ನಗರಸಭೆ : ಕಾಂಗ್ರೆಸ್ಸಿಗೆ ಬಹುಮತ, ಬಿಜೆಪಿ ಕೈಯಲ್ಲಿ ಆಡಳಿತ – ಎಲ್ಲಾ ಉಲ್ಟಾ, ಪಲ್ಟಾ

ಬಿಜೆಪಿ ಸದಸ್ಯರ ಸಡಗರ – ಕಾಂಗ್ರೆಸ್ ಪಕ್ಷೇತರ ಸದಸ್ಯರು ತೆರೆಮರೆಗೆ : ಆಂತರಿಕ ಅಸಮಾಧಾನ
ರಾಯಚೂರು.ಜೂ.೦೮- ಬಹುಮತ ಹೊಂದಿದ ಕಾಂಗ್ರೆಸ್, ಪಕ್ಷೇತರರು ತೆರೆಮರೆಗೆ ಸೆರೆದು ಅಲ್ಪಮತದ ಬಿಜೆಪಿ ಸದಸ್ಯರು ಆಡಳಿತ ನಿರ್ವಹಿಸುವ ಉಲ್ಟಾ, ಪಲ್ಟಾ ವ್ಯವಸ್ಥೆಯಲ್ಲಿ ಈಗ ನಗರಸಭೆ ಇದೆ.
ಕಳೆದ ೧೫ ದಿನಗಳಲ್ಲಿ ನಡೆದ ಕ್ಷಿಪ್ರ ರಾಜಕೀಯ ಬದಲಾವಣೆಯಲ್ಲಿ ಬಹುಮತ ಹೊಂದಿದ ಕಾಂಗ್ರೆಸ್ ಪಕ್ಷದ ಸದಸ್ಯರು ತಳಮಳಕ್ಕೆಡೆಯಾಗಿದ್ದರೇ, ಬಿಜೆಪಿಯ ಸದಸ್ಯರು ಅಧಿಕಾರದ ಸಡಗರದಲ್ಲಿದ್ದಾರೆ. ನಗರಸಭೆಯ ೩೫ ಸದಸ್ಯರಲ್ಲಿ ೧೧ ಕಾಂಗ್ರೆಸ್ ಸದಸ್ಯರು ಹಾಗೂ ೮ ಜನ ಪಕ್ಷೇತರರು ಮತ್ತು ಜೆಡಿಎಸ್‌ನ ಓರ್ವ ಸದಸ್ಯರು ಸೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡೊಡೆದು ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಕಾಂಗ್ರೆಸ್ ೬ ತಿಂಗಳಲ್ಲಿಯೇ ನಗರಸಭೆಯಲ್ಲಿ ಮೂಲೆ ಗುಂಪಾಗುವಂತಾಗಿದೆ.
ಬಹುಮತ ಹೊಂದಿದ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಕಡಿವಾಣ ಹಾಕಿದ ಬಿಜೆಪಿ, ಈಗ ನಗರಸಭೆಯಲ್ಲಿ ತಮ್ಮದೇ ನಿರ್ಧಾರಗಳೇ ಅಂತಿಮ ಎನ್ನುವ ಪ್ರಾಬಲ್ಯ ಸಾಧಿಸುವ ಮೂಲಕ ಕಾಂಗ್ರೆಸ್ ಬಹುಮತ ಲೆಕ್ಕಕ್ಕುಂಟು, ಆಟಕ್ಕಿಲ್ಲ ಎನ್ನುವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಇತ್ತೀಚಿಗೆ ನಡೆದ ಬಜೆಟ್ ಸಭೆಯ ಪೂರ್ವ ಕಾಂಗ್ರೆಸ್ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಮ್ಮುಖದಲ್ಲಿ ತಮ್ಮ ಸಮಸ್ಯೆಗಳನ್ನು ಚರ್ಚಿಸಿದ್ದರು. ಈ ಸಭೆಗೆ ಅಧ್ಯಕ್ಷರನ್ನು ಕರೆಯುವಂತೆ ಒತ್ತಾಯಿಸಿದ್ದರು. ಸ್ವತಃ
ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಬಿ.ವಿ.ನಾಯಕ ಅವರು, ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅವರಿಗೆ ಕರೆ ಮಾಡಿದರೂ, ಸಭೆಗೆ ಆಗಮಿಸಿರಲಿಲ್ಲವೆಂದು ಹೇಳಲಾಗಿತ್ತು.
