ನಗರಸಭೆ ಅಧಿಕಾರ ವಶ : ಸನ್ನದ್ಧವಿರಲು ಬಿಜೆಪಿ ಸದಸ್ಯರಿಗೆ ಶಾಸಕ ಸೂಚನೆ

 • ಹೈದ್ರಾಬಾದ್‌ನಲ್ಲಿ ಮಹತ್ವದ ಸಭೆ : ಶತಾಯಗತಾಯ ಅಧಿಕಾರಕ್ಕೆ ರಣತಂತ್ರ
  ರಾಯಚೂರು.ಅ.31- ಶತಾಯಗತಾಯ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯಲು ಪಕ್ಷದ ಎಲ್ಲಾ ಸದಸ್ಯರು ಒಗ್ಗಟ್ಟಿನೊಂದಿಗೆ ಸಿದ್ಧವಾಗಿರಲು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಸೂಚನೆ ನೀಡಿದ್ದಾರೆ.
  ಇಂದು ಹೈದ್ರಾಬಾದ್‌ನಲ್ಲಿ ಪಕ್ಷದ 12 ಬಿಜೆಪಿ ಸದಸ್ಯರು ಹಾಗೂ ಓರ್ವ ಪಕ್ಷೇತರ ಸದಸ್ಯರೊಂದಿಗೆ ಗಂಭೀರ ಸಮಾಲೋಚನೆ ನಡೆಸಿ, ಮುಂದಿನ ಎರಡು ದಿನಗಳಲ್ಲಿ ನವೆಂಬರ್ 2 ರಂದು ನಡೆವ ಚುನಾವಣೆ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದು, ಶತಾಯಗತಾಯ ಅಧಿಕಾರ ಚುಕ್ಕಾಣಿ ಹಿಡಿಯಲು ಸನ್ನದ್ಧರಾಗುವಂತೆ ಸದಸ್ಯರಿಗೆ ಹೇಳಿದರು. ನಗರಸಭೆ ರಾಜಕೀಯ ಬೆಳವಣಿಗೆಯಲ್ಲಿ ಯಾವುದೇ ರೀತಿಯ ಸಂದರ್ಭಗಳು ಸೃಷ್ಟಿಯಾಗಬಹುದು. ಬಿಜೆಪಿ ಈ ಸಂದರ್ಭಗಳನ್ನು ಅಧಿಕಾರ ಕೈವಶಕ್ಕೆ ದಾರಿ ಮಾಡಿಕೊಳ್ಳಲು ಬೇಕಾದ ರಣತಂತ್ರ ರೂಪಿಸಲಾಗುತ್ತಿದೆ.
  ಕಳೆದ ನಾಲ್ಕೈದು ದಿನಗಳಿಂದ ಹೈದ್ರಾಬಾದ್‌ನಲ್ಲಿ ಬಿಜೆಪಿ ಸದಸ್ಯರು ಬಿಡಾರ ಹೂಡಿದ್ದಾರೆ. ಶಾಸಕರು ಇಂದು ಅಲ್ಲಿಗೆ ತೆರಳಿ, ಎಲ್ಲಾರೊಂದಿಗೆ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಗಂಭೀರ ಚರ್ಚಿಸಿದರು. ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವ ತಮ್ಮ ಮೂಲ ಉದ್ದೇಶದೊಂದಿಗೆ ಸದಸ್ಯರೊಂದಿಗೆ ಹಂಚಿಕೊಂಡರು ಎಂದು ಹೇಳಲಾಗಿದೆ. ಶತಾಯಗತಾಯ ಈ ಅಧಿಕಾರ ಚುಕ್ಕಾಣಿ ಹಿಡಿಯಲು ಬೇಕಾದ ಎಲ್ಲಾ ಕಡೆಯಿಂದಲೂ ನಡೆಸುವಂತೆ ಹೇಳಿದ ಅವರು, ಪ್ರಸ್ತುತ 12 ಬಿಜೆಪಿ ಮತ್ತು ಓರ್ವ ಪಕ್ಷೇತರ ಸದಸ್ಯರು ಸೇರಿ ಒಟ್ಟು 13 ಸದಸ್ಯರು ಪಕ್ಷದಲ್ಲಿದ್ದು, ಶಾಸಕ ಮತ್ತು ಸಂಸದರ ಮತ ಸೇರಿದರೇ, 15 ಸಂಖ್ಯೆಯ ಬೆಂಬಲ ಬಿಜೆಪಿಗಿದೆ.
