ನಗರದ ಡಾಕ್ಟರ್ ಲೇನ್ – ಕಣ್ಣಿನ ಕ್ಲಿನಿಕ್‌ಗೆ ನುಗ್ಗಿದ ಕಾರು

ಓರ್ವರಿಗೆ ತೀವ್ರ ಗಾಯ – ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು
ರಾಯಚೂರು.ಏ.05- ರಸ್ತೆ ಮೇಲೆ ಓಡಬೇಕಾದ ಕಾರುವೊಂದು ಇಂದು ನಗರದ ಜನನಿಬಿಡ ಪ್ರದೇಶ ಮತ್ತು ವೈದ್ಯರೇ ಅಧಿಕ ಪ್ರಮಾಣದಲ್ಲಿರುವ ಡಾಕ್ಟರ್ ಲೇನ್ ರಸ್ತೆಯಲ್ಲಿ ಕಣ್ಣಿನ ಆಸ್ಪತ್ರೆಗೆ ನುಗ್ಗಿ ಓರ್ವ ತೀವ್ರ ಗಾಯಗೊಂಡ ಪ್ರಸಂಗಕ್ಕೆ ಕಾರಣವಾಯಿತು.
ಸುಮಾರು 11.30 ರ ಸಮಯಕ್ಕೆ ಎಲ್ ಬೋರ್ಡ್‌ನ ಮಾರುತಿಯ ಆಲ್ಟೋ ನಂ.ಕೆಎ 36 ಎಂ 3437 ಕಾರು ಎಲ್ಲರೂ ನೋಡು ನೋಡುತ್ತಿದ್ದಂತೆ ಡಾ.ರಾಜೇಂದ್ರ ಕಣ್ಣಿನ ದಾವಾಖಾನೆಗೆ ನುಗ್ಗಿ, ಜನ ಕಕ್ಕಾಬಿಕ್ಕಾಯಾಗುವಂತೆ ಮಾಡಿತು. ರಸ್ತೆಯ ಮಧ್ಯೆ ಬರುವ ಕಾರು ಏಕಾಏಕಿ ಕಣ್ಣಿನ ಆಸ್ಪತ್ರೆಗೆ ವೇಗವಾಗಿ ನುಗ್ಗಿಕೊಂಡಿತು. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆರಳಿಗೆ ಗಾಯವಾಗಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ಗಾಯಾಳುವನ್ನು ಸ್ಥಳೀಯರು ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದರು.
ನೀಲಿ ಬಣ್ಣದ ಕಾರುನ್ನು ಮಹಿಳೆಯೊಬ್ಬಳು ಡ್ರೈವ್ ಮಾಡುತ್ತಿದ್ದಳೆಂದು ಹೇಳಲಾಗಿದೆ. ಈ ಮಹಿಳೆ ಯಾರು ಎನ್ನುವುದನ್ನು ಹು‌ಡುಕಲಾಗುತ್ತಿದೆ. ಕಾರು ಆಸ್ಪತ್ರೆಗೆ ನುಗ್ಗುತ್ತಿದ್ದಂತೆ ತಕ್ಷಣವೇ ಕಾರಿನಿಂದ ಇಳಿದು, ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಸ್ಥಳೀಯರು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರನ್ನು ಕ್ಲಿನಿಕ್‌ನಿಂದ ಹೊರಗೆ ತೆಗೆದು, ಈ ಕುರಿತು ಪರಿಶೀಲಿಸಿ, ನಂತರ ಟ್ರಾಫಿಕ್ ಠಾಣೆಗೆ ಕಾರು ಕೊಂಡೊಯ್ಯಲಾಯಿತು. ಈ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯ ಆರೋಗ್ಯದ ಸ್ಥಿತಿ ಹೇಗಿದೆ ಎನ್ನುವುದು ಪರಿಶೀಲಿಸಲಾಗುತ್ತಿದೆ.
ಈ ಘಟನೆಯಿಂದ ಡಾಕ್ಟರ್ ಲೇನ್ ರಸ್ತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಯಲ್ಲಿ ಹೋಗುವಾಗ ಅಪಘಾತವಾಗುವುದು ಸಾಮಾನ್ಯ. ಆದರೆ, ವಾಹನವನ್ನೇ ಅಂಗಡಿಗೆ ನುಗ್ಗಿಸುವ ಅಪಘಾತಗಳಾದರೇ, ಸುರಕ್ಷತೆಯ ಗತಿಯೇನು?.ನಗರದಲ್ಲಿ ಸಂಚಾರಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಸಂಚಾರಿ ಠಾಣೆಯ ಪೊಲೀಸರಿಗೆ ಲೈಸೆನ್ಸ್, ತಪಾಸಣೆ, ಊರಿನ ಹೊರ ಭಾಗದಲ್ಲಿ ವಾಹನಗಳ ತಪಾಸಣೆಯೇ ಪ್ರಮುಖ ಕರ್ತವ್ಯವಾಗಿ ನಗರದಲ್ಲಿ ಸಂಚಾರಿ ವ್ಯವಸ್ಥೆ ನಿಯಂತ್ರಣ ಸಂಪೂರ್ಣವಾಗಿ ಕೈ ಬಿಡಲಾಗಿದೆ. ಇದರಿಂದ ಯಾವ ಕ್ಷಣದಲ್ಲಿ ಯಾವ ಅಪಘಾತ ಸಂಘವಿಸುತ್ತದೆ ಎನ್ನುವ ಆತಂಕದಲ್ಲಿ ಜನ ಓಡಾಡಬೇಕಾಗಿದೆ.