ಸಂಜೆವಾಣಿ ವಾರ್ತೆ
ಸಿರುಗುಪ್ಪ: 2023 ಮೇ.02 ರಂದು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಡಳಿತ ಅವಧಿ ಮುಗಿದು ಒಂದುವರೆ ತಿಂಗಳು ಕಳೆದರೂ ಇನ್ನೂ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿಲ್ಲ. ಸದ್ಯ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿಯವರು ಆಡಳಿತಾಧಿಕಾರಿಯಾಗಿದ್ದಾರೆ. ಆದರೂ ಯಾವುದೇ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯುತ್ತಿಲ್ಲವೆಂದು ನಗರದ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ನಗರಸಭೆಗೆ 5ವರ್ಷದ ಅವಧಿಯಲ್ಲಿ ಕಳೆದ ಎರಡುವರೆ ವರ್ಷ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದು ವರ್ಗ-ಎ ಮಹಿಳೆ ವರ್ಗಕ್ಕೆ ಮೀಸಲಾತಿ ಆದೇಶ ನೀಡಿತ್ತು. ಮೊದಲನೆ ಅವಧಿಯಲ್ಲಿ ಅಧ್ಯಕ್ಷರಾಗಿ ಡಿ.ನಾಗರಾಜ 12 ತಿಂಗಳು, ಕೆ.ಸುಶೀಲಮ್ಮ ವೆಂಕಟರಾಮರೆಡ್ಡಿ ಅಧ್ಯಕ್ಷರಾಗಿ 18 ತಿಂಗಳು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಗುಲ್ಜಾರಿಬೇಗಂ 30 ತಿಂಗಳು ಕಾರ್ಯನಿರ್ವಹಿಸಿದ್ದು, ಇವರ ಆಡಳಿತ ಅವಧಿ ಮುಗಿದಿದ್ದರೂ ಇನ್ನೂ ಮೀಸಲಾತಿ ಪ್ರಕಟವಾಗದೇ ಇರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಖಾಲಿಯಾಗಿದ್ದು, ನಗರಸಭೆಯಲ್ಲಿ ಅಧಿಕಾರಿಗಳದ್ದೆ ದರ್ಬಾರು ನಡೆಯುತ್ತಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ನಗರ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ ತೆರವಾಗಿರುವ ವಿವಿಧ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮುಂದಿನ ಎರಡುವರೆ ವರ್ಷದ ಅವಧಿಯ ಮೀಸಲಾತಿ ಘೋಷಣೆ ಮಾಡದೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಅದರಂತೆ ತಾಲೂಕಿನ ನಗರಸಭೆಗೂ ಹೊಸ ಮೀಸಲಾತಿ ಬರುವ ವರೆಗೂ ಜಿಲ್ಲಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿದೆ.
ಕಳೆದ ಒಂದೂವರೆ ತಿಂಗಳಿಂದ ರಾಜ್ಯದ ಕೆಲವು ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೊದಲನೇಯ ಅವಧಿ ಆಡಳಿತ, ಎರಡುವರೆ ವರ್ಷ ಈಗಾಗಲೆ ಮುಗಿದಿದೆ, ಇನ್ನುಳಿದ ಎರಡುವರೆ ವರ್ಷದ ಅವಧಿಗೆ ತಕ್ಷಣದಲ್ಲಿ ನಗರಸಭೆ ಕಾಯಿದೆ ಪ್ರಕಾರ ರೊಟೇಷನ್ ಪದ್ಧತಿಯಂತೆ ಸರ್ಕಾರ ಮೀಸಲಾತಿ ಘೋಷಣೆ ಮಾಡಿದರೆ ಈ ಸ್ಥಾನಗಳಿಗೆ ಚುನಾವಣೆ ನಡೆದು ತೆರವಾಗಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತುಂಬಬಹುದು. ಆಡಳಿತಾದಿಕಾರಿ ನೇಮಕ ಮಾಡಿರುವುದರಿಂದ ನಗರಸಭೆ ಸದಸ್ಯರು ಸಾಮಾನ್ಯ ಸಭೆ ನಡೆಸಿಲ್ಲ, ಯಾವುದೇ ಹೊಸ ಕ್ರಿಯಾಯೋಜನೆ ಸಿದ್ದಮಾಡಿಕೊಂಡಿಲ್ಲ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗದೆ ಖಾಲಿ ಇರುವುದರಿಂದ ನಗರಸಭೆಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ, ಮಾಡಿದ್ದೇ ಕೆಲಸ ಎನ್ನುವಂತಾಗಿದ್ದು, ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ, ಆದ್ದರಿಂದ ಸರ್ಕಾರ ಶೀಘ್ರವಾಗಿ ಮೀಸಲಾತಿ ಪ್ರಕಟಿಸಬೇಕು ಎಂದು ನಗರ ನಿವಾಸಿಗಳಾದ ಹಾಜಿಸಾಬ್, ಹೆಚ್.ಎಸ್.ಶೇಕಣ್ಣ ತಿಳಿಸಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುವವರೆಗೆ ಜಿಲ್ಲಾಧಿಕಾರಿಗಳು ನಮ್ಮ ನಗರಸಭೆಯ ಆಡಳಿತಾಧಿಕಾರಿಯಾಗಿರುತ್ತಾರೆಂದು ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ತಿಳಿಸಿದ್ದಾರೆ.