ನಗರದ ಹಲವು ಶಿವ ದೇವಾಲಯಗಳಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ

ಸಂಜೆವಾಣಿ ನ್ಯೂಸ್
ಮೈಸೂರು, ಮಾ.8:- ಮಹಾಶಿವರಾತ್ರಿ ಪ್ರಯುಕ್ತ ಮೈಸೂರಿನ ಹಲವು ಶಿವ ದೇವಾಲಯಗಳಲ್ಲಿ ಇಂದು ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.
ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದಲ್ಲಿ ಇಂದು ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧಾರಣೆ ಮಾಡಿ, ವಿಶೇಷ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ಕಾಣಿಕೆಯಾಗಿ ನೀಡಿದ್ದ ಕೊಳಗದ ಮಾದರಿಯಲ್ಲಿರುವ ಈ ಚಿನ್ನದ ಮುಖವಾಡವನ್ನು ವರ್ಷಕ್ಕೊಮ್ಮೆ ಮಹಾಶಿವರಾತ್ರಿ ದಿನ ತ್ರಿನೇಶ್ವರನಿಗೆ ಧಾರಣೆ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಮುಂಜಾನೆಯಿಂದಲೇ ವಿವಿಧ ಪೂಜೆ ಕೈಕರ್ಯ ನೆರವೇರಲಿದೆ. ಈ ಬಾರಿ ಶಿವರಾತ್ರಿ ಬಳಿಕ ಶನಿವಾರ, ಭಾನುವಾರ ರಜೆ ಹಿನ್ನೆಲೆ ಭಕ್ತರಿಗೆ 3 ದಿನ ಚಿನ್ನದ ಕೊಳಗ ವೀಕ್ಷಣೆಗೆ ದೇವಾಲಯದಿಂದ ಅವಕಾಶ ಮಾಡಿಕೊಡಲಾಗುತ್ತದೆ.
ಚಿನ್ನದ ಕೊಳಗದ ಹಿನ್ನೆಲೆ:
11 ಕೆಜಿ ಅಪರಂಜಿ ಚಿನ್ನದಿಂದ ಮಾಡಿರುವ ಶಿವನ ಮುಖವಾಡದ ಕೊಳಗವನ್ನ ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ತ್ರಿನೇಶ್ವರಗೆ ಮಾಡಿಸಿಕೊಟ್ಟಿದ್ದರು. ಮಹಾರಾಜರಿಗೆ ಗಂಡು ಮಕ್ಕಳು ಇರಲಿಲ್ಲ. ಹೀಗಾಗಿ ನನಗೆ ಗಂಡು ಮಕ್ಕಳು ಜನಿಸಿದರೆ ಅರಮನೆಯ ತ್ರಿನೇಶ್ವರ, ನಂಜನಗೂಡಿನ ನಂಜುಂಡೇಶ್ವರ ಹಾಗೂ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರನಿಗೆ ಚಿನ್ನದ ಕೊಳಗವನ್ನ ಮಾಡಿಕೊಡುವುದಾಗಿ ದೇವರಲ್ಲಿ ಹರಕೆ ಹೊತ್ತಿದ್ದರು. ಅದರಂತೆ ಜಯಚಾಮರಾಜೇಂದ್ರ ಒಡೆಯರ್ಗೆ ಗಂಡು ಮಗು ಜನನವಾಯಿತು.
ಹೀಗಾಗಿ ಒಡೆಯರ್ ಅರಮನೆಯ ತ್ರಿನೇಶ್ವರನಿಗೆ 11 ಕೆಜಿ ತೂಕದ ಚಿನ್ನದ ಶಿವನ ಮುಖವಾಡದ ಕೊಳಗ, ನಂಜನಗೂಡಿನ ನಂಜುಂಡೇಶ್ವರ ಹಾಗೂ ಮಲೆಮಹದೇಶ್ವರನಿಗೆ ಮೂರು ಚಿನ್ನದ ಕೊಳಗವನ್ನ ಮಾಡಿಕೊಟ್ಟಿದ್ದಾರೆ. ಈ 11 ಕೆಜಿ ತೂಕದ ಚಿನ್ನದ ಕೊಳಗವನ್ನ ಶಿವರಾತ್ರಿಯ ದಿನ ತ್ರಿನೇಶ್ವರನಿಗೆ ಹಾಕಿ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.
ನಗರದ ರಾಮಾನುಜ ರಸ್ತೆಯಲ್ಲಿರುವ ಕಾಮ ಕಾಮೇಶ್ವರಿ ದೇವಾಲಯ, ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿನ ಶಿವ ದೇವಾಲಯ, ಒಂಟಿಕೊಪ್ಪಲಿನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ, ರಾಮಕೃಷ್ಣ ನಗರದಲ್ಲಿರುವ ಶಿವ ದೇವಾಲಯ, ಧನ್ವಂತರಿ ರಸ್ತೆಯಲ್ಲಿರುವ ಚಿದಂಬರ ದೇವಸ್ಥಾನ ಸೇರಿದಂತೆ ನಗರದ ಹಲವು ಕಡೆ ಇರುವ ಶಿವ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.
ಬೆಳಗಿನಿಂದಲೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಪುನೀತರಾದರು.
ಶಿವರಾತ್ರಿ ಪ್ರಯುಕ್ತ ಮೈಸೂರಿನಾದ್ಯಂತ ಮುಂಜಾಗ್ರತ ಕ್ರಮವಾಗಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.