ನಗರಸಭೆ ಮತ್ತೊಂದು ವಿವಾದ : ಪೂರ್ಣಗೊಂಡ ಕಾಮಗಾರಿಗಳಿಗೆ ೩ ಕೋಟಿ ಇ-ಟೆಂಡರ್ ಪ್ರಕ್ರಿಯೆ – ಅಸಮಾಧಾನ

ಟಿಪ್ಪು ಸುಲ್ತಾನ್ ಆರ್‌ಸಿಸಿ ಚರಂಡಿಗೆ ೧೨ ಲಕ್ಷ, ವಿದ್ಯುತ್ ದೀಪ ನಿರ್ವಹಣೆಗೆ ೩ ಪ್ರತ್ಯೇಕ ಟೆಂಡರ್ ಸೇರಿದಂತೆ ಹತ್ತು ಹಲವು ಗೊಂದಲ
ರಾಯಚೂರು.ಆ.೦೬- ಇ-ಟೆಂಡರ್ ಪ್ರಕ್ರಿಯೆ ನಂತರ ಕಾಮಗಾರಿ ಕೈಗೆತ್ತಿಕೊಳ್ಳಬೇಕೆನ್ನುವುದು ಸರಕಾರದ ನಿಯಮವಾಗಿದೆ. ಆದರೆ, ನಗರಸಭೆ ತನ್ನದೆಯಾದ ಪ್ರತ್ಯೇಕ ನಿಯಮಾವಳಿ ರೂಪಿಸಿಕೊಂಡು ಕಾಮಗಾರಿ ಪೂರ್ಣಗೊಂಡ ನಂತರ ಇ-ಟೆಂಡರ್ ಪ್ರಕ್ರಿಯೆ ನಿರ್ವಹಿಸುವ ವಿಚಿತ್ರ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ.
ನಗರಸಭೆಯಲ್ಲಿ ಆದೇಶವಿಲ್ಲದೆ ಅಥವಾ ಮೌಖಿಕ ಆದೇಶಗಳಿಂದ ಕಾಮಗಾರಿ ಪೂರ್ಣಗೊಳಿಸಿ ನಂತರ ಬಿಲ್ ಪಾವತಿಗೆ ೨೨೦ ಕಡತಗಳ ಈ ಹಿಂದೆ ಉಂಟಾದ ವಿವಾದ ಪರಿಹಾರಗೊಳ್ಳುವ ಪೂರ್ವ ಈಗ ಮುಗಿದು ಹೋದ ಕಾಮಗಾರಿಗಳಿಗೆ ಟೆಂಡರ್ ಕರೆದಿರುವ ಮತ್ತೊಂದು ವಿವಾದ ನಗರಸಭೆ ಬಗ್ಗೆ ಜನ ಸಂಶಯದಿಂದ ನೋಡುವಂತೆ ಮಾಡಿದೆ.
ಸುಮಾರು ೨.೫ ರಿಂದ ೩ ಕೋಟಿ ರೂ. ವೆಚ್ಚದ ಹತ್ತು ಹಲವು ಕಾಮಗಾರಿಗಳಿಗೆ ಜುಲೈ. ೩೧ ಮತ್ತು ಆಗಸ್ಟ್ ೦೧ ರಂದು ಟೆಂಡರ್ ಕರೆಯಲಾಗಿದ್ದು, ಆಗಸ್ಟ್ ೧೭ ಮತ್ತು ೧೮ ರಂದು ಟೆಂಡರ್ ಸಲ್ಲಿಸಲು ಕೊನೆ ದಿನವಾಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಈ.ವಿನಯಕುಮಾರ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೨೨೦ ಕಡತ ಬಿಲ್ ಪಾವತಿಗೆ ಸಂಬಂಧಿಸಿ ಬಿಜೆಪಿ ಪಕ್ಷದಿಂದ ಪ್ರಬಲ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಸಹ ನೀಡಲಾಗಿತ್ತು. ಆದರೆ, ಈಗ ಬಿಜೆಪಿ ಆಡಳಿತದ ನೇತೃತ್ವದಲ್ಲಿ ಮುಗಿದು ಹೋದ ಕಾಮಗಾರಿಗಳಿಗೆ ಟೆಂಡರ್ ನಿರ್ವಹಿಸುವ ಮೂಲಕ ನಗರಸಭೆಯಲ್ಲಿ ಮತ್ತೊಂದು ವಿವಾದ ತಲೆ ಎತ್ತುವಂತೆ ಮಾಡಿದೆ.
