ನಗರಸಭೆ ಸರಹದ್ದು ವಿಸ್ತರಣೆಗೆ ನಿರ್ಧಾರ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಮುಳಬಾಗಿಲು, ಜು. ೨೧:ಶಾಸಕ ಹೆಚ್.ನಾಗೇಶ್ ಸಮ್ಮುಖದಲ್ಲಿ ನಗರಸಭೆಯ ಸಾಮಾನ್ಯ ಸಭೆ ಅಧ್ಯಕ್ಷ ರಿಯಾಜ್ ಅಹ್ಮದ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಈಗಿರುವ ನಗರಸಭೆ ಸರಹದ್ದನ್ನು ಹೆಚ್ಚಿಗೆ ಮಾಡಿ ೧ ಕಿ.ಮೀ ವ್ಯಾಪ್ತಿಯಲ್ಲಿ ನಗರಸಭೆಯನ್ನು ಸೇರಿಸಿಕೊಂಡು ಅಭಿವೃದ್ಧಿ ಮಾಡಲು ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ಹಿಂದಿನ ಸಭೆಯ ನಡಾವಳಿಗಳನ್ನು ಅನುಮೋದನೆ ನೀಡಲಾಯಿತು, ಜನನ ಮರಣ ಅಂಕಿಅಂಶಗಳು ಮಂಡನೆ ಮಾಡಲಾಯಿತು, ನಗರಸಭೆಯಲ್ಲಿ ಸುಟ್ಟುಹೋಗಿರುವ ಎಲ್.ಇ.ಡಿ. ವಿದ್ಯುತ್ ದೀಪ ಬದಲಾಯಿಸಲು, ಹೊಸ ವಿದ್ಯುತ್ ಪರಿವರ್ತಕ ಬದಲಿಸಿಕೊಡಲು, ೧೫ನೇ ಹಣಕಾಸು ಯೋಜನೆಯಲ್ಲಿ ಶವಸಾಗಿಸಲು ಶಾಂತಿವಾಹನ ಖರೀದಿಸಲು, ನಗರದ ವಿದ್ಯುತ್ ದೀಪಗಳ ನಿರ್ವಹಣೆಗೆ ಗುತ್ತಿಗೆದಾರರನ್ನು ನೇಮಿಸಲು ಟೆಂಡರ್ ಆಹ್ವಾನಿಸಲು, ಎಸ್.ಎಫ್.ಸಿ. ವಿಶೇಷ ಅನುದಾನದಡಿ ಉಳಿಕೆಯಾದ ಮೊತ್ತಕ್ಕೆ ಕ್ರಿಯಾಯೋಜನೆಯನ್ನು ತಯಾರಿಸಲು ನಿರ್ಧಾರ ಕೈಗೊಳ್ಳಲಾಯಿತು, ನೆಹರು ಉದ್ಯಾನವನಕ್ಕೆ ರಾತ್ರಿವೇಳೆ ಒಬ್ಬರು ಸಿಬ್ಬಂದಿಯನ್ನು ಟೆಂಡರ್ ಮೇಲೆ ನಿಯೋಜನೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ವಿವಿಧ ವಾರ್ಡುಗಳಿಗೆ ಹೊಸ ಹೆಸರುಗಳು ನಾಮಕರಣ ಮಾಡಲು ಕೆಲವು ಸದಸ್ಯರು ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ವಿರೋದ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಧರ್ಮಕ್ಕೆ ಸಂಬಂಧಿಸಿದಂತೆ ಹೆಸರುಗಳನ್ನು ಇಡಬಾರದು, ಕನ್ನಡ ಹೆಸರಾಂತ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ನಾಮಕರಣ ಮಾಡಬೇಕೆಂದು ಬಿ.ಜೆ.ಪಿ ನಾಮಕರಣ ಸದಸ್ಯ ಹೆಚ್.ಎಸ್.ಹರೀಶ್ ಆಗ್ರಹಿಸಿದರು.
