ಬೀದರ, ಜೂ.7: ಇತ್ತಿಚೆಗೆ ನಗರೀಕರಣ ಹೆಚ್ಚಾದಂತೆ ಪರಿಸರ ಮಾಲಿನ್ಯವು ಹೆಚ್ಚಾಗುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಿಸಲು ಪ್ರಸುತ್ತ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ ಹೇಳಿದರು.
ಅವರು ಸೋಮವಾರ ನಗರದ 100-ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ ಬೀದರ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಬೀದರ ಇವರ ಸಂಯುಕ್ತಾಶ್ರದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ-ತಮ್ಮ ಮನೆಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಶಿಸಬೇಕು ಮತ್ತು ತಮ್ಮ ಸುತ್ತಮುತ್ತಲಿನ ಜನರಿಗೆ ಸಸಿಗಳನ್ನು ನೆಡುವಂತೆ ಜಾಗೃತಿ ಮೂಡಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸಬಹುದಾಗಿದೆ ಎಂದು ಹೇಳಿದರು.
ಸಿರಿ ಧಾನ್ಯಗಳ ಮಹತ್ವ ಕುರಿತು ಸಂಗಪ್ಪ ಹಿಪ್ಪಳಗಾವ ಮಾತನಾಡಿ, ಸರಿಧಾನ್ಯಗಳು ದಿನನಿತ್ಯ ನಮ್ಮ ಆಹಾರ ಪದ್ದತಿಯಲ್ಲಿ ಅಳವಡಿಸಿಕೊಳ್ಳಬೇಕು. ಜಂಕ್ ಫುಡ್ ತಿನ್ನುವುದನ್ನು ಬಿಡಬೇಕು. ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟ ಆರೋಗ್ಯಕ್ಕೆ ಹಾನಿಕಾರಕ ಗೊಬ್ಬರಗಳ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರ ಬಳಕೆ ಸಹ ಕಡಿಮೆಯಾಗಬೇಕು. ಜಿಲ್ಲೆಯ ನಾಗರಿಕರಲ್ಲಿ ಪೌಷ್ಟಿಕಾಂಶದ ಕೊರತೆಯಿದೆ ಎಂದು ವರದಿಗಳು ಹೇಳುತ್ತಿವೆ. ಸಿರಿಧಾನ್ಯ ಬಳಕೆಯಿಂದ ಈ ಕೊರತೆ ನೀಗಿಸಬಹುದು ಎಂದ ಅವರು ಎಲ್ಲರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಶಂಕರ ಭತಮೂರ್ಗೆ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಕಿರಣ ಪಾಟೀಲ್, ಜಿಲ್ಲಾ ಸವೆರ್Àಕ್ಷಣಾಧಿಕಾರಿ ಶಂಕ್ರೆಪ್ಪಾ ಬೊಮ್ಮಾ, 100-ಹಾಸಿಗಳ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಸೋಹೆಲ್, ಜಿಲ್ಲಾ ವೈದ್ಯಧಿಕಾರಿ ಡಾ. ಸರೋಜಾ ಪಾಟೀಲ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸಂಜೀವಕುಮಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸನೀತ, ಆರೋಗ್ಯ ಇಲಾಖೆಯ ವಿವಿಧ ವಿಭಾಗದ ವೈದ್ಯರು,ಆಶಾ ಕಾರ್ಯಕರ್ತರು, ಸುಶ್ರುತರು ಸೇರಿದಂತೆ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.