ಜು..೩೧ ರಿಂದ ಆ.೦೧ ರ ಅವಧಿಯಲ್ಲಿ ಕರೆಯಲಾದ ಇ-ಟೆಂಡರ್‌ನಲ್ಲಿ ೨ ಲಕ್ಷದಿಂದ ೩, ೭, ೧೮ ಲಕ್ಷ ಮೊತ್ತದ ಕಾಮಗಾರಿಗಳು ಸೇರಿದಂತೆ ಒಟ್ಟು ೨.೫ ರಿಂದ ೩ ಕೋಟಿ ವರೆಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಫಾರ್ಮ್‌ನಲ್ಲಿ ಉಪ ವರ್ಗ ಕಾಲಂನಲ್ಲಿ ಇತರೆ ಎಂದು ನಮೂದಿಸಿರುವುದು ಈ ಕಾಮಗಾರಿಗಳು ಪೂರ್ಣಗೊಂಡಿವೆ ಎನ್ನುವ ಅನುಮಾನವನ್ನು ಬಲಗೊಳಿಸಿದೆ. ಉಪ ವಿಭಾಗದ ಕಾಲಂನಲ್ಲಿ ರಸ್ತೆ ಕಾಮಗಾರಿ ಇದ್ದರೆ ಆರ್‌ಡಿ ಎಂದು, ಸ್ಟಾರ್ಮ್ ವಾಟರ್ ಡ್ರೇನ್ ಕಾಮಗಾರಿ ಇದ್ದರೆ ಎಸ್‌ಡಬ್ಲ್ಯೂಡಿ ಎಂದು ಮತ್ತು ಪೈಪ್ ಲೈನ್ ಕಾಮಗಾರಿ ಇದ್ದರೆ, ಡಬ್ಲ್ಯೂಎಸ್ ಎಂದು ನಮೂದಿಸಲಾಗುತ್ತದೆ.
ಆದರೆ, ನಗರಸಭೆಯಿಂದ ಕರೆದಂತಹ ಎಲ್ಲಾ ಕಾಮಗಾರಿಗಳು ಇತರೆ ಕಾಮಗಾರಿ ಎಂದು ದಾಖಲಿಸಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿದೆ. ಇ-ಟೆಂಡರ್‌ನಲ್ಲಿ ಕರೆಯಲಾದ ಕಾಮಗಾರಿಗಳನ್ನು ಪರಿಶೀಲಿಸಿದರೆ, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿರುವುದು ಸ್ಪಷ್ಟವಾಗಿದೆ. ಮೇಲಾಧಿಕಾರಿಗಳನ್ನು ಈ ಕುರಿತು ವಿಚಾರಿಸಿದಾಗ ಇತರ ಕಾಮಗಾರಿ ಎಂದು ಉಪ ವರ್ಗ ದಾಖಲಿಸುವುದು ನಿಯಮ ಬಾಹೀರವಾಗಿದೆ. ಇತರೆ ಕಾಮಗಾರಿ ಎಂದು ನಮೂದಿಸದೆ, ಕಾಮಗಾರಿಗೆ ಸಂಬಂಧಿಸಿದ ವಿಷಯ ಇಲ್ಲಿ ದಾಖಲಿಸಬೇಕು.
ಇ-ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತೇದಾರರು ಟೆಂಡರ್ ನಮೂದಿಸಲು ಸ್ಪಷ್ಟ ಮಾಹಿತಿ ನೀಡಬೇಕಾಗುತ್ತದೆ. ಗುತ್ತೇದಾರರಿಗೆ ಗೊಂದಲ ಆಗುವ ರೀತಿಯಲ್ಲಿ ಮತ್ತು ಬೇರೆ ಯಾರಾದರೂ ಟೆಂಡರ್ ನಮೂದಿಸಿದರೆ, ಅದನ್ನು ತಿರಸ್ಕರಿಸುವ ತಾಂತ್ರಿಕ ಉದ್ದೇಶದಿಂದ ಈ ರೀತಿ ದಾಖಲಿಸಲಾಗಿದೆ ಎನ್ನುವಂತಹ ಅಭಿಪ್ರಾಯ ಮೇಲಾಧಿಕಾರಿಗಳಿಂದ ವ್ಯಕ್ತಗೊಂಡಿದೆ. ಈ ಟೆಂಡರ್‌ನಲ್ಲಿ ಬೀದಿ ದೀಪ ನಿರ್ವಹಣೆಗೆ ಸಂಬಂಧಿಸಿ ಮೂರು ಟೆಂಡರ್ ಕರೆಯಲಾಗಿದೆ. ೪೪, ೪೩ ಹಾಗೂ ೪೪ ಲಕ್ಷದ ಮೊತ್ತದ ಈ ಟೆಂಡರ್ ಕರೆಯಲಾಗಿದೆ.