ಇದರ ಬೆನ್ನಹಿಂದೆಯೇ ಬಜೆಟ್ ಪೂರ್ವ ಭೋಜನಾಕೂಟವೊಂದನ್ನು ಖಾಸಗಿ ಹೋಟೆಲ್‌ವೊಂದರಲ್ಲಿ ನಿರ್ವಹಿಸಲಾಯಿತು. ಕೇವಲ ಬಿಜೆಪಿ ಸದಸ್ಯರು ಮಾತ್ರ ಅಧ್ಯಕ್ಷರು ಉಪಸ್ಥಿತರಿರುವ ಭೋಜನಾಕೂಟಕ್ಕೆ ಆಹ್ವಾನಿತರಾಗಿರುವುದು ನಗರಸಭೆ ರಾಜಕೀಯದ ಬದಲಾವಣೆಗೆ ಮುನ್ಸೂಚನೆಯಾಗಿತ್ತು. ಇದಾದ ನಂತರ ಬಜೆಟ್ ಸಭೆ ನಿರ್ವಹಿಸಲಾಯಿತು. ಬಜೆಟ್ ಸಭೆಯ ಬೆನ್ನಹಿಂದೆಯೇ ಸಾಮಾನ್ಯ ಸಭೆ ಕರೆಯಲಾಗಿದೆ. ಇದೇ ಜೂ.೧೧ ರಂದು ನಡೆಯುವ ಸಾಮಾನ್ಯ ಸಭೆ ಬಗ್ಗೆ ಸ್ವತಃ ನಗರಸಭೆ ಸದಸ್ಯರಾದ ಉಪಾಧ್ಯಕ್ಷರಿಂದಿಡಿದು ಯಾವೊಬ್ಬ ಸದಸ್ಯರಿಗೂ ಮಾಹಿತಿ ಇರಲಿಲ್ಲ ಎನ್ನುವುದು ನಗರಸಭೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿಗೆ ನಿದರ್ಶನವಾಗಿದೆ.
ಬಿಜೆಪಿ ಸದಸ್ಯರು ಮುಂದಿನ ಸಭೆಯಲ್ಲಿ ಕೈಗೊಳ್ಳಬೇಕಾದ ತೀರ್ಮಾನ ಮತ್ತು ಚರ್ಚಿಸಬೇಕಾದ ಅಜೆಂಡಗಳ ಬಗ್ಗೆ ಪರಸ್ಪರ ಸಮಾಲೋಚನೆ ನಂತರ ಶಾಸಕ ಡಾ.ಶಿವರಾಜ ಪಾಟೀಲ್ ಅವರ ಮೂಲಕ ಸಭೆ ನಿರ್ವಹಣೆಗೆ ಮೇಲಾಧಿಕಾರಿಗಳಿಂದ ಅನುಮತಿ ಪಡೆಯಲಾಯಿತು. ಈ ಸಭೆ ನಿರ್ವಹಣೆ ಮತ್ತು ಅಧ್ಯಕ್ಷರು ಬಿಜೆಪಿಯೊಂದಿಗೆ ನಿಕಟವರ್ತಿಯಾಗಲು ಕಾಂಗ್ರೆಸ್ಸಿನ ಪ್ರಮುಖ ರಾಜ್ಯ ಮಟ್ಟದ ನಾಯಕರೊಬ್ಬರು ಮಧ್ಯವರ್ತಿಯಾಗಿರುವುದು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂಲೆ ಗುಂಪಿಗೆ ಅವರದ್ದೆ ಪಕ್ಷದ ನಾಯಕರು ವೇದಿಕೆ ಸಿದ್ಧಗೊಳಿಸುತ್ತಿರುವುದು ನಗರಸಭೆಯ ಈ ಉಲ್ಟಾ, ಪಲ್ಟಾ ಆಡಳಿತ ಬಹಿರಂಗಗೊಳಿಸಿದೆ.
ಸಾಮಾನ್ಯ ಸಭೆ ಸೇರಿದಂತೆ ನಗರಸಭೆಗೆ ಮುಂದಿನ ದಿನಗಳಲ್ಲಿ ಆಡಳಿತವನ್ನು ಬಿಜೆಪಿ ಮತ್ತು ಭಿನ್ನಬಡದ ಕಾಂಗ್ರೆಸ್ ನಾಯಕ ಮುಖಂಡರೊಬ್ಬರ ಸೂಚನೆಯಂತೆ ನಿರ್ವಹಿಸಲು ಆಂತರಿಕ ತೀರ್ಮಾನ ಕೈಗೊಳ್ಳಲಾಗಿದೆಂದು ಹೇಳಲಾಗುತ್ತಿದೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೋಸರಾಜು ಅವರ ರಾಜಕೀಯ ಸ್ಪರ್ಧೆಯ ಸಾಧ್ಯತೆಗಳಿಗೆ ಈಗಿಂದಲೇ ಚೆಕ್ ನೀಡುವ ಪ್ರಯತ್ನ ಆರಂಭಗೊಂಡಿವೆ.