ನಗರಸಭೆಯಲ್ಲಿ ವಿವಿದ ಕಾಮಕಾರಿಗಳಲ್ಲಿ ಉಳಿಕೆಯಾಗಿರುವ ೩೦ ಲಕ್ಷ ವೆಚ್ಚದಲ್ಲಿ ನಗರದಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸಲು ಅಧ್ಯಕ್ಷ ರಿಯಾಜ್ ಅಹ್ಮದ್, ಪ್ರಸ್ತಾವನೆ ಮಂಡಿಸಿದ್ದು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಸಿವಿಲ್ ಕಾಮಗಾರಿ ಗುತ್ತಿಗೆದಾರ ದೇವರಾಜ್ ಟೆಂಡರ್ ಪಡೆದು ಕಾಮಗಾರಿ ಆರಂಭಿಸದೆ ಹಾಗೆಯೇ ಬಿಟ್ಟಿದ್ದು ೩ ಬಾರಿ ನೋಟೀಸ್ ನೀಡಿದ್ದರೂ ಪ್ರತ್ಯುತ್ತರ ನೀಡಿಲ್ಲ ಅವರನ್ನು ಬ್ಲಾಕ್ ಪಟ್ಟಿಗೆ ಸೇರಿಸಬೇಕೆಂದು ಸಬೆಯಲ್ಲಿ ನಿರ್ಣಯಿಸಲಾಯಿತು.
ಕಲ್ಯಾಣಮಂಟಪಗಳು, ಅಂಗಡಿ ಮುಂಗಟ್ಟುಗಳು, ಆಸ್ಪತ್ರೆಗಳು, ಬಾರ್ ಮತ್ತು ರೆಸ್ಟೋರೆಂಟ್, ಮಟನ್, ಚಿಕನ್ ಸ್ಟಾಲ್‌ಗಳಲ್ಲಿ ತ್ಯಾಜ್ಯ ಯಥೇಚ್ಚವಾಗಿ ಹೊರಹಾಕುತ್ತಿದ್ದು ಇದಕ್ಕೆ ನಗರಸಭೆಯಿಂದ ತೆರಿಗೆ ವಿಧಿಸಿ ಅದನ್ನು ವಿಲೇವಾರಿ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ನಗರದಲ್ಲಿ ವಿವಿಧ ಕಡೆ ನಂದಿನಿ ಹಾಲಿನ ಉತ್ಪನ್ನಗಳ ಮಳಿಗೆ ತೆರೆದು ಮಾರಾಟ ಮಾಡಲು ಅರ್ಜಿ ಸಲ್ಲಿಸಿರುವುದನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಪರವಾನಗಿ ನೀಡಲು ನಿರ್ಧರಿಸಲಾಯಿತು.
ಸದಸ್ಯ ಮತ್ತು ಅಧಿಕಾರಿ ವಾಕ್ಸಮರ: ನಗರಸಭೆ ಕಂದಾಯ ಅಧಿಕಾರಿ ಆರ್.ಕೆ.ವಠಾರ್ ಖಾತೆ ಮಾಡುವುದು ಸೇರಿದಂತೆ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ತಡಮಾಡಿ ಭ್ರಷ್ಟಾಚಾರವೆಸಗುತ್ತಿದ್ದಾರೆ, ಲಂಚವಿಲ್ಲದೆ ಯಾವುದೇ ಕೆಲಸ ಕಾರ್ಯಗಳು ಮಾಡುತ್ತಿಲ್ಲ ಕೇಳಿದರೆ ಅಸಭ್ಯವಾಗಿ ವರ್ತನೆ ಮಾಡುತ್ತಾರೆ ಎಂದು ಅಂಬೇಡ್ಕರ್ ನಗರ ವಾರ್ಡ್ ಸದಸ್ಯ ಎಂ.