ನಗರಸಭೆ ಪರಿಸರ ಅಭಿಯಂತರ ಜೈಪಾಲರೆಡ್ಡಿರಿಗೆ ನೋಟೀಸ್

  • ಯಾವ ಅಧಿಕಾರಿಯ ಸಂಪರ್ಕಕ್ಕೂ ಬಾರದೇ ಮೊಬೈಲ್ ಸ್ವಿಚ್ ಆಫ್
    ರಾಯಚೂರು.ಮೇ.೨೦- ನಗರದಲ್ಲಿ ಸ್ವಚ್ಛತೆ ನಿರ್ವಹಣೆ ನಿರ್ಲಕ್ಷ್ಯೆ ಹಿನ್ನೆಲೆಯಲ್ಲಿ ನಗರಸಭೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಜೈಪಾಲ ರೆಡ್ಡಿ ಅವರಿಗೆ ಮೇ.೧೯ ರಂದು ನೋಟೀಸ್ ಜಾರಿಗೊಳಿಸಿ, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳದಿದ್ದರೇ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ಅನ್ವಯ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕಾಗುತ್ತದೆಂದು ಪೌರಾಯುಕ್ತ ವೆಂಕಟೇಶ ಅವರು ಎಚ್ಚರಿಸಿದ್ದಾರೆ.
    ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರು ಸಂಜೆವಾಣಿ ಪತ್ರಿಕೆಯಲ್ಲಿ ಮೇ.೧೫ ರ ಹೇಳಿಕೆ ಮತ್ತು ಸದಸ್ಯರು ಮೌಖಿಕ ದೂರು, ರಜಾಕ್ ಉಸ್ತಾದ್ ಅವರ ದೂರಿನ ಹಿನ್ನೆಲೆಯಲ್ಲಿ ಈ ನೋಟೀಸ್ ಜಾರಿಗೊಳಿಸಲಾಗಿದೆ. ನಗರದಲ್ಲಿ ಕೊರೊನಾ ಹಾವಳಿ ತೀವ್ರವಾಗಿದೆ. ಮತ್ತೊಂದು ಕಡೆ ಮಲೇರಿಯಾ, ಡೆಂಗ್ಯೂ ಪ್ರಕರಣಗಳು ಹರಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದ್ದರೂ, ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯೆ ಕಂಡು ಬಂದಿರುವುದರಿಂದ ತಮ್ಮ ವಿರುದ್ಧ ಕ್ರಮಕ್ಕೆ ಏಕೆ ಶಿಫಾರಸ್ಸು ಮಾಡಬಾರದು.
    ನಗರದ ರಸ್ತೆ ಮತ್ತು ವೃತ್ತಗಳಲ್ಲಿ ಅನೇಕ ಕಡೆ ಸ್ವಚ್ಛತೆ ನಿರ್ಲಕ್ಷ್ಯಿಸಲಾಗಿದೆ. ರೋಗ ನಿಯಂತ್ರಣಕ್ಕೆ ಅಗತ್ಯವಾದ ಮುಂಜಾಗ್ರತಾ ಕ್ರಮಗಳಿಗಾಗಿ ತಮಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೇ, ನಾನು ಸೇರಿದಂತೆ ಅಪರ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರ ಹಾಗೂ ಸದಸ್ಯರು ತಮ್ಮನ್ನು ಸಂಪರ್ಕಿಸಲು ಪದೇ ಪದೇ ಕರೆ ಮಾಡಿದರೂ, ನಿಮ್ಮ ಮೊಬೈಲ್ ಸ್ವಿಚ್ ಆಫ್ ಎಂಬ ಸಂದೇಶ ಬರುತ್ತದೆ. ನಿಮ್ಮ ಕರ್ತವ್ಯ ಲೋಪ, ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯೆ ಹಿನ್ನೆಲೆಯಲ್ಲಿ ಈ ನೋಟೀಸ್ ಜಾರಿಗೊಳಿಸಲಾಗುತ್ತಿದೆ. ನೋಟೀಸ್ ನೀಡಿದ ಮೂರು ದಿನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಘನತ್ಯಾಜ್ಯ ವಿಲೇವಾರಿಯಾಗದಿದ್ದರೇ, ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ.
    ಅಲ್ಲದೇ, ಪೌರ ಕಾರ್ಮಿಕರಿಗೆ ಮಾರ್ಚ್ ಮತ್ತು ಏಪ್ರೀಲ್ ವೇತನ ಇದುವರೆಗೂ ತಯಾರಿಸಿ ಸಲ್ಲಿಸಿರುವುದಿಲ್ಲ. ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ, ಸಾಂಕ್ರಾಮಿಕ ರೋಗಗಳಿಗೆ ನಿಮ್ಮನ್ನೇ ನೇರ ಹೊಣೆಯನ್ನಾಗಿ ಮಾಡಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರನ್ವಯ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕಾಗುತ್ತದೆಂದು ಎಚ್ಚರಿಸಲಾಗಿದೆ.