
ಸಂಜೆವಾಣಿ ವಾರ್ತೆಹೊಸಪೇಟೆ, ಅ.23 : ಹೊಸಪೇಟೆ ನಗರಸಭೆಯ ನಾಲ್ಕರಿಂದ ಐದು ಮಹತ್ವದ ಕಡತಗಳು ಮಾಯವಾಗಿರುವುದು ಮಂಗಳವಾರ ಸಾರ್ವಜನಿಕರ ಸಮ್ಮುಖದಲ್ಲೇ ಬಯಲಾಗಿರುವ ಬೆನ್ನಲ್ಲೇ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.ಕರ್ನಾಟಕ ರಕ್ಷಣಾ ವೇದಿಕೆ, ಪೊಲೀಸರು, ಸಮ್ಮುಖದಲ್ಲಿ ಮಂಗಳವಾರ ಕಡತಗಳ ಪರೀಕ್ಷೆ ನಡೆಸಿದಾಗ 4ರಿಂದ 5 ಕಡತಗಳು ಮಾಯವಾಗಿರುವುದು ತಿಳಿಯಿತು. ಪೊಲೀಸ್ ತನಿಖೆಯ ಭಾಗವಾಗಿ ಈ ಕಡತಗಳು ನ್ಯಾಯಾಲಯದಲ್ಲಿರುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಪೌರಾಯುಕ್ತ ಬಿ.ಟಿ.ಬಂಡಿವಡ್ಡರ್ ನೀಡಿದರಾದರೂ ಖಚಿತವಾಗಿ ಹೇಳದಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ತಾನು ಪತ್ರ ಬರೆದೇ ಇಲ್ಲ, ಇದೊಂದು ನಕಲಿ ಪತ್ರ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಈ ಬಗ್ಗೆ ಮಂಗಳವಾರ ಪೊಲೀಸರಿಗೆ ದೂರು ನೀಡಲಿದ್ದಾರೆ. ನಕಲಿ ಸಹಿ ಬಗ್ಗೆ ವಿಚಾರಣೆ ನಡೆಯಲಿದೆ ಎಂದು ಅವರು ಹೇಳಿದರು.ಈ ವಾದವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಕರಾವೇ ಜಿಲ್ಲಾ ಘಟಕದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಸಿಐಡಿ ಅಥವಾ ಲೋಕಾಯುಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.ನಗರಸಭೆಯಲ್ಲಿ ಕಡತಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಯೇ ಹೊಣೆಗಾರರು. ಕಡತಗಳು ಸಾರ್ವಜನಿಕ ಸ್ವತ್ತು. ಅವುಗಳು ಕಚೇರಿಯಲ್ಲೇ ಇರಬೇಕು. ಒಂದು ಕಡತವೂ ಆಚೀಚೆ ಆಗಬಾರದು. ಒಂದು ವೇಳೆ ನ್ಯಾಯಾಲಯದ ವಿಚಾರಣೆಗೆ ಒಯ್ದಿದ್ದರೆ ಅದರ ಮಾಹಿತಿಯೂ ನಮೂದಾಗಿರಬೇಕು. ಕಡತ ಕಾಣಿಸುತ್ತಿಲ್ಲ ಎಂದಾದರೆ ತಕ್ಷಣ ಪೊಲೀಸ್ ದೂರು ನೀಡಬೇಕು. ಅದ್ಯಾವುದೂ ಆಗಿಲ್ಲ. ಹೀಗಾಗಿ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದು ನಿಶ್ಚಿತ’ ಎಂದು ಜಿಲ್ಲಾಧಿಕಾರಿ ದಿವಾಕರ್ ತಿಳಿಸಿದರು.