ನಗರಸಭಾ ವ್ಯಾಪ್ತಿಯಲ್ಲಿ ‘ಆಸ್ತಿ ತೆರಿಗೆ’ ಹೆಚ್ಚಳಕ್ಕೆ ನಿರ್ಣಯ

ಪುತ್ತೂರು, ಮಾ.೧೬- ಕರ್ನಾಟಕ ಪುರಸಭೆ ಅಧಿನಿಯಮಗಳಿಗೆ ತಿದ್ದುಪಡಿ ಮಾಡಿ ನಗರಸಭಾ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಆಧಾರದ ಮೇಲೆ ವಸೂಲಾತಿ ಮಾಡುವಂತೆ ರಾಜ್ಯ ಪೌರಾಡಳಿತ ನಿರ್ದೇಶಕರ ಸುತ್ತೋಲೆಯಲ್ಲಿ ನೀಡಲಾಗಿರುವ ಸೂಚನೆ ಮೇರೆಗೆ ಶೇ.೦.೧ ರಿಂದ ಶೇ.೦.೨ಗೆ ಹೆಚ್ಚಳಗೊಳಿಸಲು ಸೋಮವಾರ ನಡೆದ ಪುತ್ತೂರು ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪುತ್ತೂರು ನಗರಸಭೆಯ ಅಧ್ಯಕ್ಷ ಕೆ. ಜೀವಂಧರ ಜೈನ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಖಾಲಿ ಜಾಗಕ್ಕೆ ಆಸ್ತಿ ತೆರಿಗೆಯನ್ನು ಹೆಚ್ಚಳಗೊಳಿಸುವ ಕುರಿತು ಚರ್ಚೆ ನಡೆಸಲಾಯಿತು. ಸುಮಾರು ೫ ಸೆಂಟ್ಸ್‌ನಷ್ಟು ಜಾಗವನ್ನು ಹೊಂದಿರುವಂತಹ ಬಡವರ್ಗಕ್ಕೆ ಇದರಿಂದ ಯಾವುದೇ ರೀತಿಯ ಹೆಚ್ಚುವರಿ ಹೊರೆ ಬೀಳಲಾರದು. ಸವಕಳಿ ಪದ್ಧತಿಯಿಂದ ವರ್ಷದಿಂದ ವರ್ಷಕ್ಕೆ ತೆರಿಗೆ ಮೊತ್ತವು ಕಡಿಮೆಯಾಗುತ್ತಾ ಬರುತ್ತದೆ. ತೆರಿಗೆ ಪ್ರಮಾಣವನ್ನು ಹೆಚ್ಚಿಸಿರುವುದರಿಂದ ನಗರಸಭೆಗೆ ಹೆಚ್ಚುವರಿ ಆದಾಯ ಹರಿದು ಬರಲಿದೆ. ಇದರಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಮೊತ್ತ ಲಭಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ತೆರಿಗೆ ವಿಧಿಸಲಾಗುವುದು. ೨೧೭೮ ಚದರ ಅಡಿಯಷ್ಟಿರುವ ೫ ಸೆಂಟ್ಸ್ ಜಾಗದಲ್ಲಿ ಒಂದು ಸಾವಿರ ಚದರ ಅಡಿಯಷ್ಟು ಮನೆಯಿದ್ದರೆ ಅದಕ್ಕೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಒಂದು ಸಾವಿರ ಚರದ ಅಡಿ ಸ್ಥಳಕ್ಕೆ ಯಾವುದೇ ತೆರಿಗೆ ವಿಧಿಸಲಾವುದಿಲ್ಲ. ಉಳಿದ ೧೭೮ ಚದರ ಅಡಿಗೆ ಮಾತ್ರ ತೆರಿಗೆ ವಿಧಿಲಾಗುವುದು. ಅದೇ ರೀತಿ ಮನೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಒಂದು ಸಾವಿರ ಚದರ ಅಡಿಗೆ ತೆರಿಗೆ ವಿಧಿಸಲಾಗುವುದಿಲ್ಲ. ಉಳಿದ ಜಾಗಕ್ಕೆ ತೆರಿಗೆ ವಿಧಿಸಲಾಗುತ್ತದೆ ಎಂದು ಜೀವಂಧರ ಜೈನ್ ವಿವರಿಸಿದರು.