  ಅಧಿಕಾರ ಚುಕ್ಕಾಣಿ ಹಿಡಿಯಲು ಇನ್ನೂ ಮೂವರ ಸದಸ್ಯರ ಅಗತ್ಯವಿದೆ. ಈ ಮೂವರು ಸದಸ್ಯರನ್ನು ಯಾರೇ ಕರೆತಂದರೂ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಪಕ್ಷ ಸಿದ್ಧವಿರುವ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದೆ. ಉಪಾಧ್ಯಕ್ಷ ಬಿಜೆಪಿ ಉಳಿಸಿಕೊಂಡು ಅಧ್ಯಕ್ಷ ಸ್ಥಾನವನ್ನು ಬಹುಮತಕ್ಕೆ ಅಗತ್ಯವಾದ ಸದಸ್ಯರನ್ನು ಕರೆತಂದವರಿಗೆ ಬಿಟ್ಟುಕೊಡಲು ತಂತ್ರ ಹೂಡಲಾಗಿದೆ. ಕಾಂಗ್ರೆಸ್ ಪಕ್ಷ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವ ಪ್ರಯತ್ನ ವಿಫಲಗೊಳಿಸಲು ಅಗತ್ಯವಾದ ರಾಜಕೀಯ ತಂತ್ರಗಳನ್ನು ರೂಪಿಸಲಾಗುತ್ತದೆ. ಯಾವುದೇ ಸಂದರ್ಭದಲ್ಲಿ ತುರ್ತು ಬದಲಾವಣೆಗಳಿಗೆ ಪಕ್ಷದ ಎಲ್ಲಾ ಸದಸ್ಯರು ಬದ್ಧ ಮತ್ತು ಸಿದ್ಧರಾಗಿರಬೇಕು.
  ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಪ್ರಾಬಲ್ಯ ಉಳಿಸಿಕೊಳ್ಳಲು ಕೊನೆಯ ತನಕ ಸಂಘರ್ಷ ನಡೆಸಬೇಕೆನ್ನುವುದು ಬಿಜೆಪಿಯ ಪ್ರಮುಖ ಆಲೋಚನೆಯಾಗಿದೆ. ಈಗಾಗಲೇ ಕಾಂಗ್ರೆಸ್ಸಿನಲ್ಲಿ ಬಂಡಾಯ ಅಥವಾ ಪಕ್ಷೇತರರು ಮತ್ತು ಜಾದಳದ ಸದಸ್ಯರನ್ನು ಸೆಳೆಯುವ ಎಲ್ಲಾ ತಂತ್ರಗಳನ್ನು ಬಳಸಲು ಪಕ್ಷ ಸಿದ್ಧತೆ ಮಾಡಿಕೊಂಡಿದೆ. ಮುಂದಿನ 48 ಗಂಟೆಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯಲಿದೆ ಎನ್ನುವ ಸುಳಿವನ್ನು ಬಿಜೆಪಿ ಸದಸ್ಯರಿಗೆ ನೀಡಿದರು. ಈ ಹಿನ್ನೆಲೆಯಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವ ಮೂಲಕ ಎಲ್ಲಾ ರಾಜಕೀಯ ಅವಕಾಶಗಳಿಗೆ ತಕ್ಷಣವೇ ಸ್ಪಂದಿಸಿ, ಬಿಜೆಪಿ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರತಿಯೊಬ್ಬ ಸದಸ್ಯರ ಸಹಕಾರ ಅಗತ್ಯವೆಂದು ಹೇಳಿದರು ಎನ್ನಲಾಗಿದೆ.
