
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ (ವಿಜಯನಗರ), ಸೆ.14: ನಗರಸಭೆಯ 21ನೇ ವಾರ್ಡ್‌ನ 11.66 ಎಕರೆ ಸರ್ಕಾರಿ ಜಮೀನು ಬಹುತೇಕ ಅತಿಕ್ರಮಗೊಂಡಿದ್ದು, ಸದ್ಯ 3.11 ಎಕರೆ ಸ್ಥಳ ಮಾತ್ರ ಉಳಿದಿದೆ. ಇಲ್ಲಿನ ಅಕ್ರಮ ಮನೆಗಳನ್ನು ತೆರವುಗೊಳಿಸಲು ಗುರುವಾರದಿಂದಲೇ ಪ್ರಕ್ರಿಯೆ ಆರಂಭಿಸುವುದಾಗಿ ನಗರಸಭೆ ಆಯುಕ್ತ ಬಿ.ಟಿ.ಬಂಡಿವಡ್ಡರ್ ಭರವಸೆ ನೀಡಿದರು.
ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಪ್ರದೇಶದಲ್ಲಿ ಕಡುಬಡವರು ವಾಸವಾಗಿರುವುದರಿಂದ ಇದನ್ನು ಕೊಳೆಗೇರಿ ಎಂದು ಘೋಷಿಸಬೇಕು ಎಂಬ ಶಿಲ್ಪಾ ದ್ವಾರಕೇಶ್ ಅವರ ಪ್ರಸ್ತಾವವನ್ನು ತಿರಸ್ಕರಿಸಿದ ಠರಾವು ಓದಿಹೇಳಿದ ವೇಳೆ ಎಚ್.ರಾಘವೇಂದ್ರ, ಅಬ್ದುಲ್ ಖದೀರ್ ಸಹಿತ ಹಲವು ಸದಸ್ಯರು ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ ವಿಷಯ ಪ್ರಸ್ತಾಪಿಸಿದರು.
‘ಕಡತ ನಾಪತ್ತೆ ಪ್ರಕರಣದಲ್ಲಿ ಹಾಲಿ ಸದಸ್ಯರ ಹೆಸರನ್ನು ಸಹ ಅನಗತ್ಯವಾಗಿ ಉಲ್ಲೇಖಿಸಿ ನಮ್ಮ ಮಾನ ಹೋಗುವಂತಾಯಿತು. ಇನ್ನು ಮುಂದೆ ನಗರಸಭೆಯ ಅಧಿಕಾರಿಗಳಿಂದ ಆಗಿರುವ ಅನ್ಯಾಯಗಳನ್ನು ನೋಡುತ್ತ ಮೌನವಾಗಿರಲು ಸಾಧ್ಯವಿಲ್ಲ. ಈ 11.66 ಎಕರೆ ಜಾಗ ಸಹಿತ ನಗರಸಭೆ ವ್ಯಾಪ್ತಿಯಲ್ಲಿ ಒತ್ತುವರಿಯಾದ ಎಲ್ಲಾ ಆಸ್ತಿಗಳನ್ನೂ ವಾಪಸ್ ಪಡೆಯಲೇಬೇಕು’ ಎಂದು ಖದೀರ್ ಆಗ್ರಹಿಸಿದರು. ‘ಅಧಿಕಾರಿಗಳು ತಕ್ಷಣದಿಂದ ಈ ಕೆಲಸ ಮಾಡಬೇಕು’ ಎಂದು ರಾಘವೇಂದ್ರ ಒತ್ತಾಯಿಸಿದರು. ಚರ್ಚೆಯಲ್ಲಿ ಸಂತೋಷ್, ಕೆ.ಗೌಸ್ ಇನ್ನೂ ಹಲವರು ಪಾಲ್ಗೊಂಡು ಧ್ವನಿಗೂಡಿಸಿದರು.
