ನಗರ್ತ ವಿದ್ಯಾವರ್ಧಕ ಸಂಘಕ್ಕೆ ಚುನಾವಣೆ

ವಿಜಯಪುರ, ಜು.೨೪: ಬೆಂಗಳೂರು ಕೆಂಪೇಗೌಡ ರಸ್ತೆಯಲ್ಲಿನ ಮಾತೃ ಸಂಸ್ಥೆಯಾದ ಅಯೋಧ್ಯಾನಗರದ ಶಿವಾಚಾರ ವೈಶ್ಯ ನಗರ್ತ ವಿದ್ಯಾವರ್ಧಕ ಸಂಘಕ್ಕೆ ವಿಜಯಪುರದಿಂದ ೪ ಮಂದಿ ಆಯ್ಕೆಯಾಗಬೇಕಿದ್ದು, ಬಿರುಸಿನ ಚುನಾವಣೆ ನಡೆದು, ೧೪೪೪ ಮತಗಳಿಗೆ ೧೦೮೭ ಮತಗಳು ಚಲಾವಣೆಯಾಗಿದ್ದು, ಶೇ.೭೬ ರಷ್ಟು ಮತದಾನ ನಡೆದು, ಚುನಾವಣೆ ಬಿರುಸು ಪಡೆದುಕೊಂಡಿತ್ತು.
೩ ಸಾಮಾನ್ಯ ಸ್ಥಾನಕ್ಕೆ, ೫ ಮಂದಿ ಚುನಾವಣೆಗೆ ಸ್ಪರ್ಧಿಸಿದ್ದು, ಒಬ್ಬ ಮೀಸಲು ಮಹಿಳಾ ಅಭ್ಯರ್ಥಿ ಸ್ಥಾನಕ್ಕೆ ಮೂವರು ಮಹಿಳೆಯರು ಸ್ಪರ್ಧಿಸಿದ್ದು, ಎಲ್ಲೆಲ್ಲಿಯೂ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಿದ್ದುದು ಕಂಡುಬಂದಿತು.
ಬೆಂಗಳೂರಿನಲ್ಲಿ ಮಾತೃ ಸಂಸ್ಥೆ ಹೊಂದಿರುವ ಅಯೋಧ್ಯಾ ನಗರ ಶಿವಾಚಾರ ವೈಶ್ಯ ನಗರ್ತ ವಿದ್ಯಾವರ್ಧಕ ಸಂಘಕ್ಕೆ ಒಟ್ಟಾರೆ ೨೯ ಮಂದಿ ನಿರ್ದೇಶಕ ಮಂಡಳಿ ಸದಸ್ಯರುಗಳು ಇದ್ದು, ಬೆಂಗಳೂರು, ವಿಜಯಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಬೂದಿಗೆರೆ, ಸೂಲಿಬೆಲೆ, ಮಾಲೂರು, ಶಿಡ್ಲಘಟ್ಟ, ಶ್ರೀನಿವಾಸಪುರ, ವೇಮಗಲ್, ಚಿಕ್ಕಬಳ್ಳಾಪುರ ಪಟ್ಟಣಗಳಿಂದ ನಿರ್ದೇಶಕ ಮಂಡಳಿಗೆ ಆಯ್ಕೆ ನಡೆಸಬೇಕಾಗಿದ್ದು, ಶನಿವಾರದಂದು ಎಲ್ಲೆಡೆ ಚುನಾವಣೆ ನಡೆಯಿತು.
ವಿಜಯಪುರದಿಂದ ೪ ಮಂದಿಯನ್ನು ಆಯ್ಕೆ ಮಾಡಬೇಕಾಗಿದ್ದು ಮೂವರು ಪುರುಷರು ಒಬ್ಬ ಮಹಿಳೆಗೆ ಎಂ.ಶಂಕರ್, ವಿ.ರವೀಂದ್ರ, ಎಸ್.ಪುನೀತ್ ಕುಮಾರ್, ಸಿ.ವಿಜಯ್ ಕುಮಾರ್, ರಾಜಶೇಖರ್, ಹಾಗೂ ಒಬ್ಬ ಮಹಿಳಾ ಸ್ಥಾನಕ್ಕೆ ಸುವರ್ಣ ಶಿವಕುಮಾರ್, ಭಾರತಿ ಪ್ರಭುದೇವ್, ದೀಪ ಮುರಳೀಧರ್ ಸ್ಪರ್ಧಿಸಿದ್ದರು.
ಮತ ಎಣಿಕೆ ಭಾನುವಾರದಂದು ಬೆಂಗಳೂರಿನ ಗಾಂಧಿಬಜಾರ್‌ನ ಎ.ಎಸ್.ವಿ.ಎನ್.ವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು ಅಂದೇ ಸರ್ವ ಸದಸ್ಯರ ಸಭೆಯು ನಡೆಯಲಿದೆ.