ನಗರಸಭೆ ಅಧ್ಯಕ್ಷರಾಗಿ ಜೀವಂಧರ್ ಜೈನ್ ಉಪಾಧ್ಯಕ್ಷರಾಗಿ ವಿದ್ಯಾ ಆರ್ ಗೌರಿ ಆಯ್ಕೆ

ಪುತ್ತೂರು, ನ.೩- ಪುತ್ತೂರು ನಗರ ಸಭೆಯಲ್ಲಿನ ೩೧ ಸ್ಥಾನಗಳ ಪೈಕಿ ೨೫ ಸ್ಥಾನಗಳನ್ನು ಹೊಂದಿರುವ ಬಿಜೆಪಿ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೆ. ಜೀವಂಧರ ಜೈನ್ ಸಂಸದ ಮತ್ತು ಶಾಸಕರ ಮತ ಸೇರಿ ೨೭ ಮತಗಳೊಂದಿಗೆ ನಗರಸಭಾ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಬಿಜೆಪಿಯ ವಿದ್ಯಾಗೌರಿ ಅವಿರೋಧವಾಗಿ ಆಯ್ಕೆಯಾದರು.
ನಗರಸಭೆಯಲ್ಲಿ ಕೇವಲ ೫ ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿತ್ತು. ಕಾಂಗ್ರೆಸ್‌ನ ಒಂದು ಬಣದ ಇಬ್ಬರು ಸದಸ್ಯರು ಮತದಾನಕ್ಕೆ ಗೈರಾಗಿದ್ದರು.
ಪುತ್ತೂರು ಉಪವಿಭಾಗಧಿಕಾರಿ ಡಾ. ಯತೀಶ್ ಉಳ್ಳಾಲ್ ಚುನಾವಣಾಧಿಕಾರಿಯಾಗಿ ಪಾಲ್ಗೊಂಡಿದ್ದರು. ಅಧ್ಯಕ್ಷ ಹುದ್ದೆಗೆ ಬಿಜೆಪಿಯಿಂದ ಕೆ. ಜೀವಂಧರ ಜೈನ್ ಮತ್ತು ಕಾಂಗ್ರೆಸ್‌ನಿಂದ ರಾಬಿನ್ ತಾವ್ರೋ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಶಕುಂತಳಾ ಶೆಟ್ಟಿ ವಿರೋಧಿ ಬಣದ ಸದಸ್ಯರಾದ ಶಕ್ತಿ ಸಿನ್ಹಾ ಮತ್ತು ಬಿ. ಶೈಲಾ ಪೈ ಗೈರು ಹಾಜರಾಗಿದ್ದರು. ಈ ಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿ ೩ ಮತಗಳನ್ನು ಪಡೆದರು. ಸ್ವ ಪಕ್ಷೀಯರೇ ಕೈ ಕೊಟ್ಟು ಪಕ್ಷದ ಸದಸ್ಯ ಬಲಕ್ಕಿಂತ ಕಡಿಮೆ ಮತಗಳನ್ನು ಗಳಿಸಿದರು. ಉಪಾಧ್ಯಕ್ಷ ಹುದ್ದೆಗೆ ಬಿಜೆಪಿಯ ವಿದ್ಯಾ ಆರ್ ಗೌರಿ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರು ಅವಿರೋಧವಾಗಿ ಆಯ್ಕೆಗೊಂಡರು.
ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಸಂಜೀವ ಮಠಂದೂರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನಗರಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.
ಈ ಸಂದರ್ಭ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಕ್ಯಾಂಪ್ಕೋ ನಿರ್ದೇಶಕ ಷನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಮುಂದಾಳುಗಳಾದ ಗೋಪಾಲಕೃಷ್ಣ ಹೇರಳೆ, ಎಸ್. ಅಪ್ಪಯ್ಯ ಮಣಿಯಾಣಿ, ಆರ್.ಸಿ. ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.