‘ನಗರಸಭೆಯ ಎಲ್ಲಾ ಆಸ್ತಿಗಳನ್ನು ಗುರುತಿಸಿ, ಬೇಲಿ ಹಾಕಿಸಿ, ಪೇಂಟ್‌ನಿಂದ ಬರೆಸುವುದಕ್ಕೆ ಕನಿಷ್ಠ 3 ತಿಂಗಳು ಬೇಕು. ಗುರುವಾರದಿಂದಲೇ ಆ ಪ್ರಕ್ರಿಯೆ ಆರಂಭಿಸಲಾಗುವುದು. ಇಲ್ಲಿ ನಮೂದಿಸಿದ 11.66 ಎಕರೆ ಪ್ರದೇಶದ ಸುತ್ತ ಬೇಲಿ ಹಾಕಿದ ಬಳಿಕ, ನಿರ್ಮಾಣವಾಗಿರುವ ಗುಡಿಸಲು, ಇತರ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಇಂತಹ ಕೃತ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ ಸಹ ಶಿಕ್ಷೆ ನಿಶ್ಚಿತ’ ಎಂದು ಆಯುಕ್ತ ಬಿ.ಟಿ.ಬಂಡಿವಡ್ಡರ್ ಸಭೆಗೆ ತಿಳಿಸಿದರು.
ರಕ್ಷಣೆ ಮತ್ತು ಶಿಕ್ಷೆ:
‘ಇದು ಇತ್ತೀಚೆಗೆ ಆಗಿರುವ ಅತಿಕ್ರಮಣ ಅಲ್ಲ, ನಗರಸಭೆಯ ಆಸ್ತಿಗಳನ್ನು ಸಂರಕ್ಷಿಸುವುದು ಅಗತ್ಯವಿದ್ದು, ಎಲ್ಲ ಸದಸ್ಯರ ಬೆಂಬಲ ಇದಕ್ಕೆ ಇರುತ್ತದೆ. ತಪ್ಪು ಮಾಡಿದ ಅಧಿಕಾರಿಗಳನ್ನು ಗುರುತಿಸುವ ಕೆಲಸ ಆಗಬೇಕು’ ಎಂದು ಉಪಾಧ್ಯಕ್ಷ ಎನ್.ರೂಪೇಶ್ ಕುಮಾರ್ ಹೇಳಿದರು.
ಬೆಕ್ಕಸಕ್ಕೆ ಭಾರಿ ನಷ್ಟ:
134 ಮಳಿಗೆಗಳ ಬಾಡಿಗೆ ಕೇವಲ ₹1.58 ಲಕ್ಷ: ನಗರಸಭೆಯ 134 ವ್ಯಾಪಾರ ಮಳಿಗೆಗಳು ಇದ್ದು, ಇದರಿಂದ ಬರುವ ಮಾಸಿಕ ಆದಾಯ ಕೇವಲ ₹1.58 ಲಕ್ಷ ಎಂಬುದನ್ನು ಉಲ್ಲೇಖಿಸಿದ ಎಲ್.ಎಸ್.ಆನಂದ್ ಮತ್ತು ಇತರರು, ಅಧಿಕಾರಿಗಳಿಂದ ಮಾಹಿತಿ ಕೇಳಿದರು. ಸದಸ್ಯರ ತೀವ್ರ ಒತ್ತಾಯದ ಬಳಿಕ 74 ಮಳಿಗೆಗಳ ಟೆಂಡರ್ ಅವಧಿ ಕೊನೆಗೊಂಡಿದ್ದನ್ನು ಅಧಿಕಾರಿಗಳು ಬಾಯಿಬಿಟ್ಟರು. ತಕ್ಷಣ ಮರುಟೆಂಡರ್ ಕರೆದು, ಸ್ಥಳೀಯ ದರಕ್ಕೆ ಕಡಿಮೆ ಇಲ್ಲದಂತೆ ಮಳಿಗೆಗಳನ್ನು ನೀಡಬೇಕು, ಲಕ್ಷಾಂತರ ಆದಾಯ ನಷ್ಟ ಮಾಡುತ್ತಿರುವಲ್ಲಿ ಅಧಿಕಾರಿಗಳ ಪಾತ್ರ ಇದ್ದೇ ಇದೆ. ಅಧಿಕಾರಿಗಳು ಮಾಡುವ ತಪ್ಪಿಗೆ ಸದಸ್ಯರು ಬೆಲೆ ತೆರಬೇಕಾಗುತ್ತದೆ ಎಂದು ಜೀವರತ್ನ, ಸಂತೋಷ್, ಜಂಬುನಾಥ, ಜಗದೀಶ್ ಗುಪ್ತ, ಹುಲಿಗಪ್ಪ ಸಹಿತ ಹಲವರು ಹೇಳಿದರು.
