ನಗರಸಭೆ : ೨೦೨೧-೨೨ ನೇ ಸಾಲಿನ ೨೭ ಲಕ್ಷ ಉಳಿತಾಯ ಬಜೆಟ್

೯ ಅಂಶಗಳನ್ನಾಧರಿಸಿ ತೆರಿಗೆ ಮುಕ್ತ ಅಯ-ವ್ಯಯ : ಈ.ವಿನಯ್
ರಾಯಚೂರು.ಜೂ.೦೨- ಚುನಾವಣಾ ನೀತಿ ಸಂಹಿತೆ ಮತ್ತು ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ ಅಂತ್ಯದ ವೇಳೆಗೆ ಬಜೆಟ್ ಮಂಡನೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಬಜೆಟ್ ಮಂಡಿಸಿದ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅವರು, ೨೦೨೧-೨೨ ಸಾಲಿಗೆ ೨೭.೯೧ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ೮೧.೦೬ ಕೋಟಿ ಲಕ್ಷ ಆದಾಯ ನಿರೀಕ್ಷೆ ಇಟ್ಟಿದ್ದರೇ, ೮೦.೭೮ ಕೋಟಿ ಖರ್ಚಿನ ನಂತರ ಒಟ್ಟು ೨೭ ಲಕ್ಷ ಉಳಿತಾಯ ಬಜೆಟ್ ಅಧ್ಯಕ್ಷ ಈ.ವಿನಯಕುಮಾರ ಅವರು ಮಂಡಿಸಿದರು. ಬಜೆಟ್ ಮಂಡಿಸುವ ಪೂರ್ವ ಮಾತನಾಡಿದ ಈ.ವಿನಯಕುಮಾರ ಅವರು ಒಟ್ಟು ೯ ಅಂಶಗಳನ್ನಾಧರಿಸಿ ಬಜೆಟ್ ಮಂಡಿಸಿರುವುದಾಗಿ ಹೇಳಿದ ಅವರು, ನಗರಸಭೆಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರ ಸುರಕ್ಷತೆ, ನಗರ ಸ್ವಚ್ಛತೆ, ಮಹಿಳೆಯರ ಶೌಚಾಲಯ, ಉದ್ಯಾನವನ, ಪ್ರವಾಸಿ ಸ್ಥಳ ಅಭಿವೃದ್ಧಿ, ತಳ್ಳು ಬಂಡಿ ಖರೀದಿ, ಕೆರೆ ಅಭಿವೃದ್ಧಿ ಮತ್ತು ಶುದ್ಧ ಕುಡಿವ ನೀರು ಮತ್ತು ಫುಟ್‌ಪಾತ್ ನಿರ್ಮಾಣ ಉದ್ದೇಶದೊಂದಿಗೆ ಬಜೆಟ್ ರೂಪಿಸಲಾಗಿದೆಂದು ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಯಾವುದೇ ವಿಶೇಷ ಘೋಷಣೆಗಳಿಲ್ಲದೇ ಮತ್ತು ಯಾವುದೇ ತೆರಿಗೆ ಹೆಚ್ಚಳವಿಲ್ಲದೇ ಜನ ಸಾಮಾನ್ಯರಿಗೆ ಅನುಕೂಲವಾಗುವ ತೆರಿಗೆ ರಹಿತ ಬಜೆಟ್ ಮಂಡಿಸುವ ಮೂಲಕ ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿರುವ ಜನರು ಸ್ವಾಗತಿಸುವ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ನ ಆದಾಯ ಮೂಲದಲ್ಲಿ ಪ್ರಮುಖವಾಗಿ ಸರ್ಕಾರದ ಅನುದಾನ ಮತ್ತು ಕಟ್ಟಡ ಶುಲ್ಕ, ಅಭಿವೃದ್ಧಿ ಶುಲ್ಕ, ಕೊಳಚೆ ಪ್ರದೇಶಗಳ ಬಾಬತ್ತಿನಿಂದ ಬರುವ ಶುಲ್ಕಗಳು ಪ್ರಮುಖವಾಗಿ ಸೇರಿವೆ. ನೀರಿನ ಶುಲ್ಕವೂ ಅತ್ಯಂತ ಪ್ರಮುಖವಾಗಿದೆ. ಈ ಎಲ್ಲಾ ಬಾಬತ್ತುಗಳಿಂದ ಒಟ್ಟು ೮೧ ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ನಗರಸಭೆಯಿಂದ ಖರ್ಚುವೆಚ್ಚಗಳಲ್ಲಿ ಯಾವುದೇ ಮಹತ್ವದ ಅಭಿವೃದ್ಧಿ ಬಗ್ಗೆ ಪ್ರಸ್ತಾಪಗಳಿಲ್ಲ. ದಿನನಿತ್ಯದ ಖರ್ಚು ವೆಚ್ಚಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೇ, ಚರಂಡಿ ದುರಸ್ತಿ, ಮಳೆ ನೀರು ನಿರ್ವಹಣೆ ಹಾಗೂ ವಿದ್ಯುತ್ ದೀಪ ಮತ್ತಿತರ ನಿರ್ಮಾಣ ಕಾಮಗಾರಿಗಳಿಗೆ ಈ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಪಾದಚಾರಿ ರಸ್ತೆ ನಿರ್ಮಾಣದ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಮಂಡಿಸಲಾಗಿದೆ.
@೧೨bಛಿ = ಸರ್ವ ಪಕ್ಷಗಳ ಶ್ಲಾಘನೆ
ಬಜೆಟ್ ಮೇಲೆ ವಿವಿಧ ನಗರಸಭೆ ಸದಸ್ಯರು ಪ್ರತಿಕ್ರಿಯಿಸಿದರು. ಬಹುತೇಕರು ಕೊರೊನಾ ಸಂದರ್ಭದಲ್ಲಿ ಇದೊಂದು ಉತ್ತಮ ಬಜೆಟ್ ಎಂದು ಹೇಳುವ ಮೂಲಕ ಕೆಲ ಸುಧಾರಣೆಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಜಯಣ್ಣ ಅವರು ಮಾತನಾಡುತ್ತಾ, ಬಜೆಟ್ ಉತ್ತಮವಾಗಿದೆ. ಆದರೆ, ವಾರ್ಡ್ ಮೂಲಭೂತ ಸೌಕರ್ಯಗಳನ್ನು ಗಮನದಲ್ಲಿಟ್ಟು ಕಾರ್ಯ ನಿರ್ವಹಿಸಬೇಕಾಗಿದೆ. ಅನೇಕ ವಾರ್ಡ್‌ಗಳಲ್ಲಿ ಬೀದಿ ದೀಪಗಳ ಸಮಸ್ಯೆ ತೀವ್ರವಾಗಿದೆ. ಬೇರೆ ಇಲಾಖೆಗಳಿಂದ ಬೀದಿ ದೀಪಗಳು ಖರೀದಿಯಾಗುತ್ತಿವೆ. ಆದರೆ, ನಗರಸಭೆ ಮಾತ್ರ ಬೀದಿ ದೀಪ ಖರೀದಿ ಸಮಸ್ಯೆ ಏಕೆ? ಜನ ನಮ್ಮನ್ನು ಯಾವುದೋ ಯೋಜನೆ ನೀಡುವಂತೆ ಕೇಳುತ್ತಿಲ್ಲ. ಬೀದಿ ದೀಪ ನೀಡುವಂತೆ ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಬೀದಿ ದೀಪಗಳನ್ನು ವಾರ್ಡಗಳಿಗೆ ಪೂರೈಸುವಂತೆ ಕೋರಿದರು.
