ನಗರಸಭೆ ಅಧ್ಯಕ್ಷ ಈ.ವಿನಯ್ – ಬೆಳ್ಳಂಬೆಳಿಗ್ಗೆ ನಗರದ ರಸ್ತೆ ವೀಕ್ಷಣೆ

ಧೂಳು ಮುಕ್ತಕ್ಕೆ ಸೂಚನೆ : ರಸ್ತೆ, ಮಣ್ಣು, ಸ್ವಚ್ಛತೆಗೆ ಆದೇಶ – ಕುಡಿವ ನೀರಿನ ಪರಿಶೀಲನೆ
ರಾಯಚೂರು.ನ.13- ನಗರಸಭೆ ಅಧ್ಯಕ್ಷರಾಗಿ ನಿನ್ನೆ ಅಧಿಕಾರ ಸ್ವೀಕರಿಸಿದ ಈ.ವಿನಯಕುಮಾರ ಇಂದು ಬೆಳ್ಳಂ ಬೆಳಿಗ್ಗೆಯಿಂದಲೇ ಕಾರ್ಯಾಚರಣೆಗಿಳಿದು ನಗರದ ರಸ್ತೆ ವೀಕ್ಷಿಸುವ ಮೂಲಕ ಧೂಳುಮುಕ್ತಗೊಳಿಸಲು ಆದೇಶಿಸಿದ್ದಾರೆ.
ಮುಂಜಾನೆ 5 ಗಂಟೆಯಿಂದ ಆರಂಭಗೊಂಡ ಇವರ ನಗರ ಪ್ರದಕ್ಷಣದಲ್ಲಿ ಅನೇಕ ಕಡೆ ರಸ್ತೆಯಲ್ಲಿ ಮಣ್ಣು ಬಿದ್ದಿರುವುದು ಕಂಡು ಕೂಡಲೇ ತಮ್ಮೊಂದಿಗಿದ್ದ ನಗರಸಭೆ ಆಯುಕ್ತರಿಗೆ ರಸ್ತೆಯಲ್ಲಿರುವ ಮಣ್ಣು ಸ್ವಚ್ಛಗೊಳಿಸಲು ಸಮಗ್ರ ಕಾರ್ಯಾಚರಣೆಗೆ ಆದೇಶಿಸಿದರು. ನಾಳೆಯಿಂದ ನಗರಸಭೆಯ ಕಾರ್ಮಿಕರನ್ನು ಈ ಕಾರ್ಯಕ್ಕೆ ನಿಯುಕ್ತಿಗೊಳಿಸಲು ಸೂಚಿಸಲು ಎಲ್ಲ ಪ್ರಮುಖ ರಸ್ತೆ ಮತ್ತು ವೃತ್ತಗಳ ಮಣ್ಣು ಸ್ವಚ್ಛಗೊಳಿಸಲು ಆದೇಶಿಸುವರು.
ಈ ಮಣ್ಣಿನಿಂದ ನಗರದಲ್ಲಿ ಧೂಳಿನ ಕಾಟ ತೀವ್ರವಾಗಿರುವುದರಿಂದ ರಸ್ತೆಯ ಮಣ್ಣು ಸ್ವಚ್ಛಗೊಳಿಸುವ ಮೂಲಕ ನಗರ ಧೂಳುಮುಕ್ತಗೊಳಿಸಲು ಯೋಜನಾ ಬದ್ಧವಾದ ಕಾರ್ಯಾಚರಣೆ ನಡೆಸಲು ಸೂಚಿಸಿದರು. ನಂತರ ರಸ್ತೆ ಸಂಚಾರದ ವೇಳೆಯಲ್ಲಿ ಅಲ್ಲಲ್ಲಿ ಜನರೊಂದಿಗೂ ಅವರು ವಿಚಾರ ವಿನಿಮಯ ನಡೆಸಿದರು. ಬೆಳಿಗ್ಗೆ 5 ರಿಂದ ಮಧ್ಯಾಹ್ನ 8 ಗಂಟೆವರೆಗೂ ಈ ಪ್ರದಕ್ಷಣೆ ನಡೆಯಿತು. ನಗರದಲ್ಲಿ ಯಾವುದೇ ರಸ್ತೆಯಲ್ಲು ಧೂಳು ಕಾಣಿಸದಂತೆ ಸ್ವಚ್ಛವಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಗಂಗಾನಿವಾಸಕ್ಕೆ ಆಗಮಿಸಿ, ಕುಡಿವ ನೀರಿನ ಸಮಸ್ಯೆಗೆ ಸಂಬಂಧಿಸಿ ನಗರಸಭೆ ಹೊಂದಿದ ಉಪಕರಣ ಮತ್ತು ಕುಡಿವ ನೀರಿನ ಸಮಸ್ಯೆಗೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಪರಿಶೀಲಿಸಿದರು. ಕುಡಿವ ನೀರಿನ ವ್ಯವಸ್ಥೆ ನಗರದಲ್ಲಿ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ನಿರ್ವಹಿಸಬೇಕು. ಕುಡಿವ ನೀರಿಗೆ ಬೇಕಾದ ಉಪಕರಣ ದಾಸ್ತಾನು ಮತ್ತು ಅಗತ್ಯತೆ ಬಗ್ಗೆಯೂ ಪರಿಶೀಲಿಸಿ, ಎಲ್ಲಾವೂ ನಿಯಮ ಬದ್ಧವಾಗಿ ಕಾರ್ಯ ನಿರ್ವಹಿಸಲು ಹೇಳಿದರು.