ನಗರಸಭೆ ಮಳಿಗೆಗಳ ಕುರಿತ ಒಪ‍್ಪಂದಪತ್ರವೇ ಕಾಣುತ್ತಿಲ್ಲ ಎಂಬ ಅಧಿಕಾರಿಗಳ ಉತ್ತರದಿಂದಲೂ ಕುಪಿತರಾದ ಸದಸ್ಯರು, ಮಳಿಗೆಗಳವರು ನೀಡುವ ಅಕ್ರಮ ದುಡ್ಡಿಗೆ ಅಧಿಕಾರಿಗಳು ಕೈಒಡ್ಡುತ್ತಿರುವ ಬಗ್ಗೆ ಪರೋಕ್ಷವಾಗಿಯೇ ಪ್ರಸ್ತಾಪಿಸಿದರು.
ನಗರಸಭೆ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆ ವಹಿಸಿದ್ದರು. ಕಡತ ನಾಪತ್ತೆ ಪ್ರಕರಣದಲ್ಲಿ ಏನು ನಡೆಯಿತು ಎಂದು ವಿವರಣೆ ಕೊಡಲು ಆಯುಕ್ತರು ಮುಂದಾಗಿದ್ದರು. ಆದರೆ ಸದಸ್ಯೆಯೊಬ್ಬರ ವಿಷಯಾಂತರ ಆಕ್ಷೇಪದ ಕಾರಣ ಅದು ಅಲ್ಲಿಗೇ ಕೊನೆಗೊಂಡಿತು.
@12bc = ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ
ಕಡತ ನಾಪತ್ತೆ ಪ್ರಕರಣದಿಂದ ಹೊಸಪೇಟೆ ನಗರಸಭೆ ರಾಜ್ಯದಲ್ಲಿ ಕುಖ್ಯಾತಿ ಗಳಿಸಿದೆ. ಹಾಲಿ ಸದಸ್ಯರಿಗೆ ಸಹ ತೀವ್ರ ಮುಖಭಂಗವಾಗಿದೆ. ಹೀಗಾಗಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತಮ್ಮ ಸಿಟ್ಟನ್ನು ಹಲವು ವಿಷಯಗಳ ಸಂದರ್ಭದಲ್ಲಿ ಅಧಿಕಾರಿಗಳನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡು ತೀರಿಸಿಕೊಂಡರು.
ಮೊದಲಿಗೆ ಧ್ವನಿವರ್ಧಕ ಸರಿ ಇಲ್ಲದ್ದು ಧ್ವನಿವರ್ಧಕ ಇಲ್ಲದಿದ್ದರೂ ದೊಡ್ಡ ಸದ್ದಿಗೆ ಕಾರಣವಾಯಿತು. ಕಳೆದ ಸಭೆಯಲ್ಲೂ ಧ್ವನಿವರ್ಧಕ ಸರಿ ಇರಲಿಲ್ಲ.
ರಾಜರಾಜೇಶ್ವರಿನಗರದಲ್ಲಿ ಒಂದೇ ದಿನ 500 ಫಾರಂ ನಂ.3 ಕೊಟ್ಟಿದ್ದು ದೊಡ್ಡ ಸಂಚಲನ ಮೂಡಿಸಿತು. ಸದಸ್ಯರಿಗೇ ಒಂದು ಫಾರಂ ನಂ.3 ಕೊಡಲು ಮೂರು ಮೂರು ತಿಂಗಳು ಸತಾಯಿಸುವ ಅಧಿಕಾರಿಗಳು, ದುಡ್ಡು ಕೊಟ್ಟವರಿಗೆ, ಪ್ರಭಾವಿಗಳಿಗೆ ಎರಡೇ ದಿನದಲ್ಲಿ 500 ಫಾರಂ ನಂ.3 ಕೊಡುತ್ತಾರೆ ಎಂದು ಹೇಳಿದ ಹಲವು ಸದಸ್ಯರು, ಕಂದಾಯ ಅಧಿಕಾರಿ ರಮೇಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಸದಸ್ಯರ ಎತ್ತುವ ವಿಷಯಗಳನ್ನು ನಮೂದಿಸಿಕೊಳ್ಳದ ಅಧಿಕಾರಿಯ ಬೆವರಳಿಸಿದ ಸದಸ್ಯರು, ‘ನಾವೇನು ಇಲ್ಲಿ ಟೈಂಪಾಸ್ ಮಾಡಲು ಬಂದಿದ್ದೇವೆಯೇ’ ಎಂದು ಹೇಳಿ ಅಧಿಕಾರಿ ಒಂದನೇ ತರಗತಿ ವಿದ್ಯಾರ್ಥಿ ಬಳಪ ಹಿಡಿದು ಕುಳಿತುಕೊಳ್ಳುವ ರೀತಿಯಲ್ಲಿ ಗಂಭೀರವಾಗಿ ಬರೆಯುವಂತೆ ಮಾಡಿದರು.
