ನಗರಸಭೆ ಆಡಳಿತ ನಿರ್ವಹಣೆ – ಕಾಂಗ್ರೆಸ್ ಸಂಪೂರ್ಣ ವಿಫಲ

ಪೌರಾಯುಕ್ತರ ಮೇಲೆ ಗೂಬೆ – ಜಯಣ್ಣ ಹೇಳಿಕೆ ಹಾಸ್ಯಾಸ್ಪದ
ರಾಯಚೂರು.ಮೇ.೧೭- ನಗರಸಭೆ ಆಡಳಿತ ನಿರ್ವಹಣೆಯಲ್ಲಿ ಕಾಂಗ್ರೆಸ್ಸಿನ ವೈಫಲ್ಯ ಮುಚ್ಚಿಕೊಳ್ಳಲು ಪೌರಾಯುಕ್ತರ ಮೇಲೆ ಗೂಬಿ ಕೂರಿಸುವ ಪ್ರಯತ್ನ ಮಾಡಲಾಗುತ್ತಿದ್ದು, ನಗರಸಭೆ ಸದಸ್ಯರಾದ ಜಯಣ್ಣ ಅವರ ಹೇಳಿಕೆ ಹಾಸ್ಯಸ್ಪದವಾಗಿದೆಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯರಾದ ರವೀಂದ್ರ ಜಲ್ದಾರ್ ಅವರು ಆರೋಪಿಸಿದ್ದಾರೆ.
ಮೇ.೧೨ ರ ಸಭೆ ನಗರಸಭೆಯ ಎಲ್ಲಾ ೩೧ ಸದಸ್ಯರು ಬಹಿಷ್ಕರಿಸಿದ್ದರು. ಕೇವಲ ನಾಲ್ವರು ಮಾತ್ರ ಈ ಸಭೆಗೆ ಹಾಜರಾಗಿದ್ದರು. ನಗರಸಭೆ ಅಧ್ಯಕ್ಷರ ಈ ಸಭೆಯ ಉದ್ದೇಶ ಸದಸ್ಯರಿಗೆ ಮನವರಿಕೆಯಾಗಿದ್ದರಿಂದ ಸಭೆಯಿಂದ ದೂರ ಉಳಿಯಬೇಕಾಯಿತು. ಸ್ವತಃ ನಗರಸಭೆ ಉಪಾಧ್ಯಕ್ಷರು ಈ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ಮೇ.೧೨ ರ ಸಭೆ ಕೇವಲ ಕಾನೂನು ಬಾಹೀರ ಮತ್ತು ಟೆಂಡರ್ ಪ್ರಕ್ರಿಯೆ ಕೈಗೊಳ್ಳದ ಡಿವೈಡರ್, ಬೋರ್‌ವೆಲ್ ಮತ್ತು ಟ್ರ್ಯಾಕ್ಟರ್ ದುರಸ್ತಿಗೆ ಸಂಬಂಧಿಸಿ ೮೦ ಲಕ್ಷ ಬಿಲ್ ಎತ್ತುವಳಿ ಉದ್ದೇಶದಿಂದ ಕೂಡಿತ್ತು ಎನ್ನುವ ಕಾರಣಕ್ಕೆ ಮತ್ತು ಕೊರೊನಾಕ್ಕೆ ಸಂಬಂಧಿಸಿ ಯಾವುದೇ ಚರ್ಚೆ ಈ ಸಭೆ ಒಳಗೊಂಡಿರಲಿಲ್ಲ.
ಡಿಸೆಂಬರ್‌ನಲ್ಲಿ ನಡೆದ ಮೊದಲ ಸಭೆಯಲ್ಲಿ ೩೫ ವಾರ್ಡ್‌ಗಳಿಗೆ ತಲಾ ೧೦ ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ನೀಡುವ ತೀರ್ಮಾನ ನಾಲ್ಕು ತಿಂಗಳಾದರೂ ಕ್ರಿಯಾಯೋಜನೆ ಮಾಡದಿರುವುದು ಆಡಳಿತ ವೈಫಲ್ಯತೆಗೆ ನಿದರ್ಶನವಾಗಿದೆ. ಈ ಎಲ್ಲಾ ಸತ್ಯಗಳನ್ನು ಮುಚ್ಚಿಟ್ಟು ಜಯಣ್ಣ ಅವರು ಪೌರಾಯುಕ್ತರ ಮೇಲೆ ಗೂಬೆ ಕೂರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ನಗರಸಭೆ ಅಧ್ಯಕ್ಷರು, ಸದಸ್ಯರ ವಿಶ್ವಾಸದೊಂದಿಗೆ ಅಭಿವೃದ್ಧಿಗೆ ಸಂಬಂಧಿಸಿ ಅಧಿಕಾರಿಗಳಿಗೆ ಪೌರಾಯುಕ್ತರು ಹಾಗೂ ಸಿಬ್ಬಂದಿಗೆ ಕಾನೂನು ಬದ್ಧ ಸೂಚನೆ ನೀಡಿದರೇ ಪಾಲಿಸುತ್ತಾರೆ. ಆದರೆ, ಕೇವಲ ತಮ್ಮ ವ್ಯವಹಾರಿಕ ಉದ್ದೇಶಕ್ಕೆ ನಗರಸಭೆಯನ್ನು ಬಳಸಿಕೊಳ್ಳುವುದಕ್ಕೆ ಯಾರು ಸಹಕರಿಸುವುದಿಲ್ಲ.