  ಶಾಸಕ ಡಾ.ಶಿವರಾಜ ಪಾಟೀಲ್ ಅವರ ಹೇಳಿಕೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನಗರಸಭೆ ಅಧ್ಯಕ್ಷ ಸ್ಥಾನದ ಹಣಾಹಣಿ ಮತ್ತಷ್ಟು ತೀವ್ರಕ್ಕೆ ತಿರುಗುವಂತೆ ಮಾಡುವ ಸಾಧ್ಯತೆಗಳಿಗೆ ಸಂಕೇತವಾಗಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ 20 ಸದಸ್ಯರನ್ನು ತನ್ನ ಬಳಿ ಉಳಿಸಿಕೊಂಡಿದೆ. ಕಾಂಗ್ರೆಸ್ಸಿನ 11, ಪಕ್ಷೇತರ 7 ಹಾಗೂ ಜಾದಳ ಇಬ್ಬರು ಸದಸ್ಯರು ಕಾಂಗ್ರೆಸ್ಸಿನೊಂದಿಗಿರುವುದು ಬಿಜೆಪಿಗೆ ಬಹುದೊಡ್ಡ ಸವಾಲಾಗಿದೆ. ಬಹುಮತಕ್ಕಿಂತ ಇಬ್ಬರನ್ನು ಅಧಿಕ ಸಂಖ್ಯೆಯಲ್ಲಿ ಹೊಂದಿದ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯುವ ಸ್ಪಷ್ಟ ಬಹುಮತವನ್ನು ಹೊಂದಿರುವುದಾಗಿ ಹೇಳಿಕೊಳ್ಳುತ್ತಿರುವಾಗಲೇ, ಶಾಸಕರು ಬಿಜೆಪಿ ಸದಸ್ಯರಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಸನ್ನದ್ಧರಾಗಿ ಎಂದು ಕರೆ ನೀಡಿರುವುದು ಕುತೂಹಲ ಹೆಚ್ಚುವಂತೆ ಮಾಡಿದೆ.
  ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಎರಡು ವಿರುದ್ಧ ದಿಕ್ಕುಗಳಲ್ಲಿ ಬಿಡಾರ ಹೂಡಿದ್ದಾರೆ. ಕಾಂಗ್ರೆಸ್ ಸದಸ್ಯರು ಬೆಂಗಳೂರಿನಿಂದ ತಮ್ಮ ಬಿಡಾರ ಹೊಸಪೇಟೆಗೆ ಸ್ಥಳಾಂತರಿಸಿದ್ದರೇ, ಅದರ ವಿರುದ್ಧ ದಿಕ್ಕಿನ ಹೈದ್ರಾಬಾದ್‌ನಲ್ಲಿ ಜಿಜೆಪಿ ಅವರು ಕಾದು ನೋಡುವ ತಂತ್ರದಲ್ಲಿದ್ದಾರೆ. ಶಾಸಕರ ಇಂದಿನ ಭೇಟಿ ಮುಂದಿನ ರಾಜಕೀಯ ಬದಲಾವಣೆಗಳಿಗೆ ಯಾವ ರೀತಿ ನಾಂದಿಯಾಗಲಿದೆ ಎನ್ನುವ ಚರ್ಚೆ ಕಾಂಗ್ರೆಸ್ಸಿನಲ್ಲಿ ತೀವ್ರವಾಗಿದೆ. ಶಾಸಕರು ಮತ್ತು ಬಿಜೆಪಿ ಸದಸ್ಯರ ಸಭೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಜಿಜ್ಞಾಸೆಯೊಂದಿಗೆ ನವೆಂಬರ್ 2 ರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ಕೇಂದ್ರೀಕೃತಗೊಂಡಿದೆ.