ನಗರದಲ್ಲಿ 13 ಹಾಟ್ ಸ್ಪಾಟ್ ಸ್ಥಳಗಳು

ಮೈಸೂರು, ನ,21: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಖಾಲಿ ಪ್ರದೇಶದಲ್ಲಿ ಮತ್ತು ನಗರದ ಹೊರವರ್ತುಲ ರಸ್ತೆಯ ಮಗ್ಗಲುಗಳಲ್ಲಿ ಸಾರ್ವಜನಿಕರು ಕಟ್ಟಡ ತ್ಯಾಜ್ಯಗಳು, ಡೆಬ್ರಿಸ್ ಹಾಗೂ ಇತ್ಯಾದಿಗಳನ್ನು ಸುರಿಯುತ್ತಿರುವ ಸ್ಥಳಗಳ ಪೈಕಿ 13 ಸ್ಥಳಗಳನ್ನುಹಾಟ್ ಸ್ಪಾಟ್’ ಗಳೆಂದು ಗುರುತಿಸಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.
ಇಂದು ಪ್ರಾಧಿಕಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಟ್ಟಡ ತ್ಯಾಜ್ಯಗಳು, ಡೆಬ್ರಿಸ್ ಹಾಗೂ ಇತ್ಯಾದಿಗಳನ್ನು ಒಂದೆಡೆ ಸುಮಾರು 30 ವಿವಿಧ ಸ್ಥಳಗಳಲ್ಲಿ ಸುರಿಯುತ್ತಿದ್ದು, ಆ ಪೈಕಿ 13 ಸ್ಥಳಗಳನ್ನು ಹಾಟ್ ಸ್ಪಾಟ್ ಗಳೆಂದು ಗುರುತಿಸಲಾಗಿದೆ. ಕಸದ ರಾಶಿಯಿಂದಾಗಿ ನಗರದ ನೈರ್ಮಲ್ಯತೆ ಹಾಳಾಗುತ್ತಿರುವುದಲ್ಲದೇ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದ್ದು, ನಗರದ ಸೌಂದರ್ಯ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹೊರವರ್ತುಲ ರಸ್ತೆಯ ಮಗ್ಗಲುಗಳಲ್ಲಿ ಸುರಿಯಲಾಗಿರುವ ಕಟ್ಟಡ ತ್ಯಾಜ್ಯಗಳು, ಡ್ರೆಬಿಸ್ ಹಾಗೂ ಇತ್ಯಾದಿಗಳನ್ನು ಪ್ರಾಧಿಕಾರವು ಒಂದು ಬಾರಿ ತೆರವುಗೊಳಿಸಿ ಸ್ವಚ್ಛಗೊಳಿಸಲು ಉದ್ದೇಶಿಸಿ ನ.28 ರೊಳಗೆ ಸ್ವಚ್ಛತೆಯನ್ನು ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದೆ ಎಂದರು.
ಹೊರವರ್ತುಲ ರಸ್ತೆಯ ಮಗ್ಗಲುಗಳನ್ನು ಸ್ಚಚ್ಛಗೊಳಿಸಿದ ನಂತರ ಯಾವುದೇ ರೀತಿಯ ತ್ಯಾಜ್ಯಗಳನ್ನು ರಸ್ತೆಯ ಮಗ್ಗಲುಗಳಲ್ಲಿ ಸುರಿಯದಂತೆ ನಿಷೇಧಿಸಿ ನಿರ್ಭಂಧಿಸಲಾಗಿದೆ. ತ್ಯಾಜ್ಯಗಳನ್ನು ಮೈಸೂರು ಮಹಾನಗರಪಾಲಿಕೆಯು ನಿರ್ದಿಷ್ಟಪಡಿಸಿರುವ ಸೀವೇಜ್ ಫಾರ್ಮ್ ಸ್ಥಳದಲ್ಲಿಯೇ ವಿಲೇವಾರಿ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ನಗರದ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಭಂಧಿಸಿರುವ ಹೊರವರ್ತುಲ ರಸ್ತೆ ಮಗ್ಗಲುಗಳ ಪ್ರದೇಶಗಳಲ್ಲಿ ಪ್ರವೇಶಿಸಿ ಕಟ್ಟಡ ತ್ಯಾಜ್ಯಗಳನ್ನು ಸುರಿಯುತ್ತಿರುವ ಬಗೆಗಿನ ಛಾಯಾಚಿತ್ರಗಳನ್ನು 8884000750ಕ್ಕೆ ಕಳುಹಿಸಿದ್ದಲ್ಲಿ ಈ ಬಗ್ಗೆ ಕಾನೂನು ಕ್ರಮ ವಹಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಪ್ರಾಧಿಕಾರವು ರಚಿಸುವ ಜಾಗೃತದಳವು ಈ ಬಗ್ಗೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲಿದೆ. ಹೊರವರ್ತುಲ ರಸ್ತೆಯ ಆಯ್ದ ಹಾಟ್ ಸ್ಪಾಟ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಸದರಿ ಸ್ಥಳಗಳಲ್ಲಿ ತ್ಯಾಜ್ಯ ಸುರಿಯುವ ವ್ಯಕ್ತಿಗಳ ವಿರುದ್ಧ ಹಾಗೂ ಅದಕ್ಕೆ ಬಳಸುವ ವಾಹನಗಳನ್ನು ಪ್ರಾಧಿಕಾರದ ವಶಕ್ಕೆ ಪಡೆಯುವುದಲ್ಲದೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಏಕ ನಿವೇಶನ ವಸತಿ ವಿನ್ಯಾಸ ಬಡಾವಣೆ ನಕ್ಷೆ ಅನುಮೋದನೆ:
ನಿನ್ನೆ ನಡೆದ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಏಕ ನಿವೇಶನ ವಸತಿ ಬಡಾವಣೆ ನಕ್ಷೆ ಅನುಮೋದನೆ ಕುರಿತು ಚರ್ಚಿಸಿ ತೀರ್ಮಾನಿಸಲಾಗಿದೆ.
