ಬೆಂಗಳೂರು,ಮೇ.20- ನಗರದ ಹಲವೆಡೆ ಇಂದು ಸಂಜೆ ಸಾಧಾರಣ ಮಳೆಯಾಗಿದ್ದರೆ,ಮತ್ತೆ ಕೆಲವಡೆ ಬಿರುಗಾಳಿ, ಗುಡುಗು ಹಾಗೂ ಮಿಂಚು ಸಹಿತ ಭಾರೀ ಮಳೆ ಸುರಿದಿದೆ.
ಜಯನಗರ, ಜೆಪಿ ನಗರ, ಬನಶಂಕರಿ, ಶಾಂತಿನಗರ, ಚಾಮರಾಜಪೇಟೆ, ರಾಜಾಜಿನಗರ, ಚಂದ್ರಲೇಔಟ್, ಮೆಜೆಸ್ಟಿಕ್, ಸಿಟಿ ಮಾರ್ಕೇಟ್, ರಿಚ್ಮಂಡ್ ರಸ್ತೆ, ನಂಜಪ್ಪ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬೇಸಗೆಯ ಬೇಗೆ ಅನುಭವಿಸಿದ್ದ ನಗರವಾಸಿಗಳಿಗೆ ತುಸು ತಂಪೆರೆದಂತಾಗಿದೆ.
ನಗರದಲ್ಲಿ ವಾರಾಂತ್ಯ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿನ್ನೆಯೇ ಮುನ್ಸೂಚನೆ ನೀಡಿತ್ತು.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಿಕ್ಕಿಬಳ್ಳಾಪುರ, ಕೋಲಾರ, ಚಾಮರಾಜನಗರ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಮುಂದಿನ ಐದು ದಿನಗಳಲ್ಲಿ ಭಾರೀ ಮಳೆ ಬರುವ ಸಾಧ್ಯತೆ ಇದೆ. ಈ ವೇಳೆ ಕರಾವಳಿ ಮತ್ತು ಉತ್ತರ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ ಮಳೆ ಸುರಿಸುವ ಮಾರುತಗಳು ಸಕ್ರಿಯವಾಗಿರಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದ ಹಲವೆಡೆ ಮಳೆಯಾಗಿರುವ ಬಗ್ಗೆ ಜನರು ಸಾಮಾಜಿಕ ಮಾಧ್ಯಮಗಳಲ್ಲಿಯೂ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.