ಘಟನೆಯ ಹಿನ್ನಲೆ ಗಾಯಕಿಯಾಗಿ: ‘ನಗರಸಭೆಯಿಂದ ಆರೇಳು ತಿಂಗಳ ಹಿಂದೆಯೇ 49 ಕಡತಗಳನ್ನು ಮಾಜಿ ಸಚಿವ ಆನಂದ್ ಸಿಂಗ್, ಅವರ ಅಳಿಯ ಸಂದೀಪ್ ಸಿಂಗ್, ಹಾಲಿ ಸದಸ್ಯರು, ಮಾಜಿ ಸದಸ್ಯ ವೇಣುಗೋಪಾಲ್ ಹಾಗೂ ಕೆಲವು ಅಧಿಕಾರಿಗಳು, ಸಿಬ್ಬಂದಿ ಸೇರಿಕೊಂಡು ಸಿ.ಸಿ.ಟಿ.ವಿ. ಕ್ಯಾಮೆರಾ ಬಂದ್ ಮಾಡಿಸಿಕೊಂಡು ಕಚೇರಿಯಿಂದ ತೆಗೆದುಕೊಂಡು ಹೋಗಿದ್ದಾರೆ. ಇದುವರೆಗೂ ತಂದುಕೊಟ್ಟಿಲ್ಲ‘ ಎಂಬ ದೂರನ್ನು ಇದೇ 10ರಂದು ಮುಖ್ಯಮಂತ್ರಿ ಮತ್ತು ಇತರ ಹಲವರಿಗೆ ಸಲ್ಲಿಸಲಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆಗೂ ಈ ದೂರು ಬಂದಿತ್ತು. ನಗರಸಭೆಯ ವಾಲ್‌ಮೇನ್ ಸುರೇಶ್ ಬಾಬು ಡಿ.ಎಚ್. ಅವರು ಈ ಪತ್ರ ಬರೆದಿದ್ದರು. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕರವೇ ಆಯುಕ್ತರಿಗೆ ಕೇಳಿಕೊಂಡಿತ್ತು ಹಾಗೂ 19ರಂದು ದೂರಿನ ಪ್ರತಿಯನ್ನೂ ಒದಗಿಸಿತ್ತು. ಕಡತಗಳ ಬಗ್ಗೆ ಸಾರ್ವಜನಿಕವಾಗಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದ ಮೇರೆಗೆ ಆಯುಕ್ತರು ಮಾಧ್ಯಮಗಳ ಸಮ್ಮುಖದಲ್ಲೇ ಕಡತಗಳನ್ನು ತರಿಸಿ ಪರಿಶೀಲಿಸಿದರು. ಆಗ 5 ಕಡತಗಳು ಕಣ್ಮರೆಯಾಗಿರುವುದನ್ನು ಒಪ್ಪಿಕೊಂಡರು.ಬಳಿಕ ಮಾಧ್ಯಮದವರ ಜತೆಗೆ ಮಾತನಾಡಿದ ತಾರಿಹಳ್ಳಿ ಹುನುಮಂತಪ್ಪ, ಆಯುಕ್ತರು ಹೇಳಿದಂತೆ ನಾಲ್ಕೈದು ಕಡತಗಳಲ್ಲ, 13 ಕಡತಗಳು ಕಣ್ಮರೆಯಾಗಿವೆ. ಕೆಲವೊಂದಕ್ಕೆ ಎರಡೆರಡು ಕಡತಗಳ ಹೆಸರು ಸೇರಿಕೊಂಡಿವೆ ಎಂಬ ಸಮಜಾಯಿಸಿ ನೀಡುತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳಲಾಗದು. ಕಚೇರಿಯಲ್ಲಿ ಹಲವು ಕಡೆ ಸಿ.ಸಿ.ಟಿ.ವಿ.ಕ್ಯಾಮೆರಾಗಳು ಈಗಲೂ ಕಾರ್ಯನಿರ್ವಹಿಸುತ್ತಿಲ್ಲ. ಇಡೀ ಪ್ರಕರಣದಲ್ಲಿ ಕೆಲವು ಶಕ್ತಿಗಳು ಶಾಮೀಲಾಗಿರುವುದು ಸ್ಪಷ್ಟವಾಗಿದ್ದು, ಉನ್ನತ ಮಟ್ಟದ ತನಿಖೆ ಆಗಲೇಬೇಕು ಎಂದರು.