ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಅಧಿಕಾರ ಸ್ವೀಕಾರ ನಗರದ ಅಭಿವೃದ್ಧಿಗೆ ಆದ್ಯತೆ

ಗಂಗಾವತಿ,ನಂ,07: ಅಧಿಕಾರ ದೊಡ್ಡ ಜವಾಬ್ದಾರಿಯಾಗಿದ್ದು, ಎಲ್ಲ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ನಂಬಿಕೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ನಗರಸಭೆ ನೂತನ ಅಧ್ಯಕ್ಷೆ ಮಾಲಾಶ್ರೀ ಸಂದೀಪ್ ಅಭಿಪ್ರಾಯಪಟ್ಟರು.
ನಗರದ ನಗರಸಭೆ ಕಚೇರಿಯಲ್ಲಿ ಶುಭ ಶುಕ್ರವಾರ ಮಧ್ಯಾಹ್ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
ನಗರಸಭೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದರ ಜೊತೆಗೆ ಎಲ್ಲ ವಾರ್ಡಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಮಾತನಾಡಿ, ಅನ್ಯ ವಿಷಯಗಳಿಗೆ ತಲೆ ಹಾಕದೇ ನಗರದ ಸ್ವಚ್ಛತೆ, ಸೌಂದರ್ಯಕ್ಕೆ ಆದ್ಯತೆ ನೀಡುತ್ತಿವೆ ಎಂದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಮಾಜಿ ಸಂಸದ ಶಿವರಾಮೇಗೌಡ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಸುಧಾ ಸೋಮನಾಥ ಅವರು, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ಸುಧಾ ಅವರು ಮುಖ್ಯ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.
ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಗಂಗಾವತಿಯ ಮತದಾರರು ನಗರಸಭೆ ಸದಸ್ಯರಿಗೆ ಏಳು ವರ್ಷ ಅಧಿಕಾರ ನಡೆಸಲು ಅವಕಾಶ ನೀಡಿದ್ದು, ಅವರ ವಿಶ್ವಾಸಕ್ಕೆ ದಕ್ಕೆ ಬರದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ನಗರಸಭೆಗೆ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪಕ್ಷಭೇದ ಮರೆತು ಸರ್ವ ಸದಸ್ಯರ ವಾರ್ಡಗಳ ಅಭಿವೃದ್ಧಿಗೆ ಚಿಂತನೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯರಾದ ಎಫ್.ರಾಘವೇಂದ್ರ, ಮನೋಹರಸ್ವಾಮಿ, ಕಾಶಿಂಸಾಬ್ ಗದ್ವಾಲ್, ಮುಸ್ತಾಕ ಅಲಿ, ಸುನೀತಾ ಶ್ಯಾವಿ ಸೇರಿದಂತೆ ಇತರರಿದ್ದರು.


ಅಧಿಕಾರ ಹಸ್ತಾಂತರ
ಇದಕ್ಕೂ ಮೊದಲು ನಡೆದ ಸರಳ ಕಾರ್ಯಕ್ರಮದಲ್ಲಿ ಪೌರಾಯುಕ್ತ ಅರವಿಂದ ಜಮಖಂಡಿ, ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಕಡತ ನೀಡಿ ಅಧಿಕಾರ ಹಸ್ತಾಂತರ ಮಾಡಿದರು. ನಂತರ ಪಕ್ಷದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು.


2 ವರ್ಷ 2 ತಿಂಗಳ ನಂತರ ಪ್ರಥಮ ಬಾರಿಗೆ ನಗರಸಭೆಗೆ ಆಡಳಿತ ಮಂಡಳಿ ರಚನೆಯಾಗಿದೆ. ಅಮೃತ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿ ನಡೆಯುತ್ತಿವೆ. ನಗರದ ಹಲವು ಸಮಸ್ಯೆ ಪಟ್ಟಿ ಮಾಡಿ, ಸಮಸ್ಯೆಗೆ ತಕ್ಷಣ ಸ್ಪಧಿಸಬೇಕು. ನಗರಸಭೆಗೆ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು.
-ಶಿವರಾಮಗೌಡ, ಮಾಜಿ ಸಂಸದ,


ಅನ್ಯ ವಿಷಯಗಳಿಗೆ ತಲೆ ಹಾಕದೇ ನಗರದ ಸ್ವಚ್ಛತೆ, ಸೌಂದರ್ಯಕ್ಕೆ ಹಾಗೂ ಅಭಿವೃದ್ದಿ ಕಾರ್ಯಕ್ಕೆ ಆದ್ಯತೆ ನೀಡುತ್ತಿವೆ.
-ಶ್ಯಾಮೀದ್ ಮನಿಯಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