ನಗರಸಭೆ ವ್ಯಾಪ್ತಿಯ ಪ್ರತಿ ಮನೆಗಳ ಮೇಲೆ ರಾಷ್ಟ್ರಧ್ವಜಾರೋಹಣವಾಗಲಿ: ಬಸವರಾಜ

ಶಹಾಬಾದ: ಜು.29:ಪ್ರಸಕ್ತ ಸಾಲಿನ ಸ್ವಾತಂತ್ರೋತ್ಸವ ಸಂಭ್ರಮಾಚರಣೆ ದಿನ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಪ್ರತಿಯೊಬ್ಬರ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಬೇಕು. ಆ ಮೂಲಕ ಸಾಮೂಹಿಕವಾಗಿ ದೇಶಾಭಿಮಾನ ಮೆರೆಯುವುದಲ್ಲದೇ ಕಾರ್ಯಕ್ರಮದ ಯಶಸ್ವಿಗೊಳಿಸಬೇಕೆಂದು ನಗರಸಭೆಯ ಪೌರಾಯುಕ್ತ ಬಸವರಾಜ ಹೆಬ್ಬಾಳ ಕರೆ ನೀಡಿದ್ದಾರೆ.

ಈ ಕುರಿತು ನಗರಸಭೆ ಆಡಳಿತ ಪರವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪೌರಾಯುಕ್ತ ಬಸವರಾಜ ಅವರು ಸ್ವಾತಂತ್ರದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಘೋಷಣೆ ಪಾಲಿಸುವಂತೆ ಕರೆ ನೀಡಿದೆ. ಆದ್ದರಿಂದ ಅಗಸ್ಟ್ 11 ರಿಂದ 17ರವರೆಗೆ ದೇಶದ ಪ್ರತಿ ಮನೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮಾಚರಣೆ ಮಾಡುವ ಜತೆಗೆ ಮನೆಗಳು ಮತ್ತು ಅಂಗಡಿ, ಕಚೇರಿಗಳ ಮೇಲೆ ರಾಷ್ಟ್ರ ಬಾವುಟ ಹಾರಾಡಬೇಕು. ಅಂತೆ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನಗರದ ನಿವಾಸಿಗಳು ಸಹ ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತ ಪಡಿಸಬೇಕೆಂದು ನಗರಸಭೆಯ ಆಡಳಿತ ವತಿಯಿಂದ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ನಗರದ ಎಲ್ಲಾ ಇಲಾಖೆಯ ಅಧಿಕಾರಿಗಳು ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರಪ್ರೇಮ ಅಭಿವ್ಯಕ್ತಿಗೊಳಿಸಲು ಅನುಕೂಲವಾಗುವಂತೆ ಅಂದಿನ ದಿನ ರಾಷ್ಟ್ರ ಧ್ವಜ ಹಾರಿಸಬೇಕು. ಸರ್ಕಾರದ ಸೌಲಭ್ಯ ಪಡೆಯುವವರು ಸರ್ಕಾರದ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಹೀಗಾಗಿ ಯಾವುದೇ ಕುಂಟು ನೆಪ ಹೇಳದೆ ರಾಷ್ಟ್ರ ಧ್ವಜ ಕಡ್ಡಾಯವಾಗಿ ಹಾರಿಸಬೇಕು. ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜು, ಈ ನಿಯಮ ಅನ್ವಯವಾಗಲಿದ್ದು, ಎಲ್ಲಾ ಶಿಕ್ಷಣ ಸಿಬ್ಬಂದಿಗಳು ತಮ್ಮ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸುವಂತೆ ಸೂಚನೆಯಲ್ಲಿ ತಿಳಿಸಿದೆ ಎಂದರು.

ಈ ಸಂದರ್ಭದಲ್ಲಿ ಎಇಇ ಮುಜಾಮಿಲ್ ಅಲಂ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಇದ್ದರು.