ನಗರದ ಪ್ರಮುಖ ಬೀದಿಗಳಲ್ಲಿ ಐಟಿಬಿಪಿ ಪಡೆ ಪಥಸಂಚಲನ : ಡಿಸಿ, ಎಸ್ಪಿ, ಸಿಇಒ ಸಾಥ್


ಸಂಜೆವಾಣಿ ವಾರ್ತೆ
ಹೊಸಪೇಟೆ ಏ.12: ಜಿಲ್ಲೆಯಲ್ಲಿ ಮುಕ್ತವಾಗಿ, ನ್ಯಾಯಬದ್ಧವಾಗಿ ಚುನಾವಣೆ ನಡೆಸಲು ನಿಯೋಜಿತ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅರೆ ಸೇನಾಪಡೆ ನಗರದಲ್ಲಿ ಬುಧವಾರ ಪಥಸಂಚಲನ ನಡೆಸುವ ಮೂಲಕ ಕಟ್ಟುನಿಟ್ಟಿನ ಚುನಾವಣೆಗೆ ಅಣಿಯಾಯಿತು.
ಹೊಸಪೇಟೆ ನಗರದ ವಡಕರಾಯ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅರೆಸೇನಾ ಪಡೆ ಬೆಳಿಗ್ಗೆ ಪಥಸಂಚಲನ ನಡೆಸಿತು.
ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ., ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಬಿ. ಸದಾಶಿವ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್. ಸಹ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು‌.
ನಗರದ ಗಾಂಧಿ ವೃತ್ತ, ಬಸ್ ನಿಲ್ದಾಣ, ಪುನೀತ್ ರಾಜಕುಮಾರ್ ವೃತ್ತ, ಕಾಲೇಜು ರಸ್ತೆಯ ಮೂಲಕ ಪಥಸಂಚಲನ ಕೈಗೊಳ್ಳಲಾಯಿತು.
ರಸ್ತೆ ಬದಿ ಸಾರ್ವಜನಿಕರು ಹೂಮಳೆ ಸುರಿದು ಅದ್ಧೂರಿಯಾಗಿ ಪಥಸಂಚಲನವನ್ನು ಸ್ವಾಗತಿಸಿದರು‌. ಸ್ಥಳೀಯ ಪೊಲೀಸ್ ಠಾಣಾ ಸಿಬ್ಬಂದಿ ಸಹ ಪಥಸಂಚಲನದಲ್ಲಿ ಭಾಗಿಯಾದರು.
ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಿದ್ಧರಾಮೇಶ್ವರ, ಸಹಾಯಕ ಚುನಾವಣಾಧಿಕಾರಿ ವಿಶ್ವಜೀತ್ ಮೆಹ್ತಾ, ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.