ನಗರದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

ಸಂಜೆವಾಣಿ ನ್ಯೂಸ್
ಮೈಸೂರು: ಆ.15:- 77 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಮಹದೇವಪ್ಪ ಸಂದೇಶ ಭಾಷಣ ಮಾಡಿದರು
ಅವರು ಇಂದು ಬನ್ನಿಮಂಟ್ಟಪದಲ್ಲಿ 77ನೇ ಸ್ವಾತಂತ್ಯೋತ್ಸವ ಕಾರ್ಯಕ್ರಮವನ್ನು ದ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಭಾರತೀಯರಾದ ನಾವೆಲ್ಲ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದೇವೆ. ಈ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ನಾಗರಿಕರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿ ನೌಕರರು ಹಾಗೂ ಮಾಧ್ಯಮ ಸ್ನೇಹಿತರಿಗೆ 77ನೇ ಭಾರತ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ ಎಂದರು
ಮೈಸೂರು ಜಿಲ್ಲಾಡಳಿತದ ವತಿಯಿಂದ ಇಂದು ಅತ್ಯಂತ ಅರ್ಥಪೂರ್ಣ ಹಾಗೂ ಸಡಗರದಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸಮಸ್ತ ನಾಗರಿಕ ಬಂಧುಗಳಿಗೆ ತುಂಬು ಹೃದಯದ ಶುಭಾಶಯಗಳು.
ಬ್ರಿಟಿಷ್ ಸರ್ವಾಧಿಕಾರದ ಆಳ್ವಿಕೆಯಿಂದ ಮುಕ್ತಗೊಂಡು ಸ್ವತಂತ್ರ ರಾಷ್ಟ್ರದ ಕನಸು ನನಸಾದ ಈ ದಿನ ಭಾರತೀಯರೆಲ್ಲರಿಗೂ ಪವಿತ್ರವಾದ ದಿನ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಈ ದೇಶದ ಎಲ್ಲಾ ಹೋರಾಟದ ಮನಸ್ಸುಗಳ ಸಾಂಘಿಕ ಪ್ರಯತ್ನದಿಂದ ನಡೆದ ಹೋರಾಟವು ಇಡೀ ವಿಶ್ವಕ್ಕೆ ಮಾದರಿಯಾಗಿದೆ.
ಈ ಸಾಂಘಿಕ ಪ್ರಯತ್ನದ ಅಡಿಯಲ್ಲಿ ಸುಭಾಷ್ ಚಂದ್ರ ಬೋಸ್, ಲಾಲಾ ಲಜಪತರಾಯ್, ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್, ಚಂದ್ರಶೇಖರ್ ಆಜಾದ್ ರಂತಹ ತ್ಯಾಗಮಯಿ ಹೋರಾಟಗಾರರ ರಕ್ತವೂ ಹರಿದಿದ್ದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವಿಸ್ಮರಣೀಯವಾದಂತಹ ಸ್ಥಾನವಿದೆ ಎಂಬ ಸಂಗತಿಯನ್ನು ಈ ವೇಳೆ ನಾನು ನೆನಪಿಸಿಕೊಳ್ಳಲು ಬಯಸುತ್ತೇನೆ.
ಪ್ರತಿ ವರ್ಷವೂ ನಾವು ಆಗಸ್ಟ್ 15 ರಂದು ಈ ದೇಶದ ಪ್ರತಿ ಹಳ್ಳಿಗಳಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತೇವೆ ಮತ್ತು ಸಂಭ್ರಮಿಸುತ್ತೇವೆ. ಹಾಗಿದ್ದ ಮೇಲೆ ಈ ಸ್ವಾತಂತ್ರ್ಯ ಎನ್ನುವುದಕ್ಕೆ ಏನೋ ವಿಶೇಷವಾದ ಮಹತ್ವ ಇರಲೇಬೇಕಲ್ಲವೇ ಸ್ವಾತಂತ್ರ್ಯ ಎಂಬುದನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದರೂ ಸ್ವಾತಂತ್ರ್ಯ ಎಂಬ ಸಂಗತಿಯು ಭೂಮಿಯ ಮೇಲಿನ ಪ್ರತಿಯೊಂದು ವ್ಯಕ್ತಿಯು ಬಯಸುವಂತಹ ಅತ್ಯಂತಿಕ ಸಂಗತಿಯಾಗಿದೆ. ಬದುಕಿನ ಅತಿದೊಡ್ಡ ಮೌಲ್ಯವಾಗಿ ಎಲ್ಲರೂ ಬಹಳಷ್ಟ ಇಷ್ಟಪಡುವ ಇಂತಹ ಸ್ವಾತಂತ್ರ್ಯದ ಮಹತ್ವವು ಶಾಶ್ವತವಾಗಿ ಇರುತ್ತದೆ.
