಗಳು ಬಹಳ ಇದ್ದು ಗುರು ಹಿರಿಯರ ಆಶೀರ್ವಾದ, ಮಾರ್ಗದರ್ಶನದಲ್ಲಿ ನಗರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಉಪಾಧ್ಯಕ್ಷೆ ಶ್ರೀಮತಿ ಪ್ರಭಾವತಿ ಮಾರುತಿ ಕಲಾಲ್ ಮಾತನಾಡಿ ದೊರೆತ ಅವಕಾಶ ಮತ್ತು ಅಧಿಕಾರಕ್ಕೆ ಚ್ಯುತಿ ಬಾರದಂತೆ ಹೆಸರು ತರುವಂತೆ ಅಧಿಕಾರ ನಡೆಸಿ ನಗರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಕೆಲಸ ಮಾಡಲು ಬದ್ಧರಾಗಿದ್ದೇವೆ ಎಂದು ನುಡಿದರು.
ಇದಕ್ಕೂ ಮುನ್ನ ಬಿಜೆಪಿ ರೈತಮೋರ್ಚಾ ಮಾಜಿ ಅಧ್ಯಕ್ಷ ಶರಣಗೌಡ ಯಡ್ಡಳ್ಳಿ ಮಾತನಾಡಿ ಅಧಿಕಾರ ಶಾಶ್ವತ ಅಲ್ಲ, ಸಿಕ್ಕ ಅವಧಿ ಮತ್ತು ಅವಕಾಶದಲ್ಲಿ ಮಾಡುವ ಸೇವೆ ಶಾಶ್ವತವಾಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿ ಹೆಸರು ತರುವಂತೆ ಕಿವಿಮಾತು ಹೇಳಿದರು.
ಯಾದಗಿರಿ ಟೈಮ್ಸ್ ಸಂಪಾದಕ, ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಮಾತನಾಡಿ ನಗರ ಮತ್ತು ಪುರಸಭೆ ಅವಧಿಯಲ್ಲಿ ಈ ಹಿಂದೆ ವಿಶ್ವನಾಥರೆಡ್ಡಿ ಮುದ್ನಾಳ, ವಡಿ ತಿಪ್ಪಣ್ಣ, ವೆಂಕಟರೆಡ್ಡಿ ಮುದ್ನಾಳರಂತಹ ಅತ್ಯುತ್ತಮ ಆಡಳಿತಗಾರರು ಆಗಿ ಹೋಗಿರುವ ಸ್ಥಾನದಲ್ಲಿ ಕುಳಿತು ಅವಂತೆ ಹೆಸರು ಪಡೆದುಕೊಳ್ಳುವ ಕೆಲಸ ಮಾಡುವಂತೆ ಹಿತೋಕ್ತಿ ನುಡಿದರು.
ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಮಠದ ಬಸಯ್ಯ ಸ್ವಾಮಿ ಮಳಿಬಗಿಮಠ, ರಾಜು ಸ್ವಾಮಿ ರಾಮಗಿರಿ ಹಿರೇಮಠ, ಬಿಜೆಪಿ ಮುಖಂಡರಾದ ಮಾರುತಿ ಕಲಾಲ್, ಶ್ರೀಮಠದ ಸದ್ಭಕ್ತರಾದ ಚಂದ್ರಶೇಖರ ಅರಳಿ, ಅಳ್ಳೆಪ್ಪ, ದುರುಗಪ್ಪ ತೆಲುಗುರು, ಸಾಬರೆಡ್ಡಿ ತುಂಬಳ, ಕಮಲಮ್ಮ ಬಾವಿಕಟ್ಟಿ, ಪ್ರಿಯಾ ಬಾವಿಕಟ್ಟಿ ಇನ್ನಿತರರು ಇದ್ದರು.