ಪ್ರಸಾದ್ ಗಂಭೀರ ಆರೋಪ ಮಾಡಿದರು, ಈ ಬಗ್ಗೆ ಪ್ರಶ್ನೆ ಮಾಡಿದರೆ ಅಸಭ್ಯವಾಗಿ ವರ್ತನೆ ಮಾಡುತ್ತಾರೆ ಕಚೇರಿಯಲ್ಲಿ ಪ್ರಶ್ನೆ ಮಾಡುವಂತಿಲ್ಲ, ಸದಸ್ಯರು ವಾರ್ಡಿನಲ್ಲಿ ಮಾತ್ರ ತಮ್ಮ ಕರ್ತವ್ಯ ನಿರ್ವಹಿಸಬೇಕೆನ್ನುತ್ತಾರೆ, ಇದರಿಂದ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಈ ಬಗ್ಗೆ ತುಚ್ಯವಾಗಿ ಮಾತನಾಡುತ್ತಾರೆಂದು ಗಂಭೀರ ಆರೋಪ ಮಾಡುತ್ತಿದ್ದಂತೆ ವಠಾರ್ ಎದ್ದುನಿಂತು ಸದಸ್ಯರು ಹೇಳುತ್ತಿರುವುದು ಸುಳ್ಳು ನಾನು ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದವನೆಂಬುದನ್ನು ಗುರಿಮಾಡಿಕೊಂಡು ನನ್ನ ಹಕ್ಕುಗಳನ್ನು ಕಸಿಯುತ್ತಿದ್ದಾರೆ ಎಂದು ತೀವ್ರ ಪ್ರತಿ ಆರೋಪ ಮಾಡಿದರು, ಇದರಿಂದ ಕುಪಿತಗೊಂಡ ಶಾಸಕ ಹೆಚ್.ನಾಗೇಶ್ ವಠಾರ್‌ನ್ನು ತೀವ್ರ ತರಾಟೆಗೆ ತೆಗೆದುಕೊಂಡು ಯಾವರೀತಿ ಅಟ್ರಾಸಿಟಿಯಾಗಿದೆ, ಈಗ ಸಭೆಯಲ್ಲಿ ಏಕೆ ಎಸ್ಸಿ ಎಸ್ಟಿ ಎಂಬುದನ್ನು ತರುತ್ತೀರಿ, ಈ ಬಗ್ಗೆ ಡಿ.ಸಿ ಮತ್ತು ಪಿ.ಡಿ. ರವರೊಂದಿಗೆ ಮಾತನಾಡುತ್ತೇನೆ, ನೀವು ಸಭೆಯಿಂದ ಹೊರಗೆ ನಡೆಯಿರಿ ಹೆಚ್ಚಿಗೆ ಮಾಡಿದರೆ ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿ ಶಿಕ್ಷೆಗೆ ಗುರಿಪಡಿಸುತ್ತೇನೆ ಎಂದು ಗದರಿ ಏನಿದ್ದರೂ ಕಚೇರಿಗೆ ಬಂದು ತಿಳಿಸಿ ಎಂದು ಎಚ್ಚರಿಸಿ ನಂತರ ಸಭೆ ನಡೆಸಿದರು.
ಇತ್ತೀಚೆಗೆ ಕೊಲೆಗೀಡಾದ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಜಗನ್ಮೋಹನರೆಡ್ಡಿಗೆ ಶ್ರದ್ಧಾಂಜಲಿಯನ್ನು ಸಭೆಯ ಆರಂಭದಲ್ಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

ಎಇಇ ಶ್ರೀನಿವಾಸ್, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಡಿ.ಸೋಮಣ್ಣ, ಜಿ.ನಾಗರಾಜ್, ಎಂ.ಜೆ.ಮಲ್ಲಿಕಾರ್ಜುನ್, ಮಹಮದ್ ಜಬೀಬುಲ್ಲ, ಎಸ್.ವೈ.ರಾಜಶೇಖರ್, ಮುನಿರಾಜು, ಅಕ್ಮಲ್‌ಬೇಗ್, ಶಾಹೀನ್‌ಪಾಷ, ಸೈಯದ್ ವಜೀರ್, ಇಮ್ರಾನ್‌ಪಾಷ, ಪಿ.ಎಸ್.ಸುವರ್ಣ, ಪದ್ಮಜ, ಎಂ.ಸರಳ ಸೇರಿದಂತೆ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.