ನಗರಸಭೆ ಅಧಿಕಾರಿಗಳಿಗೆ ಸದಸ್ಯರಿಂದ ತರಾಟೆ

ಕನಕಪುರ.ಜ೧೪-ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಎಲ್ಲಂದರಲ್ಲಿ ನಿಲ್ಲಿಸಿ, ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೂ ನೀವು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಗರಸಭೆ ಸದಸ್ಯರಾದ ಜೈರಾಮು ಮತ್ತು ಸ್ಟುಡಿಯೋ ಚಂದ್ರು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಮಂಗಳವಾರ ನಡೆಯಿತು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ೨೦೨೧-೨೨ರ ಆಯ ವ್ಯಯ ಪೂರ್ವಭಾವಿಯ ಸಭೆಯಲ್ಲಿ ನಗರದ ಅಭಿವೃದ್ಧಿ ಮತ್ತು ಸುವ್ಯವಸ್ಥೆಯ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದರು.
ನಗರದಲ್ಲಿ ಸಾರ್ವಜನಿಕರ ಓಡಾಟಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು, ರಸ್ತೆಗಳು, ಚರಂಡಿಗಳನ್ನು ಅಭಿವೃದ್ಧಿಪಡಿಸಿ ನಗರವನ್ನು ಸುಂದರವಾಗಿಸಬೇಕು. ಆದರೆ ನಗರದಲ್ಲಿ ಯಾವುದು ಸರಿಯಿಲ್ಲವೆಂದು ತಿಳಿಸಿದರು. ನಗರದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಬೇಕು, ನಗರಸಭೆಗೆ ಹೆಚ್ಚಿನ ಆದಾಯ ಬರುವಂತೆ ನೋಡಿಕೊಳ್ಳಬೇಕು. ನಗರಸಭೆಯ ಸ್ವತ್ತುಗಳಿಗೆ ಸರಿಯಾದ ಬಾಡಿಗೆ ಬರುವಂತೆ ಮಾಡಬೇಕು, ನಗರಸಭೆಯ ಆಧಾಯವನ್ನು ಹೆಚ್ಚಿಸಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಆಗ್ರಹಿಸಿದರು.
ನಗರಸಭೆ ಆಯುಕ್ತ ಕೆ.ಮಾಯಣ್ಣಗೌಡ ಮಾತನಾಡಿ ಮಾತನಾಡಿ ಕೊರೊನಾ ಕಾರಣದಿಂದ ಕಂದಾಯವನ್ನು ಹೆಚ್ಚಿಸಲು ಆಗುವುದಿಲ್ಲ, ನಗರದ ಬೀದಿ ದೀಪ ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದೆ. ಮಾಸಿಕವಾಗಿ ಬೀದಿ ದೀಪದ ವಿದ್ಯುತ್ ಬಿಲ್ ೪.೫ ಲಕ್ಷ ವಾಗುತ್ತಿದ್ದು ವಾರ್ಷಿಕವಾಗಿ ೫೦ ಲಕ್ಷ ಹೊರೆ ಆಗುತ್ತಿದೆ.
ಅದಕ್ಕಾಗಿ ಬೀದಿ ದೀಪಗಳನ್ನು ಎಲ್‌ಇಡಿ ಗೆ ಬದಲಾಯಿಸಲು ನೀಡಲಾಗಿದೆ. ಅವರು ನಗರಸಭೆಗೆ ಹೊರೆ ಆಗದಂತೆ ಇನ್ನು ೬ ತಿಂಗಳಲ್ಲಿ ಬದಲಾವಣೆಯನ್ನು ಮಾಡುತ್ತಿದ್ದಾರೆ, ಈ ಮಧ್ಯದಲ್ಲಿ ದೀಪಗಳನ್ನು ಬದಲಾಯಿಸಲು ಆಗುವುದಿಲ್ಲ. ಅಲ್ಲಿಯವರೆಗೂ ನಾಗರೀಕರು, ಸದಸ್ಯರು ಸಹಕರಿಸಬೇಕೆಂದು ಮನವಿ ಮಾಡಿದರು.
ಕೆಲವು ಸದಸ್ಯರು ಮಾತನಾಡಿ ಬೀದಿಬದಿ ವ್ಯಾಪಾರಿಗಳಿಗಾಗಿ ಒಂದೆ ಕಡೆ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದರೂ ಮತ್ತೆ ರಸ್ತೆಬದಿಯಲ್ಲಿ ಕೆಲವರು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿರುವವರಿಗೆ ಅನ್ಯಾಯವಾಗುತ್ತೆ, ರಸ್ತೆ ಬದಿ ವ್ಯಾಪಾರದಿಂದ ವಾಹನ ಸಂಚಾರಕ್ಕೆ ತೊಡುಕಾಗುತ್ತದೆ.
ಕೋಳಿ ಅಂಗಡಿಗೆ ಕೆಲವರು ಪರವಾನಗಿಯನ್ನೇ ಪಡೆದಿಲ್ಲ, ಕೋಳಿ ತ್ಯಾಜ್ಯವನ್ನು ರಾತ್ರಿ ವೇಳೆಯಲ್ಲಿ ನದಿಗೆ, ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ರಸ್ತೆಗಳ ಮಧ್ಯದಲ್ಲಿ ಕೊಳೆವೆ ಮತ್ತು ವಿದ್ಯುತ್ ಲೈನ್ ನಿರ್ಮಿಸಲು ರಸ್ತೆ ಅಗೆದವರು ಮುಚ್ಚುತ್ತಿಲ್ಲ, ಮಧ್ಯದಲ್ಲಿ ಬಿಟ್ಟಿರುವ ಸ್ಥಳಗಳನ್ನು ಮುಚ್ಚದಿರುವುದರಿಂದ ವಾಹನ ಸಂಚಾರಕ್ಕೆ ಕಿರಿಕಿರಿ ಆಗುತ್ತಿದೆ, ಅಪಘಾತಗಳು ಸಂಭವಿಸುತ್ತಿವೆ.
ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸಲಹೆ ನೀಡಿದರು. ವಿವಿಧ ಮೂಲಗಳಿಂದ ಸಂಪನ್ಮೂಲವನ್ನು ಕ್ರೂಡಿಕರಿಸಲು ಎಲ್ಲಾ ಸದಸ್ಯರು ಸಂಪೂರ್ಣ ಸಹಕಾರ ನೀಡುವುದಾಗಿ ಸದಸ್ಯರು ತಿಳಿಸಿದರು. ನಗರಸಭೆ ಉಪಾಧ್ಯಕ್ಷ ಗುಂಡಪ್ಪ, ಇಂಜಿನಿಯರ್ ಅನಿಲ್‌ಕುಮಾರ್ ಉಪಸ್ಥಿತರಿದ್ದರು.