ಏಕ ನಿವೇಶನ ವಸತಿ ವಿನ್ಯಾಸ ಬಡಾವಣೆ ನಕ್ಷೆ ಅನುಮೋದನೆ ಕೋರುವವರು ಸಕ್ಷಮ ಪ್ರಾಧಿಕಾರಗಳಿಂದ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುಚ್ಛಕ್ತಿ ಸಂಪರ್ಕ, ಒಳಚರಂಡಿ ವ್ಯವಸ್ಥೆ ಹಾಗೂ ಇತ್ಯಾದಿಗಳನ್ನು ಕಲ್ಪಿಸಿರುವ ಬಗ್ಗೆ ದೃಢೀಕರಣ ಪತ್ರ ಹಾಜರುಪಡಿಸಲು ಕಡ್ಡಾಯಗೊಳಿಸಲಾಗಿದೆ.
ಒಳಚರಂಡಿ ಲೈನ್ ನ್ನು ಮೇನ್ ಲೈನ್ ಗೆ ಲಿಂಕೇಜ್ ಮಾಡಿರುವ ಬಗ್ಗೆ ಮಹಾನಗರಪಾಲಿಕೆ/ಸ್ಥಳೀಯ ಸಂಸ್ಥೆಗಳಿಂದ ಪಡೆದ ದೃಢೀಕರಣವನ್ನು ಕಡ್ಡಾಯವಾಗಿ ಹಾಜರುಪಡಿಸುವುದು ಅಥವಾ ಸಿವೇಜ್ ಟ್ರೀಟ್ ಮೆಂಟ್ ಪ್ಲಾಂಟ್ ನ್ನು ಅಳವಡಿಸಿ ಒಳಚರಂಡಿ ನೀರನ್ನು ಸಂಸ್ಕರಿಸಲು ಕ್ರಮಕೈಗೊಳ್ಳುವುದು.
ಏಕ ನಿವೇಶನ ಅನುಮೋದನೆ ಪಡೆದ ನಂತರ ಯಾವುದೇ ಸಂದರ್ಭದಲ್ಲಿಯೂ ಅಂತಹ ನಿವೇಶನ ವಿಭಜನೆ ನಿಷೇಧಿಸಿದೆ.
ಏಕ ನಿವೇಶನ ವಸತಿ ವಿನ್ಯಾಸ ಬಡಾವಣೆ ಅನುಮೋದನೆಗೊಂಡು ನಿವೇಶನ ಬಿಡುಗಡೆ ಮಾಡುವಂತಹ ಸಂದರ್ಭಗಳಲ್ಲಿ ಕಡ್ಡಾಯವಾಗಿ ಯುಜಿಡಿ, ಕುಡಿಯುವ ನೀರಿನ ಸಂಪರ್ಕ ಮತ್ತು ವಿದ್ಯುತ್ ದೀಪದ ಲೈನ್ ಗಳನ್ನು ಕೈಗೊಂಡಿರುವ ಬಗ್ಗೆ ಹಾಗೂ ಆ ವ್ಯಾಪ್ತಿಯ ಮುಖ್ಯ ಯುಜಿಡಿ, ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಮುಖ್ಯ ವಿದ್ಯುತ್ ಸಂಪರ್ಕಕ್ಕೆ ಸಂಪರ್ಕ ಕಲ್ಪಿಸಿರುವ ಬಗ್ಗೆ ಪಾಲಿಕೆಯ ಕಾರ್ಯವ್ಯಾಪ್ತಿಯ ಸಂಬಂಧಪಟ್ಟ ಅಭಿಯಂತರರುಗಳಿಂದ ದೃಢೀಕೃತ ನಕ್ಷೆಯನ್ನು ಹಾಜರುಪಡಿಸಿದ್ದಲ್ಲಿ ಮಾತ್ರ ನಿವೇಶನ ಬಿಡುಗಡೆಗೆ ಕ್ರಮವಹಿಸಲಾಗುವುದು.