ಇಂದು ಸಂಜೆ ಅಥವಾ ನಾಳೆ ಮುಂಜಾನೆ ಪರಿಸರ ವಿಭಾಗದ ಅಧಿಕಾರಿಗಳ ಸಭೆ ನಡೆಸಿ, ನಗರದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಕ್ರಿಯಾಯೋಜನೆ ರೂಪಿಸಲು ಚರ್ಚಿಸಲಾಗುತ್ತದೆ. ನಗರ ಸ್ವಚ್ಛವಾಗಿ ನಿರ್ವಹಿಸಲು ಅಗತ್ಯವಾದ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಮುಂಜಾನೆ 10.30 ಕ್ಕೆ ನಗರಸಭೆಗೆ ಆಗಮಿಸಿದ ಅವರು ಕಛೇರಿಯಲ್ಲಿ ಅಧಿಕಾರಿಗಳಿಗೆ ಚುರುಕುನಿಂದ ಕಾರ್ಯ ನಿರ್ವಹಿಸಲು ಆದೇಶಿಸಿದರು.
ಈ.ವಿನಯಕುಮಾರ ಅವರು ಅಧಿಕಾರ ವಹಿಸಿಕೊಂಡ ಮಾರನೇ ದಿನವೇ ಆಡಳಿತ ಟೇಕಾಫ್‌ಗೆ ಮುಂದಾಗಿದ್ದಾರೆ. ನಗರದಲ್ಲಿ ಅನೇಕ ಸಮಸ್ಯೆ ಜ್ವಲಂತವಾಗಿವೆ. ಕಳೆದ ಎರಡು ವರ್ಷಗಳ ಕಾಲ ಚುನಾಯಿತ ಸಮಿತಿ ಇಲ್ಲದಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದು ಅನೇಕ ಬಡಾವಣೆಗಳಲ್ಲಿ ಕಸದ ರಾಶಿ ತೀವ್ರವಾಗಿದೆ.
ನಗರಸಭೆ ಅಧ್ಯಕ್ಷರ ಮಿಂಚಿನ ಕಾರ್ಯಾಚರಣೆ ನಿರಂತರ ಮುಂದುವರೆದು, ಜನರ ಬಹುದಿನಗಳ ಸಮಸ್ಯೆಗಳಿಗೆ ಪರಿಹಾರವಾಗುವ ನಿರೀಕ್ಷೆ ಅವರ ಬೆಳಗಿನ ಜಾವ ಸಂಚಾರ ಮೂಡಿಸುವಂತೆ ಮಾಡಿದೆ. ಇಂದು ನಗರ ಪ್ರದಕ್ಷಣೆ ಮಾಡಿದ ವಿನಯಕಮಾರ ಅವರನ್ನು ಸಂಪರ್ಕಿಸಿದಾಗ ಬೆಳಗಿನ 5 ಗಂಟೆಯಿಂದ ನಗರದಲ್ಲಿ ಓಡಾಟ ಆರಂಭಿಸಲಾಗಿದೆ. ಇದು ನಿರಂತರ ನಡೆಯುತ್ತದೆ. ನಾಳೆಯಿಂದ ರಸ್ತೆ ಧೂಳು ಮುಕ್ತಕ್ಕೆ ಕಾರ್ಯಾಚರಣೆ ನಡೆಸಲಾಗುತ್ತದೆ.
ಸ್ವಚ್ಛತೆ, ಕುಡಿವ ನೀರಿಗೆ ವಿಶೇಷ ಆದ್ಯತೆ ನೀಡುವ ತಮ್ಮ ಭರವಸೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಅಧಿಕಾರಿಗಳಿಗೆ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಇಂದು ಅಥವಾ ನಾಳೆ ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚಿಸಿ, ನಗರದ ಸ್ವಚ್ಛತೆ ಮತ್ತು ಉತ್ತಮ ಮೂಲಭೂತ ಸೌಕರ್ಯಗಳಿಗಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುತ್ತದೆಂದು ಹೇಳಿದರು.
ಅಧ್ಯಕ್ಷರ ಸಂಚಾರ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ದರೂರು ಬಸವರಾಜ ಅವರು ಉಪಸ್ಥಿತರಿದ್ದರು.