ನಗರದ ವಿವಿಧೆಡೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ

ಮೈಸೂರು,ಜೂ.4: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರತಕ್ಕ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಅವರಿಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 137ನೇ ಜಯಂತಿ ಪ್ರಯುಕ್ತ ಕೆ.ಆರ್.ವೃತ್ತದಲ್ಲಿರುವ ಒಡೆಯರ್ ಪ್ರತಿಮೆಗೆ ಪುಷ್ಪಾರ್ಚನೆಗೈದು ಗೌರವ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು ಜಿಲ್ಲೆಗೆ ಏನು ಕೆಲಸಗಳನ್ನು ಮಾಡಿದ್ದರೋ ಅಂತಹವರನ್ನು ಸ್ಮರಿಸುವುದಕ್ಕೋಸ್ಕರ ಕೆಲವರಿಗೆ ಸನ್ಮಾನ ಮಾಡಬೇಕು ಎನ್ನುವ ಸಮಿತಿಯನ್ನು ರಚಿಸಲಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲಿ, ಕೊರೋನಾ ಸಂದರ್ಭದಲ್ಲಿ ಮಾಡಲಿಕ್ಕೆ ಆಗಿರಲಿಲ್ಲ. ಹಿಂದಿನ ಜಿಲ್ಲಾಧಿಕಾರಿ ಅಭಿರಾಮ್ ಅಧ್ಯಕ್ಷತೆಯಲ್ಲಿ 12ಜನ ಗಣ್ಯರನ್ನು ಆಯ್ಕೆ ಮಾಡಲಾಗಿತ್ತು. ಲಾಕ್ ಡೌನ್ ಮುಗಿದ ನಂತರ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ವಿಶೇಷವಾಗಿ ಇಂದು ಎಲ್ಲ ಜನಪ್ರತಿನಿಧಿಗಳು ಅಧಿಕಾರಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರತಕ್ಕ ಸೇವೆಯನ್ನು ನಾವೆಲ್ಲ ನೆನಪಿಸಿಕೊಳ್ಳಬೇಕು. ಲಾಕ್ ಡೌನ್ ಇರುವ ಕಾರಣ ಅತ್ಯಂತ ಸರಳವಾಗಿ ಜನಪ್ರತಿನಿಧಿಗಳ ಸಮೇತ ಪುಷ್ಪಾರ್ಚನೆಗೈದು ಗೌರವ ಸಮರ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಬಿ.ಹರ್ಷವರ್ಧನ, ಎಲ್.ನಾಗೇಂದ್ರ, ಸಂಸದ ಪ್ರತಾಪಸಿಂಹ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೆÇಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಜಿಲ್ಲಾ ಪಂಚಾಯತ್ ಸಿಇಒ ಎ.ಎಂ.ಯೋಗೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಒಡೆಯರ್ ಜಯಂತಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿಂದು ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 137ನೇ ಜಯಂತಿಯನ್ನು ಪ್ರಾಧಿಕಾರದ ಎದುರಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಗೆ ಪುಷ್ಪಾರ್ಚನೆಗೈದು ಗೌರವ ಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಮಾತನಾಡಿ ಸರ್ವತೋಮುಖವಾಗಿ ಅಭಿವೃದ್ಧಿಯನ್ನು ಮಾಡಬಹುದು ಎನ್ನುವುದನ್ನು ತೋರಿಸಿದವರು ಮೈಸೂರು ಮಹಾರಾಜರಲ್ಲಿ ಮೊದಲಿಗರು ನಾಲ್ವಡಿ ಕೃಷ್ಣರಾಜ ಒಡೆಯರು . ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಟೌನ್ ಪ್ಲಾನಿಂಗ್ ಎನ್ನುವ ಕಲ್ಪನೆಯಲ್ಲಿ ಪ್ರಾರಂಭ ಮಾಡಿದ ಮಹಾನ್ ಮಹಾರಾಜರು ಅವರು. ಅವರಿಗೆ ಇಂದು ಜಯಂತಿ. ನಾವೆಲ್ಲರೂ ಶುಭಾಶಯಗಳನ್ನು ಕೋರುತ್ತ ಸದಾಕಾಲ ಯಾರು ಸಮಾಜಕ್ಕೆ ಕೆಲಸ ಮಾಡುತ್ತಾರೋ ಅವರನ್ನು ನೆನೆಯುತ್ತೇವೆ ಎನ್ನುವಂತಹ ವಿಚಾರವನ್ನಿಟ್ಟು ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭ ಮುಡಾ ಆಯುಕ್ತರಾದ ಡಾ.ಡಿ.ಬಿ.ನಟೇಶ್, ಮುಡಾ ಸದಸ್ಯರಾದ ಲಕ್ಷ್ಮಿದೇವಿ, ನವೀನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.