ನಗರದ ರಸ್ತೆ ಧೂಳು ಸ್ವಚ್ಛ ಕಾರ್ಯಾಚರಣೆ – ನಗರಕ್ಕೂ ದೀಪಾವಳಿ ಸಂಭ್ರಮ

ಅಧ್ಯಕ್ಷ ವಿನಯ್ ನಗರ ಪ್ರದಕ್ಷಣೆ – ಮಾರನೇ ದಿನವೇ ಸ್ವಚ್ಛತಾ ಅಭಿಯಾನ
ರಾಯಚೂರು.ನ.14- ನಗರಸಭೆ ಅಧ್ಯಕ್ಷರಾದ ಈ.ವಿನಯಕುಮಾರ ನಿನ್ನೆ ನಗರ ಪ್ರದಕ್ಷಣೆಯ ಮಾರನೇ ದಿನವೇ ರಸ್ತೆ, ಮಣ್ಣು, ಧೂಳು ಸ್ವಚ್ಛತಾ ಕಾರ್ಯ ಅರಂಭಿಸುವ ಮೂಲಕ ನಗರಸಭೆ ನಗರಕ್ಕೆ ದೀಪಾವಳಿ ಸಂಭ್ರಮ ತಂದಿದೆ.
ಕಳೆದ ಎರಡು ವರ್ಷದಿಂದ ನಿರ್ಲಕ್ಷ್ಯಕ್ಕೆ ಗುರಿಯಾದ ನಗರ ಸ್ವಚ್ಛತೆ ಕಾರ್ಯಕ್ಕೆ ಈಗ ಅಧ್ಯಕ್ಷ ಈ.ವಿನಯಕುಮಾರ ಚಾಲನೆ ನೀಡಿದ್ದಾರೆ. ನಿನ್ನೆ ನಗರದ ಎಲ್ಲಾ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸಂಜೆ ಆಯುಕ್ತರೊಂದಿಗೆ ವಿಸ್ತೃತ ಸಭೆ ನಡೆಸಿ, ಇಂದು ಮುಂಜಾನೆಯಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ. ಸುಮಾರು 300 ಪೌರ ಕಾರ್ಮಿಕರೊಂದಿಗೆ ನಗರದ ಬಿಆರ್‌ಬಿ ವೃತ್ತದಿಂದ ರಸ್ತೆ ಸ್ವಚ್ಛತೆ ಕಾರ್ಯಕ್ಕೆ ಮುಂದಾದರು.
ಬಿಆರ್‌ಬಿ ವೃತ್ತದಿಂದ ವಿವೇಕಾನಂದ ವೃತ್ತ, ಅಲ್ಲಿಂದ ನೇತಾಜಿ ನಗರ, ಸರಾಫ್ ಬಜಾರ, ಕಿರಾಣಿ ಬಜಾರ, ಬಟ್ಟೆ ಬಜಾರ್, ತೀನ್ ಖಂದೀಲ್, ಏಕ ಮೀನಾರ್, ಅಂಬೇಡ್ಕರ್ ವೃತ್ತ, ಎಂ.ಜಿ.ರೋಡ್, ಚಂದ್ರಮೌಳೇಶ್ವರ, ಹರಿಹರ ರಸ್ತೆ ಹೀಗೆ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಪ್ರತಿ ವಾರ್ಡಿನ ನಗರಸಭೆ ಸದಸ್ಯರಿಗೆ ಸ್ವಚ್ಛತಾ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷರು, ಎಲ್ಲಾ ನಗರಸಭೆ ಸದಸ್ಯರು ಅವರವರ ವಾರ್ಡಗಳಲ್ಲಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದರಿಂದ ಅನೇಕ ನಗರಸಭೆ ಸದಸ್ಯರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ದೀಪಗಳ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಕಾರ್ಯಾಚರಣೆ ನಡೆದಿರುವುದು ನಗರಕ್ಕೆ ದೀಪಾವಳಿಯ ಸ್ವಚ್ಚತೆಯ ಸಂಭ್ರಮದಂತೆ ಕಂಗೊಳಿಸಿತು. ಬೆಳಗಿನ ಜಾವದಿಂದ ಆರಂಭಗೊಳ್ಳುವ ಪೂರ್ವ ಅಧ್ಯಕ್ಷ ಈ.ವಿನಯ ಅವರು ಪೌರ ಕಾರ್ಮಿಕರಿಗೆ ಈ ಕಾರ್ಯಾಚರಣೆ ಕೈಗೊಳ್ಳುವುದರ ಬಗ್ಗೆ ಮನವರಿಕೆ ಮಾಡಿದರು. ರಸ್ತೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಯಾವುದೇ ಕಾರಣಕ್ಕೂ ಒಂದೇ ಕಡೆ ನಿಲ್ಲುವುದು ಬೇಡ. ಎಲ್ಲಾ ರಸ್ತೆಗಳು ಸ್ವಚ್ಛಗೊಳಿಸುವಂತಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರು ತಮ್ಮ ವೇತನ ಪ್ರಶ್ನೆ ಅಧ್ಯಕ್ಷರ ಮುಂದಿಟ್ಟಾಗ ಇದಕ್ಕೆ ಸ್ಪಂದಿಸಿದ ಅವರು ವೇತನಕ್ಕೆ ಸಂಬಂಧಿಸಿ ನಾನು ಅಧಿಕಾರಿಗಳೊಂದಿಗೆ ಮಾತನಾಡಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಗರಸಭೆ ಆಯುಕ್ತರು ಪೌರ ಕಾರ್ಮಿಕರಿಗೆ ಅಧ್ಯಕ್ಷರ ಸೂಚನೆ ಮೇರೆಗೆ ಕಟ್ಟುನಿಟ್ಟಿನ ಮಾಹಿತಿ ನೀಡಿದರು. ಮುಂಜಾನೆ ಸರಿಯಾದ ಸಮಯಕ್ಕೆ ನಿಯುಕ್ತಿಗೊಳಿಸಿದ ಕೆಲಸ ಕಾರ್ಯಗಳಿಗೆ ಹಾಜರಾಗಬೇಕೆಂದು ಆದೇಶಿಸಿದರು.
