ನಗರಸಭೆ ಆಡಳಿತ, ಬಿಜೆಪಿ ಅಂಬೇಡ್ಕರ್ ವಿರೋಧಿ ಅಲ್ಲ

ಚಾಮರಾಜನಗರ, ನ.13:- ಬಿಜೆಪಿ ಹಾಗೂ ನಗರಸಭೆ ಯಾವುದೇ ಅಂಬೇಡ್ಕರ್ ವಿರೋಧಿಗಳಲ್ಲ. ಇದೊಂದು ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ನಟರಾಜು ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮೂರಿನ ಯುವ ನಾಯಕ ಜಿಲ್ಲೆಯ ರಾಯಭಾರಿ ಪುನೀತ್ ನಿಧನದ ಗೌರವಾರ್ಥ ಅವರ ಹೆಸರನ್ನು ಡಿವೀಯೇಷನ್ ರಸ್ತೆಗೆ ನಾಮಕರಣ ಮಾಡುವಂತೆ ಪುನೀತ್ ಅಭಿಮಾನಿಗಳು, ಕನ್ನಡ ಸಂಘಟನೆಗಳು, ಅಂಬೇಡ್ಕರ್ ಸೇನೆ ಸೇರಿದಂತೆ ಅನೇಕ ಸಂಘಟನೆಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿಶೇಷ ಸಭೆಯಲ್ಲಿ ವಿಚಾರವನ್ನಿಟ್ಟು ಅನುಮೋದನೆ ಪಡೆದುಕೊಳ್ಳಲು ಮುಂದಾಗಿದ್ದೆವು ಹೊರತು ಅಂಬೇಡ್ಕರ್ ವಿರೋಧಿಗಳಲ್ಲ.
ಕಳೆದ 2015ರಲ್ಲಿ ಡಿವಿಯೇಷನ್ ರಸ್ತೆಯ ಒಂದು ಬದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿಡಲು ಪ್ರಸ್ತಾಪವಾಗಿ ನಗರಸಭೆಯಲ್ಲಿ ಅನುಮೋದನೆಗೊಂಡು ಜಿಲ್ಲಾಧಿಕಾರಿಗಳ ಒಪ್ಪಿಗೆಗೆ ಕಳುಹಿಸಲಾಗಿದೆ ಎಂಬ ಮಾಹಿತಿಯನ್ನು ಅಂದು ಸಭೆಯಲ್ಲಿ ಎಸ್‍ಡಿಪಿಐನ ಸದಸ್ಯ ಮಹೇಶ್ ತಿಳಿಸಿದ್ದರು. ಈ ಸಂದರ್ಭದಲ್ಲಿ ಸದಸ್ಯರ ನಡುವೆ ಚರ್ಚೆಗಳು ನಡೆದು, ಕಳೆದ 6 ವರ್ಷಗಳಿಂದ ಅನುಮೋದನೆ ಗೊಂಡಿದ್ದರು ಏಕೆ ನಾಮಫಲಕ ಅಳವಡಿಸಿಲ್ಲ. ಈ ಬಗ್ಗೆ ದಾಖಲೆ ಇದ್ದರೆ ಸಭೆಗೆ ನೀಡಿ ಎಂಬ ಅಭಿಪ್ರಾಯಗಳು ಸದಸ್ಯರಿಂದ ಕೇಳಿ ಬಂದವು. ಅಂತಿಮವಾಗಿ ಸಾಮಾನ್ಯ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ಮಾಡಿ, ಅಂತಿಮ ನಿರ್ಧಾರ ಕೈಗೊಳ್ಳಲು ಮುಂದೂಡಲಾಯಿತು. ಆದರೆ, ಕೆಲವರು ಇದನ್ನು ತಪ್ಪಾಗಿ ಮಾಧ್ಯಮಗಳಿಗೆ ನೀಡುವ ಮೂಲಕ ಬಿಜೆಪಿ ಮತ್ತು ನಗರಸಭೆ ಡಾ. ಬಿ.ಆರ್. ಅಂಬೇಡ್ಕರ್ ವಿರೋಧ ಎಂಬಂತೆ ಬಿಂಬಿಸಲು ಮುಂದಾಗಿರುವುದು ಸರಿಯಲ್ಲ ಎಂದರು.
