ನಗರಸಭಾ ಸದಸ್ಯ ಎಚ್.ಕೆ.ಮಂಜುನಾಥ ಸದಸ್ಯತ್ವ ರದ್ದು ? ಜಿಲ್ಲಾಧಿಕಾರಿಗಳಿಂದ ಇಲಾಖೆಗೆ ಶಿಫಾರಸ್ತು


ಸಂಜೆವಾಣಿ ವಾರ್ತೆ
ಹೊಸಪೇಟೆ ಅ18: ಹೊಸಪೇಟೆ ನಗರಸಭೆಗೆ ನಡೆದ ಚುನಾವಣೆ ವೇಳೆ ಮಾಹಿತಿ ಮುಚ್ಚಿಟ್ಟಿದ್ದ ಆರೋಪದ ಮೇರೆಗೆ 28ನೇ ವಾರ್ಡ್‌ನಿಂದ ಆಯ್ಕೆಯಾದ ಎಚ್‌.ಕೆ.ಮಂಜುನಾಥ್‌ ಅವರ ಸದಸ್ಯತ್ವ ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಅವರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅವರಿಗೆ ಶಿಫಾರಸು ಮಾಡಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ನೀಡುವ ಪ್ರಮಾಣವಚನ ಶಪಥಪತ್ರದಲ್ಲಿ ಕೆಲವೊಂದು ಮಾಹಿತಿಗಳನ್ನು ಮುಚ್ಚಿಟ್ಟಿದ್ದರು. ಇದರ ವಿರುದ್ಧ ಭಾಸ್ಕರ ಗೌಡ ಎಂಬುವವರು ದೂರು ಅರ್ಜಿಸಲ್ಲಿಸಿದ್ದರು. ಈ ಸಂಬಂಧ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರಿಂದ ತನಿಖಾ ವರದಿ ತರಿಸಿಕೊಂಡಾಗ  ಮಾಹಿತಿಯನ್ನು ಮುಚ್ಚಿಟ್ಟಿದ್ದು ಸಾಬೀತಾಗಿದೆ. ಹೀಗಾಗಿ ಅವರ ಸದಸ್ಯತ್ವ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಅವರು ತಮ್ಮ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.
‘ಮಂಜುನಾಥ್‌ ಅವರು ನಗರಸಭೆ 28ನೇ ವಾರ್ಡ್‌ನಿಂದ ಸ್ಪರ್ಧಿಸಲು ಬಯಸಿ 13–12–2021ರಂದು ನಾಮಪತ್ರ ಸಲ್ಲಿಸಿದಾಗ ತಮ್ಮ ವಿರುದ್ಧ ಇರಬಹುದಾದ ಅಪರಾಧ ಪ್ರಕರಣಗಳ ಮಾಹಿತಿ ನೀಡಿಲ್ಲ. ಆದರೆ ಹೊಸಪೇಟೆಯ ಬಡಾವಣೆ ಪೊಲೀಸ್ ಠಾಣೆ ಮತ್ತು ಬಳ್ಳಾರಿಯ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಎಚ್‌.ಕೆ.ಮಂಜುನಾಥ್‌ ವಿರುದ್ಧ ಪ್ರಕರಣಗಳು ದಾಖಲಾಗಿರುವುದು ಪ್ರಥಮ ವರ್ತಮಾನ ವರದಿಗಳಿಂದ ಕಂಡುಬಂದಿರುತ್ತದೆ ಎಂಬ ವರದಿಯನ್ನು ಎಸಿ ಅವರು ನೀಡಿದ್ದಾರೆ. ಎಸಿ ಮತ್ತು ತಹಶೀಲ್ದಾರ್‌ ಅವರು ನೀಡಿದ ತನಿಖಾ ವರದಿಯನ್ನು ಪರಿಶೀಲಿಸಿದ ಬಳಿಕ ಮಂಜುನಾಥ್‌ ಅವರು ಈ ಮಾಹಿತಿಗಳನ್ನು ಮುಚ್ಚಿಟ್ಟಿದ್ದು ದೃಢಪಟ್ಟಿದೆ. ಹೀಗಾಗಿ ಅವರ ಸದಸ್ಯತ್ವ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅವರು ತಮ್ಮ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ. .
ಕಳೆದ ನಗರಸಭೆ ಚುನಾವಣೆ ವೇಳೆ 28ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಎಚ್‌.ಕೆ.ಮಂಜುನಾಥ್‌ ಅವರು ಬಿಜೆಪಿಯ ಚಂದ್ರಕಾಂತ್ ಕಾಮತ್‌ ವಿರುದ್ಧ 200 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕೆಲವರ ರಾಜಕೀಯ ಕುತಂತ್ರದಿಂದ ಈ ಗೆಲುವು ಲಭಿಸಿದೆ ಎಂಬ ಮಾತು ಆಗ ಹರಿದಾಡಿತ್ತು.
ಪ್ರಕರಣವೇ ಇರಲಿಲ್ಲ–ಮಾಹಿತಿ ಕೊಡುವುದು ಎಲ್ಲಿಂದ?
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್‌.ಕೆ.ಮಂಜುನಾಥ್‌, ‘ವಿಳಾಸ, ಫೋನ್ ನಂಬರ್ ಇಲ್ಲದ ವ್ಯಕ್ತಿ ಸಲ್ಲಿಸಿದ ದೂರು ಅರ್ಜಿಗೆ ಬೆಲೆ ಇಲ್ಲ. ಮೇಲಾಗಿ ನಾಮಪತ್ರ ಸಲ್ಲಿಸುವ ವೇಳೆ ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಹೀಗಿರುವಾಗ ಅದನ್ನು ಪ್ರಮಾಣಪತ್ರದ ಜತೆಗೆ ಸಲ್ಲಿಸುವುದಾದರೂ ಎಲ್ಲಿಂದ?’ ಎಂದು ಪ್ರಶ್ನಿಸಿದ್ದಾರೆ.
’ಎಸಿ ಅವರು ನನ್ನನ್ನು ಕರೆಸಿ ವಿಚಾರಿಸಿದ್ದರು. ತಹಶೀಲ್ದಾರ್‌ ಸಹ ವಿಚಾರಿಸಿದ್ದರು. ನಿಮ್ಮದೇನೂ ತಪ್ಪಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು. ಅದೇ ರೀತಿ ಅವರು ಚುನಾವಣಾ ಅಧಿಕಾರಿಗೆ ವರದಿ ಸಲ್ಲಿಸಿರುವ ಸಾಧ್ಯತೆ ಇದೆ. ಬಳಿಕ ಏನಾಯಿತು ಎಂದು ನನಗೆ ಗೊತ್ತಿಲ್ಲ. ಪೊಲೀಸ್‌ ಠಾಣೆಯಲ್ಲಿ ನನ್ನ ವಿರುದ್ಧ ದೂರು ದಾಖಲಾಗಿದ್ದರೆ ನಾನು ಖಂಡಿತ ಅದನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸುತ್ತಿದ್ದೆ’ ಎಂದು ಹೇಳಿದ್ದಾರೆ.