ನಗರಸಭೆ ಅವ್ಯವಹಾರ ತನಿಖೆಗೆ ಆಗ್ರಹ

ಕೋಲಾರ,ಏ,೧೭:ನಗರಸಭೆಯಲ್ಲಿ ಏನೇನು ಅವ್ಯವಹಾರಗಳಾಗಿದೆ ಎಂಬುದರ ಸಮಗ್ರ ದಾಖಲೆಗಳಿದ್ದು, ಎಲ್ಲವನ್ನೂ ಲೋಕಾಯುಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಕೆ.ಜಿ.ಎಫ್ ನಗರದ ಮೊಯ್ದು ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ ನಗರಸಭೆ ಅಧ್ಯಕ್ಷರು ಚಿನ್ನದ ಗಣಿ ಪ್ರದೇಶದಲ್ಲಿ ಎಲ್ಲೆಲ್ಲಿ ಒತ್ತುವರಿ ಮಾಡಿಕೊಂಡಿರುವ ಜಮೀನುಗಳ ಎಲ್ಲ ದಾಖಲೆಗಳನ್ನು ಶೀಘ್ರದಲ್ಲೇ ಬಹಿರಂಗ ಪಡಿಸಲಾಗುವುದು ಎಂದರು.
ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿಕೊಳ್ಳಬೇಕಾದರೆ ಸ್ಥಳೀಯ ಅಭ್ಯರ್ಥಿಯಾಗಿರಬೇಕೆಂದು ಆಕಾಂಕ್ಷಿಗಳೆಲ್ಲರೂ ಒಮ್ಮತಕ್ಕೆ ಬಂದಿದ್ದರಿಂದ ಮಾಜಿ ಶಾಸಕ ವೈ.ಸಂಪಂಗಿ ಪುತ್ರಿ ಅಶ್ವಿನಿಯವರನ್ನು ಹೈಕಮಾಂಡ್ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಎಲ್ಲರೂ ಒಟ್ಟಾಗಿ ದುಡಿದು ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದರು.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮೋಹನ್‌ಕೃಷ್ಣಗೆ ಬಂಗಾರಪೇಟೆಯಲ್ಲಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಇಲ್ಲವೇ ಅವರ ಮಗ ಬಿ.ವಿ.ಮಹೇಶ್‌ರವರಿಗೆ ಹೈಕಮಾಂಡ್ ಟಿಕೆಟ್ ನೀಡಿದರೆ ನಿಮಗೆ ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿಯಲ್ಲಿ ಕೆಜಿಎಫ್‌ನಲ್ಲಿ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದ್ದೆ ಆದರೆ ಬಂಗಾರಪೇಟೆಯಲ್ಲಿ ಎಂ.ನಾರಾಯಣಸ್ವಾಮಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದ್ದರಿಂದ ಕೆಜಿಎಫ್‌ನಲ್ಲಿ ಮೋಹನ್‌ಕೃಷ್ಣಗೆ ಟಿಕೆಟ್ ನೀಡಲಾಗಿಲ್ಲ, ಇದನ್ನು ಅವರು ಅರ್ಥ ಮಾಡಿಕೊಂಡಿಲ್ಲ ಎಂದರು.
ಮಾಜಿ ಶಾಸಕ ವೈ.ಸಂಪಂಗಿ,ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ, ಮಾಜಿ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಶ್ರೀನಿವಾಸ್, ಜನಾರ್ಧನ್, ನವೀನ್, ನಗರ ಘಟಕದ ಮಾಜಿ ಅಧ್ಯಕ್ಷ ಕುಮಾರ್, ಮಹದೇವಪುರ ಚಲಪತಿ, ಗೋಪಾಲ್, ರಾಜಗೋಪಾಲ್, ಮುರುಗೇಶ್ ಮೊದಲಾದವರು ಇದ್ದರು.