ನಗರಸಭೆ ಯಾರ ಅಧೀನದಲ್ಲಿ ಕಾರ್ಯ ನಿರ್ವಹಿಸಬಾರದು. ಯಾರ ಹಂಗಿನಲ್ಲೂ ನಡೆಯಬಾರದು. ಜನ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವುದು ಸಾಂಸ್ತಿಕ ಆಡಳಿತ ನಿರ್ವಹಣೆಗೆ. ಅಧ್ಯಕ್ಷರು, ಪೌರಾಯುಕ್ತರು ಸಮನ್ವಯತೆಯೊಂದಿಗೆ ಇದನ್ನು ನಿರ್ವಹಿಸಬೇಕು. ನಗರಸಭೆಗೆ ಕರ್ನಾಟಕ ರಾಜ್ಯ ಪುರಸಭೆ ಕಾಯ್ದೆ ೧೯೬೪ ಧರ್ಮಗ್ರಂಥ. ಇದರನ್ವಯ ನಮ್ಮ ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ. ನಗರಸಭೆಯಲ್ಲಿ ಈ ಹಿಂದೆ ಅತ್ಯಂತ ಘಟಾನುಘಟಿ ಅಧ್ಯಕ್ಷರು, ಪೌರಾಯುಕ್ತರು ಕಾರ್ಯ ನಿರ್ವಹಿಸಿದ್ದಾರೆ. ಅವರ ಕಾರ್ಯ ಮಾದರಿ ನಮ್ಮಲ್ಲಿ ಮುಂದುವರೆಯಬೇಕು. ಅಧ್ಯಕ್ಷ ಈ.ವಿನಯಕುಮಾರ ಅವರು ಮಂಡಿಸಿದ ಬಜೆಟ್ ಉತ್ತಮವಾಗಿದೆಂದು ಹೇಳಿದರು.
ಶ್ರೀನಿವಾಸ ರೆಡ್ಡಿ ಅವರು ಮಾತನಾಡುತ್ತಾ, ಬಜೆಟ್ ಅತ್ಯುತ್ತಮವಾಗಿದೆಂದು ಪ್ರಶಂಸಿಸುತ್ತಾ, ಬೀದಿ ದೀಪಗಳ ಸಮಸ್ಯೆ ಗಂಭೀರವಾಗಿದ್ದು, ತಕ್ಷಣವೇ ಬೀದಿ ದೀಪ ಖರೀದಿಗೆ ಮುಂದಾಗಬೇಕು. ನಗರಸಭೆ ಸದಸ್ಯರು ತಮ್ಮ ಖರ್ಚಿನಲ್ಲಿ ಬೀದಿ ದೀಪ ಹಾಕಿಸುವಂತ ಪ್ರಸಂಗ ನಿರ್ಮಾಣವಾಗಿದೆ. ಖರೀದಿ ಸಂಗತಿ ಇಲ್ಲಿವರೆಗೂ ಒಮ್ಮೆಯೂ ಸಭೆ ಸೇರಿಲ್ಲ. ಹೀಗಾದರೇ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಬೀದಿ ದೀಪ ಖರೀದಿಗೆ ಆದ್ಯತೆ ನೀಡಲಾಗುತ್ತದೆಂದರು. ನಗರಸಭೆ ಮಳಿಗೆಯಿಂದ ವರ್ಷಕ್ಕೆ ೨೫ ಲಕ್ಷ ರೂ. ಆದಾಯ ತೋರಿಸಲಾಗುತ್ತಿದೆ. ಆದರೆ, ಸರಿಯಾಗಿ ಬಾಡಿಗೆ ವಸೂಲಿ ಮಾಡುತ್ತಿಲ್ಲ. ನಗರಸಭೆ ಕಟ್ಟಡಗಳಿಗೆ ಅನ್ಯರು ಬಾಡಿಗೆ ಪಡೆಯುತ್ತಿದ್ದಾರೆಂದು ಹೇಳಿದರು.
