ನಗರಸಭಾ ವ್ಯಾಪ್ತಿ ಕೊರೊನಾ ಸೋಂಕಿತರಿಗೆ ‘ಔಷಧಿ ಕಿಟ್’

ಪುತ್ತೂರು, ಮೇ ೨೦- ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಐಸೋಲೇಶನ್ ನಲ್ಲಿರುವ ಕೊರೊನಾ ಸೋಂಕಿತರಿಗೆ ಔಷಧಿ ಕಿಟ್‌ನ್ನು ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ಪುರಭವನದಲ್ಲಿ ಮಂಗಳವಾರ ಸಂಜೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪುತ್ತೂರಿನ ತಜ್ಞ ವೈದ್ಯರ ಸಲಹೆಯಂತೆ ಸುಮಾರು ೫೦೦ ಮಂದಿಗೆ ರೂ.೨೫೦ ವೆಚ್ಚದ ಔಷಧಿ ಕಿಟ್ ನ್ನು ವಿತರಣೆ ಮಾಡಲಾಗುತ್ತಿದೆ. ಇದರ ವೆಚ್ಚವಾಗಿರುವ ರೂ. ೧ ಲಕ್ಷವನ್ನು ರಾಜೇಶ್ ಪವರ್ ಪ್ರೆಸ್ ಮಾಲೀಕ ರಘುನಾಥ ರಾವ್ ಅವರು ಭರಿಸಿದ್ದಾರೆ. ಗ್ರಾಮಾಂತರ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ವಿತರಣೆ ನಡೆಯಲಿದೆ. ಇಂತಹ ಒಂದು ಪ್ರಯತ್ನ ಪುತ್ತೂರಿನಲ್ಲಿ ಪ್ರಥಮವಾಗಿ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಕಾಳಜಿಯಿಂದ ಪ್ರಸ್ತುತ ಕೊರೊನಾ ನಿಯಂತ್ರಣದಲ್ಲಿದೆ. ಕೊರೊನಾ ಮುಕ್ತ ಪುತ್ತೂರು ನಿರ್ಮಾಣದಲ್ಲಿ ಎಲ್ಲರ ಸಹಕಾರ ಬೇಕಾಗಿದೆ ಎಂದು ಅವರು ಹೇಳಿದರು.
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ನಗರಸಭೆಯ ವತಿಯಿಂದ ಈಗಾಗಲೇ ಆಶಾ ಕಾರ್ಯಕರ್ತೆಯರಿಗೆ ಫಲ್ಸ್ ವಾಕ್ಟಿಮೀಟರ್ ಹಾಗೂ ಕೊಡೆಯನ್ನು ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೂ ಕೊಡೆ, ಮಾಸ್ಕ್ ಹಾಗೂ ಗ್ಲೌಸ್ ಗಳನ್ನು ಸುಮಾರು ರೂ.೭೫ ಸಾವಿರ ವೆಚ್ಚದಲ್ಲಿ ವಿತರಣೆ ಮಾಡಲಾಗುವುದು. ನಗರಸಭಾ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ಕಾರ್ಯ ನಡೆಯುತ್ತಿದ್ದು, ಶೇ.೭೫ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು. ವೈದ್ಯಾಧಿಕಾರಿ ಡಾ. ದೀಪಕ್ ರೈ ಅವರು ಸೋಂಕಿತರಿಗೆ ನೀಡಲಾದ ಔಷಧಿ ಕಿಟ್ ನಲ್ಲಿರುವ ೭ ಔಷಧಿಗಳ ಬಗ್ಗೆ ಹಾಗೂ ಅದರ ಸೇವನೆ ಕುರಿತು ಮಾಹಿತಿ ನೀಡಿದರು