ನಗರಾಭಿವೃದ್ಧಿ ಸಚಿವರ ತೋರ್ಪಡಿಕೆ ಭೇಟಿ: ಖಂಡನೆ

ತುಮಕೂರು, ಜ. ೮- ಸ್ಮಾರ್ಟ್‌ಸಿಟಿ ಯೋಜನೆ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದ್ದರೂ ನಗರಾಭಿವೃದ್ಧಿ ಸಚಿವರು ತಮ್ಮ ಭೇಟಿ ಅವಧಿಯಲ್ಲಿ ಆ ಬಗ್ಗೆ ಚಕಾರವೆತ್ತದೆ ಕೇವಲ ಒಂದು ಗಂಟೆ ಅವಧಿಯಲ್ಲಿ ಕಾಮಗಾರಿಗಳನ್ನು ಪರಿಶೀಲಿಸಿ ಪಾಲಿಕೆ ಸದಸ್ಯರನ್ನು ಹೊರಗಿಟ್ಟು ಅಧಿಕಾರಿಗಳ ಸಭೆ ನಡೆಸಿರುವುದನ್ನು ಪಾಲಿಕೆ ಸದಸ್ಯ ಜೆ. ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ನಗರಾಭಿವೃದ್ಧಿ ಸಚಿವರು ನಗರಕ್ಕೆ ಭೇಟಿ ನೀಡುತ್ತಿರುವ ವಿಷಯ ತಿಳಿದು ಸಮಸ್ಯೆಗಳ ಕುರಿತು ಅವರ ಗಮನಕ್ಕೆ ತರಲು ಉತ್ಸುಕನಾಗಿದ್ದೆ. ಆದರೆ ಸಚಿವರು ಅದಕ್ಕೆಲ್ಲಾ ಅವಕಾಶ ನೀಡದೆ ಕೇವಲ ಅಧಿಕಾರಿಗಳ ಬಳಿ ಮಾತ್ರ ಚರ್ಚಿಸಿರುವುದು ಸರಿಯಲ್ಲ. ಸ್ಮಾರ್ಟ್‌ಸಿಟಿ ಕಾಮಗಾರಿಗಳ ಕರ್ಮಕಾಂಡ ಕುರಿತು ದಾಖಲಾತಿ ಸಮೇತ ಬಯಲು ಮಾಡಲು ತವಕದಲ್ಲಿ ನಮಗೆ ಸಚಿವರ ನಡೆ ಬೇಸರ ತರಿಸಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸ್ಮಾರ್ಟ್‌ಸಿಟಿ ಯೋಜನೆಯ ವತಿಯಿಂದ ಕೈಗೊಂಡಿರುವ ನೂರಾರು ಕೋಟಿ ರೂ.ಗಳ ಕಾಮಗಾರಿಗಳನ್ನು ಕೆಲವೇ ನಿಮಿಷಗಳಲ್ಲಿ ವೀಕ್ಷಿಸಿ ಕೇವಲ ಸ್ಮಾರ್ಟ್‌ಸಿಟಿ ಮತ್ತು ಪಾಲಿಕೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ವಾಪಸ್ಸಾಗಿರುವುದು ದುರಂತವೇ ಸರಿ ಎಂದಿದ್ದಾರೆ.
ನಾನು ಈ ಹಿಂದೆ ಸ್ಮಾರ್ಟ್‌ಸಿಟಿ ಕರ್ಮಕಾಂಡದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಬಹಿರಂಗಗೊಳಿಸಿದ್ದೆ. ಅಲ್ಲದೆ ಸಚಿವರಿಗೂ ಈ ಕುರಿತು ದಾಖಲೆಗಳನ್ನು ತಲುಪಿಸಿದ್ದೆ. ಜತೆಗೆ ಎಲ್‌ಐಡಿ ಬಲ್ಬ್ ಅಳವಡಿಕೆಯಲ್ಲಿ ಆಗಿರುವ ಅವ್ಯವಹಾರಗಳ ಕುರಿತು ಸ್ಮಾರ್ಟ್‌ಸಿಟಿ, ಪಾಲಿಕೆ ಅಧಿಕಾರಿಗಳು ಹಾಗೂ ಶಾಸಕರನ್ನು ಬಹಿರಂಗ ಚರ್ಚೆಗೂ ಆಹ್ವಾನಿಸಿದ್ದೆ. ಇದೆಲ್ಲದರ ಬಗ್ಗೆ ಸಚಿವರ ಗಮನ ಸೆಳೆಯಲು ಅವಕಾಶ ನೀಡದೆ ವಾಪಸ್ಸಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್‌ಸಿಟಿ ಅವ್ಯವಹಾರಗಳ ಬಗ್ಗೆ ನಗರ ಶಾಸಕರು ತುಟಿ ಬಿಚ್ಚಿರಲಿಲ್ಲ. ಈ ಎಲ್ಲ ವಿಚಾರಗಳನ್ನು ಸಚಿವರ ಗಮನಕ್ಕೆ ತಂದು ಸಮಸ್ಯೆಗಳಿಗೆ, ಅಕ್ರಮಗಳಿಗೆ ಇತಿಶ್ರೀ ಹಾಡುವ ಆಶಾಭಾವನೆ ಹೊಂದಿದ್ದೆವು. ಆದರೆ ಶಾಸಕರು ಇದಕ್ಕೆ ಪೂರಕವಾಗಿ ಸ್ಪಂದಿಸಲಿಲ್ಲ. ಸಚಿವರ ಭೇಟಿ ಕೇವಲ ಬಂದು ಹೋಗುವ ರಸ್ತೆಗಳ ಶುದ್ದಿಗೊಳಿಸಲಿಕ್ಕಷ್ಟೇ ಸೀಮಿತವಾಗಿತ್ತು ಎಂದು ದೂರಿದ್ದಾರೆ.
ಸಚಿವರ ತುಮಕೂರು ಭೇಟಿ ಯಾವ ಉದ್ದೇಶಕ್ಕಾಗಿ ಎಂದು ಪ್ರಶ್ನೆ ಮಾಡುವಂತೆ ಮಾಡಿದೆ. ಇಂತರ ತೋರ್ಪಡಿಕೆಯ ಭೇಟಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕುಮಾರ್ ಹೇಳಿದ್ದಾರೆ.