ಆದರೆ, ಈಗಾಗಲೇ ಚೈತನ್ಯ ಎಲೆಕ್ಟ್ರಿಕಲ್ಸ್ ಅವರು ಬೀದಿ ದೀಪ ನಿರ್ವಹಣೆ ನಿರ್ವಹಿಸುತ್ತಿರುವಾಗ ಮತ್ತೆ ಟೆಂಡರ್ ಕರೆಯುವ ಉದ್ದೇಶ ಅನೇಕ ಅನುಮಾನಗಳಿಗೆ ಎಡೆ ಮಾಡಿದೆ. ಡಾ.ಬಾಬು ಜಗಜೀವನರಾಮ್ ವೃತ್ತದಿಂದ ದರ್ಗಾದವರೆಗೆ ಜಂಗಲ್ ಕಟ್ಟಿಂಗ್‌ಗೆ ೨ ಲಕ್ಷ ರೂ. ಟೆಂಡರ್ ಇಡಲಾಗಿದೆ. ನಗರದ ಹೃದಯ ಭಾಗದಲ್ಲಿ ಜಂಗಲ್ ಇರುವುದಾದರು ಎಲ್ಲಿ ಎನ್ನುವ ಪ್ರಶ್ನೆಗೆ ನಗರಸಭೆ ಉತ್ತರಿಸಬೇಕಾಗಿದೆ. ಟಿಪ್ಪು ಸುಲ್ತಾನ್ ರಸ್ತೆ ಸಂಪೂರ್ಣ ಕಾಮಗಾರಿ ಪೂರ್ಣಗೊಂಡು ರಸ್ತೆ ಉದ್ಘಾಟನೆಗೊಂಡ ನಂತರ ಈಗ ಆರ್‌ಸಿಸಿ ಚರಂಡಿ ನಿರ್ಮಾಣಕ್ಕಾಗಿ ೧೨ ಲಕ್ಷ ಟೆಂಡರ್ ಕರೆಯಲಾಗಿದೆ.
ಒಟ್ಟಾರೆಯಾಗಿ ನಗರಸಭೆಯಿಂದ ಕರೆಯಲಾದ ಈ ಟೆಂಡರ ಪ್ರಕ್ರಿಯೆ ಅನೇಕ ಅನುಮಾನಗಳಿಗೆ ದಾರಿ ಮಾಡಿದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸುವ ಅಗತ್ಯತೆ ಬಗ್ಗೆ ಜಿಲ್ಲಾಡಳಿತ ಗಮನ ಹರಿಸುವುದೆ?. ನಗರಸಭೆ ಸದಸ್ಯರ ಮಧ್ಯೆಯೂ ಈ ಕಾಮಗಾರಿಗೆ ಸಂಬಂಧಿಸಿ ಅನೇಕ ಆಕ್ಷೇಪಗಳಿದ್ದು, ಉದ್ದೇಶಿತ ಟೆಂಡರ್ ಪ್ರಕ್ರಿಯೆಯನ್ನು ತಡೆದು, ಕಾಮಗಾರಿ ಪೂರ್ಣಗೊಂಡಿದೆಯೆ, ಇಲ್ಲವೆ ಎನ್ನುವುದನ್ನು ತನಿಖೆ ನಡೆಸಿ, ಮುಂದಿನ ಪ್ರಕ್ರಿಯೆ ನಿರ್ವಹಿಸಬೇಕೆಂದು ಕೆಲ ಸದಸ್ಯರು ಆಗ್ರಹಿಸಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡುವ ಬಗ್ಗೆಯೂ ಪರಿಶೀಲಿಸಲಾಗುತ್ತಿದ್ದು, ಇದು ಯಾವ ರೀತಿಯ ಸಂಘರ್ಷಕ್ಕೆ ದಾರಿ ಮಾಡುತ್ತದೆಂದು ಕಾದು ನೋಡಬೇಕಾಗಿದೆ.