ಬಿಜೆಪಿಯ ಈ.ಶಶಿರಾಜ ಅವರು ಬಜೆಟ್ ಬಗ್ಗೆ ಪ್ರಸ್ತಾಪಿಸುತ್ತಾ, ಬಜೆಟ್ ಉತ್ತಮವಾಗಿದೆ. ಆದರೆ, ಈ ಬಜೆಟ್‌ನಲ್ಲಿ ವಿಶೇಷತೆಗಳೇನಿಲ್ಲ ಎಂದು ಹೇಳಿದರು. ಇಂದಿನ ಬಜೆಟ್ ಮುಂದುವರಿಕೆ ಇದಾಗಿದೆಂದು ಹೇಳಿದ ಅವರು, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವುದಕ್ಕೆ ಬಜೆಟ್‌ನಲ್ಲಿ ಹಣ ಮೀಸಿಲಿರಿಸಲಾಗಿದೆ. ಆದರೆ, ಎಲ್ಲಿ ಇವುಗಳನ್ನು ಸ್ಥಳಾಂತರಿಸಲಾಗುತ್ತದೆಂದು ಪ್ರಶ್ನಿಸಿದ್ದಾರೆ. ದರೂರು ಬಸವರಾಜ ಅವರು ಮಾತನಾಡುತ್ತಾ, ಜಯಂತಿಗಳ ಆಚರಣೆಗೆ ೩೫ ಲಕ್ಷ ಅನುದಾನ ಮೀಸಲಿರಿಸಲಾಗಿದೆ. ಆದರೆ, ಇಷ್ಟೊಂದು ಹಣ ಖರ್ಚು ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು. ಅಲ್ಲದೇ, ನೋಂದಣಿ ಇಲಾಖೆಯಲ್ಲಿ ನಡೆಯುವ ವ್ಯವಹಾರದಿಂದ ಇಂತಿಷ್ಟು ಶುಲ್ಕ ನಗರಸಭೆಗೆ ಬರಬೇಕೆಂಬ ನಿಯಮವಿದೆ. ಇದು ನೀಡಲಾಗುತ್ತಿದೆಯೇ? ಎಂದು ಪ್ರಶ್ನಿಸಿದರು.
ಎನ್.ಕೆ. ನಾಗರಾಜ ಅವರು ಮಾತನಾಡುತ್ತಾ, ನಗರದಲ್ಲಿ ಆದಾಯ ಮೂಲ ಯಾವುದು ಎನ್ನುವುದು ಗುರುತಿಸಬೇಕಾಗಿದೆ. ಅಧಕೃತ, ಅನಧೀಕೃತ ಲೇಔಟ್ ಹಾಗೂ ಶಾಲಾ, ಕಾಲೇಜು ನೋಂದಣಿ ಈ ಎಲ್ಲಾ ಬಾಬತ್ತಿನಿಂದ ನಗರಸಭೆ ಆದಾಯ ಪಡೆಯಬೇಕು. ಇದೊಂದು ಉತ್ತಮ ಬಜೆಟ್ ಆಗಿದ್ದರೂ ಇನ್ನೂ ಹೆಚ್ಚಿನ ಆದಾಯ ನಗರಸಭೆಗೆ ಪಡೆಯಲು ಆದಾಯದ ಮೂಲ ಹೆಚ್ಚಿಸಿಕೊಳ್ಳಬೇಕು. ಬೀದಿ ದೀಪ ಸಮಸ್ಯೆ ಗಂಭೀರವಾಗಿದೆ. ಇದನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ನಗರ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು.
ಸಣ್ಣ ನರಸರೆಡ್ಡಿ ಅವರು ಮಾತನಾಡುತ್ತಾ, ನಗರ ಸ್ವಚ್ಛತೆ ಸಮರ್ಪಕವಾಗಿ ನಿರ್ವಹಿಸುವ ಅಗತ್ಯವಿದೆಂದು ಹೇಳಿದರು. ಎಸ್.ರಾಜು ಅವರು ಮಾತನಾಡುತ್ತಾ, ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವವಹಿಸಬೇಕೆಂದ ಅವರು ಇದೊಂದು ಉತ್ತಮ ಬಜೆಟ್ ಎಂದು ಹೇಳಿದರು.
ವೇದಿಕೆ ಮೇಲೆ ನಗರಸಭೆ ಉಪಾಧ್ಯಕ್ಷರಾದ ನರಸಮ್ಮ ಮಾಡಗಿರಿ ಹಾಗೂ ಆಯುಕ್ತರಾದ ವೆಂಕಟೇಶ ಅವರು ಉಪಸ್ಥಿತರಿದ್ದರು.