ಒಟ್ಟಾರೆಯಾಗಿ ನಗರದಲ್ಲಿ ಸ್ವಚ್ಛತಾ ಕಾರ್ಯದ ಬಗ್ಗೆ ಅನೇಕ ದೂರುಗಳಿದ್ದವು. ಕಳೆದ ಅನೇಕ ವರ್ಷ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎನ್ನುವ ಭಾವನೆ ಇತ್ತು. ಅಲ್ಲದೇ, ನಗರಸಭೆಯಲ್ಲಿ ಚುನಾಯಿತ ಸಮಿತಿ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸಂಪೂರ್ಣ ವ್ಯವಸ್ಥೆ ಬದಲಾವಣೆಗೊಂಡಿದೆ ಎನ್ನುವ ಮನವರಿಕೆ ಕಾರ್ಯಕ್ರಮ ನಿನ್ನೆಯಿಂದ ಆರಂಭಗೊಂಡಿವೆ. ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿ ಒಟ್ಟು 10 ಗುಂಪು ಕಾರ್ಯ ನಿರ್ವಹಿಸುತ್ತಿದ್ದವು.
ಪ್ರತಿ ರಸ್ತೆಯಲ್ಲಿ ಸ್ವಚ್ಛತೆಗೆ ಸಂಬಂಧಿಸಿ ತಕ್ಷಣವೇ ವಾಟ್ಸಾಪ್ ಮೂಲಕ ಮಾಹಿತಿ ನೀಡಲು ಸೂಚಿಸಿದ್ದರು. ಒಟ್ಟಾರೆಯಾಗಿ ಅಧಿಕಾರಿಗಳು ಯಾವುದೇ ಕಾರ್ಯವನ್ನು ನಾಮ್ಕೆ ವಾಸ್ತೆ ಮಾಡದಂತೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಟ್ಟುನಿಟ್ಟಿನಿಂದ ಕೈಗೊಳ್ಳಲು ಆದೇಶಿಸಿದ್ದರು. ಈ ಸ್ವಚ್ಛತಾ ಅಭಿಯಾನದಲ್ಲಿ ಅಧ್ಯಕ್ಷರೊಂದಿಗೆ ಬಹುತೇಕ ಅಧಿಕಾರಿಗಳು ಈ ಕಾರ್ಯಕ್ರಮ ನಿರ್ವಹಿಸುವ ಮೂಲಕ ನಗರದಲ್ಲಿ ಸ್ವಚ್ಛತೆ ಮೂಲಕ ಆಡಳಿತ ಬದಲಾವಣೆಯನ್ನು ಜನಕ್ಕೆ ಮನದಟ್ಟು ಮಾಡುವಂತೆ ಚಟುವಟಿಕೆ ಆರಂಭಗೊಂಡಿವೆ.
ಈ ರಸ್ತೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾಡಗಿರಿ ನರಸಿಂಹಲು, ದರೂರು ಬಸವರಾಜ, ಎನ್.ಶ್ರೀನಿವಾಸ ರೆಡ್ಡಿ,ಕಡಗೋಳ ಆಂಜಿನೇಯ್ಯ, ರವೀಂದ್ರ ಜಲ್ದಾರ್, ತಿಮ್ಮಾರೆಡ್ಡಿ, ಶಶಿರಾಜ, ಮಹೇಂದ್ರಾ ರೆಡ್ಡಿ, ಹರೀಶ ನಾಡಗೌಡ ಸೇರಿದಂತೆ ಅನೇಕರು ಈ ಕಾರ್ಯಾಚರಣೆಯಲ್ಲಿ ಅಧ್ಯಕ್ಷರಿಗೆ ಸಾತ್ ನೀಡಿದರು.