ನಗರದ ವಿವಿಧೆಡೆ ಜಿಲ್ಲಾಧಿಕಾರಿ ದಿಢೀರ ಭೇಟಿ, ಪರಿಶೀಲನೆ

ಸಂಜೆವಾಣಿ ವಾರ್ತೆ,
ವಿಜಯಪುರ, ಫೆ.29:ವಿಜಯಪುರ ನಗರದಲ್ಲಿ ಕೊಳಚೆ ಮಂಡಳಿಯಿಂದ ಯೋಗಾಪುರದಲ್ಲಿ ನಿರ್ಮಿಸಲಾದ ಮನೆಗಳು, ಬಸವನ ನಗರದಲ್ಲಿ ಪಾಲಿಕೆಯಿಂದ ನಿರ್ಮಿಸಲಾದ ಮನೆಗಳು, ತಾಜಬಾವಡಿ, ಭೂತನಾಳ ಕೆರೆಗೆ ನೀರು ತುಂಬಿಸುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ದಿಢೀರ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.
ಬುಧವಾರ ನಗರದ ಯೋಗಾಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿ, ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಲಾದ ಮನೆಗಳಲ್ಲಿ ಹಲವು ಮನೆಗಳು ಖಾಲಿ ಇದ್ದು, ಕಿಟಕಿ ಬಾಗಿಲುಗಳು ದುರಸ್ತಿಗೊಳಿಸಬೇಕು. ಮನೆಗಳನ್ನು ಹಂಚಿಕೆ ಮಾಡಿರುವ ಫಲಾನುಭವಿಗಳ ಪಟ್ಟಿ ಹಾಗೂ ಖಾಲಿ ಇರುವ ಮನೆಗಳ ಪಟ್ಟಿ ಮಾಡಿ, ಎರಡು ದಿನಗಳಲ್ಲಿ ಪಾಲಿಕೆಗೆ ಒದಗಿಸುವಂತೆ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಸವ ನಗರದಲ್ಲಿ ಪಾಲಿಕೆಯಿಂದ ನಿರ್ಮಿಸಿದ ಆಶ್ರಯ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಆಶ್ರಯ ಮನೆಗಳಿಗೆ ಹಕ್ಕು ಪತ್ರ ಪಡೆದುಕೊಂಡ ಮಾಲೀಕರಿಗೆ ಆ ಮನೆಗಳಲ್ಲಿ ವಾಸಿಸುತ್ತಿರುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಪಾಲಿಕೆ ಅಭಿಯಂತರರಿಗೆ ಸೂಚನೆ ನೀಡಿದರು.
ಅರಕೇರಿ ಗ್ರಾಮದ ಹತ್ತಿರ ಕೆಬಿಜೆಎನಎಲ್ ಶಾಖಾ ಕಾಲುವೆ ಕೊಳವೆ ಮಾರ್ಗದ ಮೂಲಕ ಭೂತನಾಳ ಕೆರೆಗೆ ನೀರು ತುಂಬಿಸುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಯಾವುದೇ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ನಗರದ ತಾಜಬಾವಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಕ್ಫ್ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಕೆಬಿಜೆಎನಎಲ್ ಮುಖ್ಯ ಅಭಿಯಂತರ ಎಚ್.ಎನ್.ಶ್ರೀನಿವಾಸ, ಪಾಲಿಕೆ ಅಭಿಯಂತರ ವಿ.ಎಂ. ಹಿರೇಮಠ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಾಯ್.ಎಂ.ಹಳ್ಳಿ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿ ಸಸಾಲಟ್ಟಿ, ನಗರ ನೀರು ಸರಬರಾಜು ಮಂಡಳಿ ಅಧಿಕಾರಿ ಬಸವರಾಜ ಭಂಗೀನವರ ವಕ್ಫ್ ಅಧಿಕಾರಿ ತಬಸ್ಸುಮ್ ಇತರರು ಉಪಸ್ಥಿತರಿದ್ದರು.