ನಗರದಲ್ಲಿ 20 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು

ಬೆಂಗಳೂರು, ಜ.೧೪- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಲವು ತಿಂಗಳ ಬಳಿಕ ಕೋವಿಡ್ ಸೋಂಕಿನ ಸಂಖ್ಯೆ ೨೦ ಸಾವಿರ ದಾಟಿದ್ದು, ಭಾರೀ ಆತಂಕಕ್ಕೆ ಎಡೆಮಾಡಿದೆ.

ಕೋವಿಡ್ ಮೂರನೇ ಅಲೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿಯಾದರೂ, ಸೋಂಕಿನ ಪ್ರಮಾಣ ದಿನೇ ದಿನೇ ಅಧಿಕಗೊಳ್ಳುತ್ತಿದೆ.

ಬಿಬಿಎಂಪಿ ಅಧಿಕೃತ ಮಾಹಿತಿ ಅನ್ವಯ ಶುಕ್ರವಾರ ಬೊಮ್ಮನಹಳ್ಳಿ ವಲಯದಲ್ಲಿ ೨,೨೩೨ , ದಾಸರಹಳ್ಳಿ ೪೯೩, ಪೂರ್ವ ವಲಯ ೩,೧೨೬ , ಮಹದೇವಪುರ ೨,೩೪೩, ಆರ್ ಆರ್‌ನಗರ ೧,೫೨೮, ದಕ್ಷಿಣ ವಲಯ ೩,೧೭೨, ಪಶ್ಚಿಮ ವಲಯ ೨,೪೫೪, ಯಲಹಂಕ ೧,೪೧೨, ಅನೇಕಲ್ ೯೨೧, ಬೆಂಗಳೂರು ಹೊರವಲಯ ೧,೩೬೦ ಸೇರಿ ಒಟ್ಟು ೨೦,೧೨೧ ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಅಲ್ಲದೆ ಕಳೆದ ೨೪ ಗಂಟೆಗಳಲ್ಲಿ ೧೮,೩೭೪ ಜನರಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟಿತ್ತು. ೩ ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ೧೨,೪೬,೦೦೧ ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು ೧೩,೫೩,೩೩೧ ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು ೧೬,೪೩೬ ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದೇಶಿಯರಿಗೆ ಕೋವಿಡ್..!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ ಮತ್ತು ಇಂದು ಬೆಳಗಿನ ಜಾವ ಆಗಮಿಸಿದ ೫ ಜನರಲ್ಲಿ ಕೋವಿಡ್ ಸೋಂಕು ಧೃಡಪಟ್ಟಿದೆ.

ಕೆನಡಾ ಮೂಲದ ೨ ಪ್ರಯಾಣಿಕರಲ್ಲಿ, ಯುಎಸ್ ಮೂಲದ ೧, ಯುಕೆ ಮೂಲದ ೧ ಹಾಗೂ ರೋಮ್ ಮೂಲದ ೧ ಪ್ರಯಾಣಿಕನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.