ನಗರದಲ್ಲೂ ಭಾರಿ ಚಳಿ ಜನ ತತ್ತರ

ಬೆಂಗಳೂರು, ಡಿ. ೨೩- ಉದ್ಯಾನನಗರಿ ಬೆಂಗಳೂರಿನಲ್ಲಿ ಚಳಿಗೆ ಜನ ಗಢಗಢ ನಡುಗುವಂತಾಗಿದೆ. ಹಿಂದೆಂದಿಗಿಂತಲೂ ಚಳಿ ಬೆಚ್ಚಾಗಿದ್ದು ಮುಂಜಾನೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ.
ಕಳೆದ ೧೫ ದಿನಗಳ ಹಿಂದೆ ಚಂಡಮಾರುತದಿಂದಾಗಿ ಚಳಿ ತೀವ್ರವಾಗಿತ್ತು. ಈಗ ಚಂಡಮಾರುತದ ಪರಿಸ್ಥಿತಿ ಇಲ್ಲದಿದ್ದರೂ ಚಳಿ ಹೆಚ್ಚಿನ ಪ್ರಮಾಣದಲ್ಲಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾರಿ ರಾಜ್ಯದಲ್ಲಿ ಚಳಿಯ ಪ್ರಮಾಣ ತೀವ್ರವಾಗಿದೆ. ಜರ್ಕಿನ್, ಸ್ವೆಟರ್ ಹಾಗೂ ಬೆಚ್ಚನೆಯ ಉಡುಪು ತೊಟ್ಟರು ಚಳಿ ತಡೆಯುವುದು ಅಸಾಧ್ಯವಾಗಿದೆ.
ಎಚ್‌ಎಎಲ್ ಬಳಿ ಕನಿಷ್ಠ ೧೨ ಡಿಗ್ರಿ ತಾಪಮಾನ ದಾಖಲಾಗಿತ್ತು. ಉಳಿದಂತೆ ಬೆಂಗಳೂರು ನಗರ ಇತರ ಭಾಗಗಳಲ್ಲಿ ೧೪ ರಿಂದ ೧೮ ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಜನವರಿ ಮೊದಲ ವಾರದಲ್ಲಿ ಇನ್ನಷ್ಟು ಕಡಿಮೆಯಾಗಿದ್ದು ಕನಿಷ್ಠ ೧೦ ಡಿಗ್ರಿ ತಾಪಮಾನ ದಾಖಲಾಗಬಹುದು. ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಈ ವರ್ಷ ಲ್ಯಾಬಿನೋ ವಾತಾ ವರಣದಿಂದಾಗಿ ಅತಿ ಹೆಚ್ಚಿನ ಚಳಿಯಾಗುತ್ತಿದೆ. ಫೆಸಿಪಿಕ್ ಮಹಾಸಾಗರದ ಮೇಲ್ಮೈ ನೀರು ತಂಪಾಗುವಿಕೆ ಚಳಿಗೆ ಪ್ರಮುಖ ಕಾರಣವಾಗಿದೆ.ಉತ್ತರ ಹಾಗೂ ಈಶಾನ್ಯದಿಂದ ಬರುವ ಒಣ ಹವೆಯಿಂದಾಗಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ತಣ್ಣನೆ ವಾತಾವರಣ ಬಿಸಿ ಕಡಿಮೆಯಾಗುತ್ತದೆ.
ಸಂಕ್ರಾಂತಿಯವರೆಗೆ ಚಳಿ ಜೊತೆ ಬೆಳಗ್ಗೆ ಮಂಜಿನ ವಾತಾವರಣವೂ ಇರಲಿದೆ. ೧೮೮೪ರಲ್ಲಿ ಅತಿ ಕಡಿಮೆ ೭.೮ ಡಿಗ್ರಿ ತಾಪಮಾನ ದಾಖಲಾಗಿದ್ದು, ದಾಖಲೆಯಾಗಿದೆ.