
ರಾಯಚೂರು,ಮೇ.೦೮- ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಐಸ್ ಕ್ರೀಂ ಗುರುತಿಗೆ ಬೆಂಬಲ ನೀಡಬೇಕು ಎಂದು ಪಕ್ಷೇತರ ಅಭ್ಯರ್ಥಿ ಈರೇಶ ಕುಮಾರ ಮನವಿ ಮಾಡಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಯಚೂರು ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ನನಗೆ ರಾಯಚೂರು ನಗರ ಕ್ಷೇತ್ರದ ಮತದಾರರು ಬೆಂಬಲ ದೊರೆತರೆ ನಗರವನ್ನು ಅಭಿವೃದ್ದಿ ಮಾಡುತ್ತೇನೆ ಎಂದ ಅವರು,ನಗರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಮತ್ತು ನಗರಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳ ಬದಿಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಮಾಡುತ್ತೇನೆ.ಬಿಸಿಲನಾಡು ಎಂಬ ಖ್ಯಾತಿ ಪಡೆದಿರುವ ನಗರವನ್ನು, ಗಿಡ-ಮರ ಬೆಳೆಸಿ ಉದ್ಯಾನ ನಗರಿಯಾಗಿ ಮಾಡುತ್ತೇನೆ.ಮಹಿಳಾ ಸಬಲೀಕರಣಕ್ಕೆ ಕೈ ಜೋಡಿಸುತ್ತೇನೆ ಎಂದರು.
ನಗರದ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು, ಬಿ.ಪಿ.ಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸುವೆ.ಎಲ್ಲಾ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರದ ಜೊತೆಯಲ್ಲಿ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗುತ್ತದೆ. ವಸತಿ ರಹಿತ ಬಡ ಜನತೆಗೆ ನಿವೇಶನ ಸಹಿತ ವಸತಿ ಸೌಲಭ್ಯ ಕಲ್ಪಿಸಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುತ್ತೇನೆ ಎಂದರು.
ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ರಾಯಚೂರು ನಗರದಲ್ಲಿ ಅಂತರ್‌ರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡುತ್ತೇನೆ.ನಗರಕ್ಕೆ ೨೪x೭ ಶುದ್ಧ ಕುಡಿಯುವ ನೀರು ಪೂರೈಸುವುದು ಮೂಲ ಕರ್ತವ್ಯವಾಗಿದೆ ಆದ್ದರಿಂದ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹನುಮಂತರಾಯ ಗೌಡ, ಕಮಲ್ ಜೈನ್, ಹೇಮಂತಗೌಡ, ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.