‘ಮುಕ್ತಿಧಾಮದಿಂದ ಮುಕ್ತಿ ಕೊಡಿ’
ಜಂಬುನಾಥ ರಸ್ತಯಲ್ಲಿರುವ ಮುಕ್ತಿಧಾಮದಿಂದ ಸುತ್ತಮುತ್ತಲಿನ ಜನರಿಗೆ ಬಹಳ ಕಷ್ಟ ಎದುರಾಗಿದೆ. ಹೆಣ ಸುಡುವ ದುರ್ವಾಸನೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅದನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸದಸ್ಯ ಶೆಕ್ಷಾವಲಿ ಹೇಳಿದಾಗ ಇತರ ಹಲವು ಸದಸ್ಯರು ತೀವ್ರ ಗದ್ದಲ ಎಬ್ಬಿಸಿದರು. ಅಧ್ಯಕ್ಷರ ವಿಶೇಷ ಅನುಮತಿ ಮೇರೆಗೆ ಬಂದ ಪ್ರಸ್ತಾವ ಇದಾದ ಕಾರಣ ಈ ದಿನ ವಿವರವಾದ ಚರ್ಚ ಅಸಾಧ್ಯ, ಮುಂದಿನ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಬಹುದು. ಅದಕ್ಕಿಂತ ಮೊದಲಾಗಿ ಬೇರೆ ಬೇರೆ ಜನ, ಸಮುದಾಯದ ಜತೆಗೂ ಚರ್ಚಿಸಬೇಕಾಗುತ್ತದೆ ಎಂದು ಉಪಾಧ್ಯಕ್ಷ ರೂಪೇಶ್ ಕುಮಾರ್ ಹೇಳಿದರು.
ನಗರಸಭೆ ಆಸ್ತಿ ಕಬಳಿಕೆ ಸಹಿಸಲ್ಲ, ಯಾವ ಒತ್ತಡಕ್ಕೂ ಮಣಿಯದೆ ತೆರವು ಕಾರ್ಯಾಚರಣೆ ನಡೆಸುವುದು ನಿಶ್ಚಿತ
ಬಿ.ಟಿ.ಬಂಡಿವಡ್ಡರ್, ಆಯುಕ್ತ
ಸಭೆಯ ವಿಶೇಷತೆಗಳು:
ಅಕ್ರಮ ತೆರವು ಸರ್ಕಾರಿ ಆಸ್ತಿ ರಕ್ಷಣೆಗೆ ನಿರ್ಧಾರ.
ಅವಧಿ ಮುಗಿದ 74ಮಳಿಗೆಗಳಿಗೆ ಟೆಂಡರ್.
ಜಕಾತಿ: ಕಳೆದ ಸಭೆಯ ನಿರ್ಣಯ ಈಗ ಜಿಲ್ಲಾಧಿಕಾರಿಗಳ ಕಚೇರಿಗೆ ರವಾನೆ!
ಹೆಚ್ಚುತ್ತಿರುವ ಡೆಂಘಿ, 6 ಫಾಗಿಂಗ್ ಯಂತ್ರಗಳನ್ನು ಸಮರ್ಥ ಬಳಸಲು ಸೂಚನೆ.
ಒಳಚರಂಡಿ, ನೀರಿನ ಸಮಸ್ಯೆಯನ್ನು ಫೋಟೊ ಸಹಿತ ತೋರಿಸಿದ ಸದಸ್ಯೆ ಮುನ್ನಿ