ಯಾವ ಯಾವ ಪ್ರದೇಶಗಳಿಗೆ ಎಷ್ಟೆಷ್ಟು ತೆರಿಗೆ ವಿಧಿಸಲಾಗುವುದು ಎಂಬ ಕುರಿತು ಸ್ಪಷ್ಟ ಮಾಹಿತಿ ನೀಡಬೇಕಾಗಿದೆ ಎಂದು ಸದಸ್ಯ ಮಹಮ್ಮದ್ ರಿಯಾಝ್ ಹೇಳಿದಾಗ, ಪ್ರದೇಶಾವಾರು ತೆರಿಗೆ ವಿಧಿಸಲಾಗುವುದಿಲ್ಲ. ಜನರಿಗೆ ಹೊರೆಯಾಗದ ರೀತಿಯಲ್ಲಿ ತೆರಿಗೆ ವಿಧಿಸಲಾಗುವುದು. ಶೇ. ೦.೭೨ ರಷ್ಟು ಆಸ್ತಿ ತೆರಿಗೆ ವಿಧಿಸಲಾಗುವುದು. ಸವಕಳಿ ಪದ್ಧತಿಯಂತೆ ತೆರಿಗೆ ವಿಧಿಸುವುದರಿಂದ ಕಟ್ಟಡಗಳಿಗೆ ಹೆಚ್ಚಿನ ಹೊರೆಯಾಗದು ಎಂದು ಅಧ್ಯಕ್ಷರು ತಿಳಿಸಿದರು. ಸದಸ್ಯರಾದ ಪಿ.ಜಿ. ಜಗನ್ನಿವಾಸ ರಾವ್, ಭಾಮಿ ಅಶೋಕ್ ಶೆಣೈ ಅವರು ನಗರಸಭೆ ಹೆಚ್ಚಿಸಲು ಉದ್ದೇಶಿಸಿರುವ ತೆರಿಗೆಯ ವಿವರಗಳನ್ನು ಸರಳೀಕರಣಗೊಳಿಸಿ ಮಾಹಿತಿ ನೀಡಿದರು.
ನಗರಸಭೆಯ ಉಪಾದ್ಯಕ್ಷೆ ವಿದ್ಯಾ ಆರ್. ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ
ಗೌರಿ ಬನ್ನೂರು ಉಪಸ್ಥಿತರಿದ್ದರು. ಪೌರಾಯುಕ್ತೆ ರೂಪಾ ಆರ್. ಶೆಟ್ಟಿ ಸ್ವಾಗತಿಸಿದರು.
ಮಾರುಕಟ್ಟೆ ಏಲಂ ಮಾತುಕತೆಗೆ ನಿರ್ಣಯ
ನಗರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆ ಕೊಟೇಶನ್ ಏಲಂ ಕರೆಯಲಾಗಿದ್ದು, ಈ ಪೈಕಿ, ಸಂತೆ ಮಾರುಕಟ್ಟೆ, ಒಣಮೀನು ಮಾರುಕಟ್ಟೆ ಮತ್ತು ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ತಂಗುದಾಣದ ಬಿಡ್ ಮೊತ್ತ ಸರ್ಕಾರಿ ಸವಾಲಿಗಿಂತ ಕಡಿಮೆಯಿದ್ದು, ಈಗಾಗಲೇ ಅತೀ ಹೆಚ್ಚು ಬಿಡ್ ಹಾಕಿರುವವರನ್ನು ಕರೆಸಿ ಸರ್ಕಾರಿ ಸವಾಲಿನಷ್ಟು ಪಾವತಿಸುವಂತೆ ಮಾತುಕತೆ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಒಂದು ವೇಳೆ ಬಿಡ್ಡುದಾರರು ಇದಕ್ಕೊಪ್ಪದಿದ್ದಲ್ಲಿ ಅಲ್ಪಾವಧಿ ಮರು
ಟೆಂಡರ್ ಕರೆಯೋಣ ಎಂದು ಜೀವಂಧರ್ ಜೈನ್ ಹೇಳಿದಾಗ ಸಭೆ ಒಪ್ಪಿಗೆ ಸೂಚಿಸಿತು.