ಈ 77 ವರ್ಷಗಳ ಸುದೀರ್ಘ ಅವಧಿಯಲ್ಲಿ ಕೃಷಿ ಪಧಾನವಾಗಿದ್ದ ದೇಶವು ನೀರಾವರಿ ಯೋಜನೆಗಳಿಂದ ಆರಂಭಗೊಂಡು ಇಂದಿನ ಶಿಕ್ಷಣ, ತಂತ್ರಜ್ಞಾನದ ಅಭಿವೃದ್ಧಿಯ ಕಾಲದವರೆಗೆ ವ್ಯಾಪಕವಾಗಿ ಬೆಳೆದಿದ್ದು ಬಡ ರಾಷ್ಟ್ರಗಳ ಪಟ್ಟಿಯಿಂದ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.
ಇದಕ್ಕಾಗಿ ಈ ದೇಶದಲ್ಲಿ ಮಹತ್ತರ ಸಾಂಸ್ಥಿಕ ಬದಲಾವಣೆಯನ್ನು ತಂದ ಪಂಡಿತ್ ಜವಾಹರ್ ಲಾಲ್ ನೆಹರೂ ಅವರಿಂದ ಮೊದಲುಗೊಂಡು ಹಲವು ಮಂದಿ ಪ್ರಧಾನಿಗಳು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಹೋರಾಟಗಾರರನ್ನು ನಾನು ಈ ವೇಳೆ ಮನದುಂಬಿ ನೆನೆಯುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಆತ್ಮವೆಂದೇ ಹೇಳಲಾಗುವ ಸಂವಿಧಾನವನ್ನು ಬರೆದು ದೇಶವೊಂದು ಹೇಗಿದ್ದರೆ ಚಂದ ಎಂದು ಕನಸು ಕಂಡ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಮನದುಂಬಿ ನೆನೆಯುತ್ತೇನೆ. ಪ್ರಸ್ತುತ ನಾವು ಸ್ವಾತಂತ್ರ್ಯದ ಹೋರಾಟದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಸಾಧಿಸುವತ್ತ ಸಾಗುತ್ತಲೇ ಇದ್ದೇವೆ. ಇದರ ಜೊತೆಗೆ ಜಾತೀಯ ಅಸಮಾನತೆ, ಅವಮಾನ ಹಾಗೂ ಸಾಮಾಜಿಕ ದೌರ್ಜನ್ಯಗಳನ್ನೂ ಕೂಡಾ ಕಾಣುತ್ತಿದ್ದೇವೆ ಎಂದರು
ಇನ್ನು ಪ್ರಸ್ತುತ ನಮ್ಮ ಸರ್ಕಾರವು ಎರಡೂ ಅವಧಿಗಳಲ್ಲಿ ಒಂದು ದೇಶದ ಏಳಿಗೆಗಾಗಿ ನಡೆದ ಹೋರಾಟದ ಆಶಯಗಳು ಏನಾಗಿದ್ದವೋ ಅದರಂತೆಯೇ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಲು ನಾನು ಬಯಸುತ್ತೇನೆ. ಬಸವಾದಿ ಶರಣರ ದಾಸೋಹದ ಕಲ್ಪನೆಯಡಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ನಂತಹ ಯೋಜನೆಗಳು ಬಡವರ ಹಸಿವನ್ನು ನೀಗಿಸದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳು ಕಡು ಬಡವರು ಮತ್ತು ಬಡ ಮಧ್ಯಮ ವರ್ಗದವರ ದೈನಂದಿನ ಬದುಕಿಗೆ ಆಶಾದಾಯಕವಾಗಿ ಪರಿಣಮಿಸಿದೆ. ದೇಶ ಮತ್ತು ಜನರನ್ನು ಇಷ್ಟಪಡುವ ಕಾರಣಕ್ಕಾಗಿಯೇ ಇಂದು ಜನರ ಬದುಕಿಗೆ ಬೇಕಾದ ಸೌಲಭ್ಯಗಳನ್ನು ನಮ್ಮ ಸರ್ಕಾರ ಒದಗಿಸಿದ್ದು ಇವೆಲ್ಲವೂ ಉತ್ತಮ ನಾಡನ್ನು ಕಟ್ಟುವ ಪ್ರಯತ್ನದ ಭಾಗವಾಗಿದೆ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ನಮ್ಮ ಮೈಸೂರು ಜಿಲ್ಲೆಗೆ ಸಾಕಷ್ಟು ಕೊಡುಗೆಗಳು ಲಭ್ಯವಾಗಿವೆ. ಈ ಬಾರಿ ಬಜೆಟ್ ನಲ್ಲಿವಿಶೇಷ ಕಂಪು, ರುಚಿ ಮತ್ತು ಸೊಗಡಿನಿಂದ ಜನಮನದಲ್ಲಿ ನೆಲೆಸಿರುವ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಗಳು ವಿಶೇಷ ಮಾನ್ಯತೆ ಪಡೆದಿವೆ. ಇವುಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ನಮ್ಮ ಸರ್ಕಾರವು ಘೋಷಣೆ ಮಾಡಿದೆ
ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಬಲಪಡಿಸಲಾಗುವುದು. ಇದರಿಂದ ಉತ್ತಮ ಗುಣಮಟ್ಟದ ರೋಗರಹಿತವಾದ ಮೈಸೂರು ಬಿತ್ತನೆ ಗೂಡುಗಳನ್ನು ಉತ್ಪಾದಿಸಿ, ವಾಣಿಜ್ಯ ರೇಷ್ಮೆ ಬೆಳೆಗಾರರಿಗೆ ವಿತರಿಸಲು ಮತ್ತು ಉತ್ತಮ ಗುಣಮಟ್ಟದ ಮಿಶ್ರತಳಿ ಕಚ್ಚಾ ರೇಷ್ಮೆಯನ್ನು ಉತ್ಪಾದಿಸಲು ಅನುಕೂಲವಾಗಲಿದೆ ಎಂದು ಈ ಮೂಲಕ ತಮಗೆ ತಿಳಿಸುತ್ತಿದ್ದೇನೆ. ಜೊತೆಗೆ, ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡಲು ಯೋಚಿಸಲಾಗಿದೆ. ಈ ಪೈಕಿ
ಮೈಸೂರಿನ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಆವರಣವನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸುವ ನಿರ್ಧಾರ ಮಾಡಲಾಗಿದ್ದು, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ತಂತ್ರಜ್ಞಾನದೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ `ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾಗ್ಯಾಲರಿ’ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ.
ಮಾನವ ವನ್ಯಪ್ರಾಣಿ ಸಂಘರ್ಷದಲ್ಲಿ ಸಂರಕ್ಷಿಸಿದ, ಗಾಯಗೊಂಡ ಅನಾರೋಗ್ಯಪೀಡಿತ ಪ್ರಾಣಿಗಳ ರಕ್ಷಣೆ/ನಿರ್ವಹಣೆಗಾಗಿ ಬನ್ನೇರುಘಟ್ಟ ಮತ್ತು ಮೈಸೂರಿನಲ್ಲಿರುವ ಪುನರ್ವಸತಿ ಕೇಂದ್ರಗಳ ಸಾಮಥ್ರ್ಯ ಹೆಚ್ಚಿಸಲು ಹಾಗೂ ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಕೇಂದ್ರಗಳ ನಿರ್ಮಾಣ ಮಾಡುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗಿದೆ. ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕ್ರಮ ವಹಿಸುವ ಮತ್ತು ಮೈಸೂರು ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಾಣವನ್ನೂ ಸಹ ಈ ಬಾರಿ ಸಾಕಾರಗೊಳಿಸಲಾಗುವುದು.