ನಾನು ಸಹ ಅಂಬೇಡ್ಕರ್ ಫಲಾನುಭವಿ: ನಗರಸಭೆ ಅಧ್ಯಕ್ಷೆಯಾಗಲು ಹಾಗೂ ಸದಸ್ಯೆಯಾಗಿ ಆಯ್ಕೆಯಾಗಲು ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಕಾರಣವಾಗಿದೆ. ಅಂಬೇಡ್ಕರ್ ಅವರು ನೀಡಿದ ಮಹಿಳಾ ಮೀಸಲಾತಿ ಪರಿಣಾಮ ಓರ್ವ ಮಹಿಳೆ ಅಧ್ಯಕ್ಷೆಯಾಗಲು ಸಾಧ್ಯವಾಗಿದೆ. ಹೀಗಾಗಿ ಅವರಿಗೆ ಅಪಮಾನ ಮಾಡುವ ಉದ್ದೇಶ ನಮಗಾಗಲಿ, ನಮ್ಮ ಬಿಜೆಪಿ ಸದಸ್ಯರಿÀಗಾಗಲಿ ಇಲ್ಲ. ವಿಶ್ವನಾಯಕರಾದ ಅಂಬೇಡ್ಕರ್ ಅವರು ಬಗ್ಗೆ ಬಹಳ ಗೌರವವಿದೆ. ಕೆಲವರು ನಮ್ಮ ಬಿಜೆಪಿ ಪಕ್ಷದ ವರ್ಚಸ್ಸನ್ನು ಹಾಳು ಮಾಡಲು ಪಿತೂರಿ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಅಂತಿಮ ತೀರ್ಮಾನ : ನಗರಸಭೆ ಸಾಮಾನ್ಯ ಸಭೆಗೆ ವಿಚಾರವನ್ನು ಇಡಲಾಗಿದೆ. ಎಲ್ಲಾ ಸದಸ್ಯರ ಒಟ್ಟು ಅಭಿಪ್ರಾಯವನ್ನು ಸಂಗ್ರಹಿಸಿ, ನಗರದ ನಂಜನಗೂಡು ಮುಖ್ಯರಸ್ತೆಯಿಂದ ಆರಂಭಗೊಂಡು ಸೋಮವಾರಪೇಟೆ ಮುಖ್ಯ ರಸ್ತೆಯವರೆಗಿನ ಡಿವೀಯೇಷನ್ ರಸ್ತೆಗೆ ದಿ. ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಈ ಹಿಂದೆ ನಡೆದಿರುವ ಸಭಾ ನಡಾವಳಿ ಮತ್ತು ಈ ಹಿಂದಿನ ಸದಸ್ಯರ ಅಭಿಪ್ರಾಯಗಳು ನಗರಸಭೆ ಕಡತದಲ್ಲಿದ್ದರೆ ಕುಲಂಕುಷವಾಗಿ ಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಒತ್ತಡವು ಸಹ ಇಲ್ಲ. ಪಾರದರ್ಶಕವಾಗಿ ನಗರಸಭೆ ನಡೆದುಕೊಳ್ಳುತ್ತದೆ ಎಂದರು.
ಗೋಷ್ಠಿಯಲ್ಲಿ ನಗರಸಭಾ ಉಪಾಧ್ಯಕ್ಷೆ ಪಿ. ಸುಧಾ, ಸದಸ್ಯರಾದ ಶಿವರಾಜ್, ಕುಮದಾಕೇಶವಮೂರ್ತಿ ಮನೋಜ್ ಪಟೇಲ್ ಇದ್ದರು.