ಮೇ.೧೨ ರ ಸಭೆ ರದ್ದು ರಾಜ್ಯ ಸರ್ಕಾರ ಸುತ್ತೋಲೆಯಂತೆ ಕೈಗೊಳ್ಳಲಾಗಿದೆ. ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಯಾವುದೇ ಸಭೆ, ಸಮಾರಂಭ ನಿರ್ವಹಿಸಬಾರದೆಂಬ ಸೂಚನೆ ಹಿನ್ನೆಲೆಯಲ್ಲಿ, ಪೌರಾಯುಕ್ತರು ಈ ಸಭೆ ರದ್ದು ಪಡಿಸಿದ್ದಾರೆ. ಇದು ಸರ್ಕಾರದ ಆದೇಶವಾಗಿದ್ದರಿಂದ ಜಿಲ್ಲಾಧಿಕಾರಿ, ಪೌರಾಯುಕ್ತರು ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಲೇಬೇಕಾಯಿತು. ಇದನ್ನು ಅರಿಯದೇ, ಪೌರಾಯುಕ್ತರ ಮೇಲೆ ಗೂಬೆ ಕೂರಿಸುವುದು ಸರಿಯಾದ ಕ್ರಮವಲ್ಲ. ನಗರಸಭೆ ಕೋವಿಡ್ ಮತ್ತು ಕುಡಿವ ನೀರಿಗೆ ಸಂಬಂಧಿಸಿ, ಸಭೆ ಕರೆದು ಚರ್ಚಿಸಬೇಕಾಗಿತ್ತು. ಸಾರ್ವಜನಿಕರು ಸಂಕಷ್ಟದಲ್ಲಿದ್ದಾಗ ತಮ್ಮ ವೈಯಕ್ತಿಕ ಬಿಲ್‌ಗಾಗಿ ಸಭೆ ಕರೆಯುವುದು ಎಷ್ಟು ಸಮಂಜಸ.
ನಗರಸಭೆ ಅಧ್ಯಕ್ಷರು ಯಾರದ್ದೋ ಮಾತು ಕೇಳಿ ಸ್ವಹಿತದ ಮೇರೆಗೆ ಅಧಿಕಾರ ನಿರ್ವಹಿಸುತ್ತಿರುವುದು ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆ. ನಗರದಲ್ಲಿ ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕುಡಿವ ನೀರಿಗೆ ಸಂಬಂಧಿಸಿ ಶಾಸಕರ ಮುತುವರ್ಜಿಯಿಂದ ಸದಸ್ಯರು ಪ್ರತಿಭಟನೆ ನಡೆಸಿ, ಕಾಲುವೆ ಮೇಲೆ ತೆರಳಿ, ನೀರಿನ ಪರಿಶೀಲನಾ ಕಾರ್ಯ ನಡೆಸುತ್ತಿಲ್ಲ. ಶಾಸಕರು ಈ ಕಾರ್ಯವನ್ನು ಜನರ ಪರವಾಗಿ ಕೈಗೊಳ್ಳುತ್ತಿದ್ದಾರೆ. ನಗರಸಭೆಯಲ್ಲಿ ಹಸ್ತಕ್ಷೇಪದ ಬಗ್ಗೆ ಮಾತನಾಡುವವರಿಗೆ ಪ್ರತಿಕ್ರಿಯಿಸಿದ ಅವರು, ಶಾಸಕರು ನಗರಸಭೆ ಓರ್ವ ಸದಸ್ಯರಾಗಿದ್ದಾರೆ. ತಮ್ಮ ಕ್ಷೇತ್ರದ ಜನರ ಹಿತಾಸಕ್ತಿ ಮತ್ತು ನಗರಸಭೆ ಆಡಳಿತ ಸರಿದಾರಿಗೆ ತರುವ ಪ್ರಯತ್ನ ನಿರ್ವಹಿಸಿದ್ದಾರೆಂದು ಅವರು ಸಮರ್ಥಿಸಿಕೊಂಡರು.
ಕೇವಲ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಬದಲು ಆಡಳಿತ ಪಕ್ಷದ ಲೋಪದೋಷಗಳ ಬಗ್ಗೆ ಗಮನ ಹರಿಸಿ, ಅಧ್ಯಕ್ಷರ ಕಾರ್ಯವೈಖರಿ ಮತ್ತು ಕಾಂಗ್ರೆಸ್ ಆಡಳಿತದ ವೈಫಲ್ಯಗಳನ್ನು ಸರಿಪಡಿಸಿಕೊಂಡು ಜನಪರ ಆಡಳಿತ ನೀಡಿದರೇ, ಎಲ್ಲರೂ ಸ್ಪಂದಿಸುತ್ತಾರೆ. ಇಲ್ಲದಿದ್ದರೇ ಈ ಗೊಂದಲ ಯಥಾರೀತಿಯಲ್ಲಿ ಮುಂದುವರೆಯುತ್ತದೆಂದು ಅವರು ಹೇಳಿದರು.ನಗರಸಭೆ ಆಡಳಿತ ನಿರ್ವಹಣೆ – ಕಾಂಗ್ರೆಸ್ ಸಂಪೂರ್ಣ ವಿಫಲ