ರಾಜ್ಯ ಸರ್ಕಾರದ ಪ್ರಭಾವದ ಮೂಲಕ ಶಾಸಕ ಡಾ.ಶಿವರಾಜ ಪಾಟೀಲ್ ಅವರು ನಗರಸಭೆ ಅಧಿಕಾರಿಗಳನ್ನು ನಿಯಂತ್ರಿಸಿದರೇ, ಮತ್ತೊಂದು ಕಡೆ ಬಿಜೆಪಿ ಸದಸ್ಯರು ಅಧ್ಯಕ್ಷರನ್ನು ನಿಯಂತ್ರಿಸುವ ಮೂಲಕ ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರೂ, ಆಡಳಿತ ಮಾತ್ರ ಬಿಜೆಪಿಯ ಸೂಚನೆಗಳಂತೆ ನಡೆಸಲು ನಗರಸಭೆಯನ್ನು ರಾಜಕೀಯ ಪ್ರಯೋಗ ಶಾಲೆಯನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಇದರ ಮೇಲುಸ್ತುವಾರಿಯನ್ನು ಬೋಸರಾಜು ಕಟ್ಟಾ ವಿರೋಧಿ ಬಣದ ಕಾಂಗ್ರೆಸ್ ಮುಖಂಡರಿಗೆ ನೀಡಲಾಗಿದೆ.
ನಗರಸಭೆ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಆರು ತಿಂಗಳ ನಂತರ ಅಧ್ಯಕ್ಷರ ಬದಲಾವಣೆಯ ವಿಷಯವನ್ನು ಕಾಂಗ್ರೆಸ್ ಸದಸ್ಯರು ಹೈಕಮಾಂಡ್ ಮುಂದೆ ಧ್ವನಿಯೆತ್ತಿರುವುದೇ ಈ ಬದಲಾವಣೆಗೆ ಕಾರಣವೆಂದು ಹೇಳಲಾಗುತ್ತಿದೆ. ಅಧ್ಯಕ್ಷರು ರಾಜೀನಾಮೆ ನೀಡದಿದ್ದರೇ, ಅವಿಶ್ವಾಸ ಮಂಡನೆಯ ಪ್ರಸ್ತಾಪವೂ ಕಾಂಗ್ರೆಸ್ ಸದಸ್ಯರಿಂದ ಮಾಡಲಾಗಿತ್ತು ಎಂದು ಹೇಳಲಾಗಿದೆ. ಮುಂಬರುವ ದಿನಗಳಲ್ಲಿ ಅವಿಶ್ವಾಸ ತಂತ್ರ ವಿಫಲಗೊಳಿಸಲು ಅಧ್ಯಕ್ಷರು ಈ ಪರ್ಯಾಯ ಪ್ರತಿತಂತ್ರ ಹೂಡಿದ್ದಾರೆಯೇ? ಎನ್ನುವುದು ಈಗ ರಾಜಕೀಯ ವಲಯದ ಚರ್ಚೆಯ ಭಾಗವಾಗಿದೆ.
ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಕನಿಷ್ಟ ೨೪ ಸದಸ್ಯರ ಬೆಂಬಲ ಅಗತ್ಯವಾಗಿದೆ. ಬಿಜೆಪಿ ಸದಸ್ಯರ ಸಹಕಾರವಿಲ್ಲದೇ, ಅವಿಶ್ವಾಸ ಅಸಾಧ್ಯ ಎನ್ನುವ ಮನವರಿಕೆಯಿಂದ ನಗರಸಭೆ ಸದಸ್ಯರು ಕಾಂಗ್ರೆಸ್ ಸದಸ್ಯರಾಗಿದ್ದರೂ, ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಜಕೀಯ ಚಟುವಟಿಕೆಗಳಿಗೆ ಬ್ರೇಕ್ ಹಾಕಲು, ನಗರಸಭೆ ಅಧ್ಯಕ್ಷರನ್ನೇ ದಾಳವನ್ನಾಗಿ ಬಿಜೆಪಿ ಮುಂದಿಟ್ಟಿದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಅತಂತ್ರ ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರೂ, ಬಿಜೆಪಿಯ ರಾಜಕೀಯ ತಂತ್ರದ ಪರಿಣಾಮ ತಮ್ಮದೇ ಪಕ್ಷದ ಅಧ್ಯಕ್ಷರ ಅಧಿಕಾರವಿದ್ದರೂ, ಆಡಳಿತ ನಿರ್ವಹಣೆಯಿಂದ ಕಾಂಗ್ರೆಸ್ ಹೊರಗುಳಿಯುವಂತಾಗಿರುವ ಈ ರಾಜಕೀಯ ಅಸಹಾಯಕತೆಯಿಂದ ಚೇತರಿಸಿಕೊಳ್ಳಲು ಯಾವ ಪ್ರತಿತಂತ್ರ ಹೂಡಲಿದೆ ಎಂದು ಕಾದು ನೋಡಬೇಕಾಗಿದೆ.