ನಗರಸಭೆ : ಈ.ವಿನಯ ನೇತೃತ್ವ – ಸ್ವಚ್ಛತೆ, ಸ್ಯಾನಿಟೈಜೇಷನ್

ಕೊರೊನಾ ಸೋಂಕು ನಿರ್ಮೂಲನೆಗೆ ಭಾರೀ ಕಸರತ್ತು
ರಾಯಚೂರು.ಮೇ.೨೯- ಕೊರೊನಾ ಹಿನ್ನೆಲೆಯಲ್ಲಿ ನಗರದಲ್ಲಿ ಮಹಾಮಾರಿ ಕಂಟಕ ತಪ್ಪಿಸಲು ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅವರ ನೇತೃತ್ವದಲ್ಲಿ ಸ್ಯಾನಿಟೈಜೇಷನ್ ಮತ್ತು ಸ್ವಚ್ಛತಾ ಕಾರ್ಯವನ್ನು ತೀವ್ರಗೊಳಿಸಲಾಗಿದೆ.
ದಿನದ ೧೨ ಘಂಟೆಗಳ ಕಾಲ ನಿರಂತರವಾಗಿ ನಗರಸಭೆ ನಗರದಲ್ಲಿ ಸ್ವಚ್ಛತೆ, ಸ್ಯಾನಿಟೈಜೇಷನ್ ಹಾಗೂ ಆರೋಗ್ಯ ಇನ್ನಿತರ ಕ್ರಮಗಳನ್ನು ಮುಂದುವರೆಸಿದೆ. ಸೋಂಕಿತರ ಪ್ರತಿಯೊಂದು ಮನೆಗಳನ್ನು ಗುರುತಿಸಿ, ತಕ್ಷಣವೇ ಆ ಮನೆಗಳನ್ನು ಸ್ವಚ್ಛಗೊಳಿಸುವ ಮೂಲಕ ಸೋಂಕು ಹರಡದಂತೆ ತಡೆಯುವ ಮಿಂಚಿನ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ನಿನ್ನೆ ರಾತ್ರಿ ನ್ಯಾಯಮೂರ್ತಿಗಳ ಬಂಗಲಗಳಲ್ಲಿ ಫಾಗಿಂಗ್ ಮತ್ತು ಸ್ವಚ್ಛತಾ ಕಾರ್ಯ ನಿರ್ವಹಿಸಲಾಯಿತು. ಅಲ್ಲದೇ ವಾರ್ಡ್ ೧೫ ರ ಜಾನಿ ಮೊಹಲ್ಲಾ, ನೇತಾಜಿ ನಗರ, ಜೆಂಡಾ ಕಟ್ಟೆ, ಬ್ರಾಹ್ಮಣ ವಾಡಿ, ಹುಜ್ರಾ ಮೊಹಲ್ಲಾಗಳಲ್ಲಿ ಫಾಗಿಂಗ್ ಕಾರ್ಯ ನಿರ್ವಹಿಸಲಾಯಿತು.
ಇಂದು ಮುಂಜಾನೆ ಜಿಲ್ಲಾ ನ್ಯಾಯಾಲಯ, ಕೃಷಿ ಕಾಲೇಜು, ಬೋಸರಾಜು ನಿವಾಸಗಳಲ್ಲಿ ಸ್ಯಾನಿಟೈಜೇಷನ್ ನಡೆಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ಮೂಲಕ ನಗರದಲ್ಲಿ ಕೊರೊನಾ ಹರಡದಂತೆ ತೀವ್ರ ಗಮನ ಹರಿಸಲಾಗುತ್ತದೆ. ನಗರದಲ್ಲಿ ೨೮ ಕಡೆ ತರಕಾರಿ ಮತ್ತು ಹಣ್ಣಿನ ಮಾರಾಟ ಕೇಂದ್ರಗಳ ಸ್ವಚ್ಛತೆಗೂ ವಿಶೇಷ ಗಮನ ನೀಡಲಾಗಿದೆ. ಇಂದು ವಾರ್ಡ್ ೧೨ ರ ಮಂಗಳವಾರ ಪೇಟೆಯಲ್ಲಿ ಅಧ್ಯಕ್ಷ ಈ.ವಿನಯಕುಮಾರ ಅವರ ನೇತೃತ್ವದಲ್ಲಿ ಆಯುಕ್ತ ವೆಂಕಟೇಶ ಹಾಗೂ ಪ್ರೋಬೇಷನರಿ ಆಯುಕ್ತರಾದ ಪಲ್ಲವಿ ಹಾಗೂ ಪರಿಸರ ಅಭಿಯಂತರ ಜಯಪಾಲ ಸೇರಿದಂತೆ ಅನೇಕರು ಅಗ್ನಿಶಾಮಕದಳದಿಂದ ಸ್ಯಾನಿಟೈಜೇಷನ್ ಕೈಗೊಳ್ಳಲಾಯಿತು.
ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ಮಾಸ್ಕ್ ಮತ್ತು ಸೋಂಕಿತರ ಮನೆ ಸ್ವಚ್ಛಗೊಳಿಸುವವರಿಗೆ ಪಿಪಿಇ ಕಿಟ್ ನೀಡುವುದು ಮಾತ್ರವಲ್ಲದೇ, ಕೊರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡುವ ಕಾರ್ಯಕ್ರಮವೂ ಕಾಯಕ ಮತ್ತು ಆದ್ಯತೆ ನೀಡಲಾಗಿದೆ. ಒಟ್ಟಾರೆಯಾಗಿ ನಗರಸಭೆ ನಗರದಲ್ಲಿ ತನ್ನ ಸ್ವಚ್ಛತಾ ಕಾರ್ಯವನ್ನು ಬಿರುಸಿನಿಂದ ಆರಂಭಿಸುವ ಮೂಲಕ ಕೊರೊನಾ ಮಹಾಮಾರಿಯ ಸೋಂಕು ನಿರ್ಮೂಲನೆಗೆ ಭಾರೀ ಪ್ರಯತ್ನ ನಡೆಸಿದೆ.