ನಗರದಲ್ಲಿ ಹೊಸ ೩೭೨ ಶೌಚಾಲಯಗಳ ನಿರ್ಮಾಣ

ಬೆಂಗಳೂರು,ಫೆ.೨೩- ಬಿಬಿಎಂಪಿ ವ್ಯಾಪ್ತಿಯ ೮ ವಲಯಗಳಲ್ಲಿ ಒಟ್ಟು ೯೦೭ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳಿದ್ದು, ಹೊಸದಾಗಿ ಇನ್ನೂ ೩೭೨ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು,ಮಹಿಳೆಯರ ಶೌಚಾಲಯದ ಬಾಗಿಲುಗಳು ಭದ್ರವಾಗಿಲ್ಲದೇ ಇರುವ ಕುರಿತು ದೂರುಗಳು ಬಂದಲ್ಲಿ ಕಾಲಕಾಲಕ್ಕೆ ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದರು.
ಮಹಿಳೆಯರ ಸುರಕ್ಷಿತ ದೃಷ್ಟಿಯಿಂದ ವಿಶೇಷವಾಗಿ ಪ್ರತ್ಯೇಕ ೧೦೦ ಮಹಿಳಾ ಶೌಚಾಲಯಗಳನ್ನು ಮಹಿಳೆಯರ ಸಾಂದ್ರತೆ ಇರುವ ಸ್ಥಳಗಳಲ್ಲಿ ಅಂದರೆ ಗಾರ್ಮೆಂಟ್ಸ್ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಪಿಪಿಪಿ ಆಧಾರದ ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಶೌಚಾಲಯಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಆಗಿಂದಾಗ್ಗೆ ಅಗತ್ಯ ಕ್ರಮವನ್ನು ವಹಿಸಲಾಗಿರುತ್ತದೆ. ಒಂದು ವೇಳೆ ನೀರಿನ ಸಮಸ್ಯೆ ಉಂಟಾದಲ್ಲಿ ತಾತ್ಕಾಲಿಕ ಪರಿಹಾರವಾಗಿ ಶೌಚಾಲಯದ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಏಜೆನ್ಸಿರವರಿಂದ ನೀರಿನ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಲು ಸ್ವಚ್ಛ ಸರ್ವೇಕ್ಷಣ ಮಾನದಂಡದ ಅನ್ವಯ ವಾರ್ಡ್‌ವಾರು ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು (ಘನತ್ಯಾಜ್ಯ ನಿರ್ವಹಣೆ) ರವರಿಂದ ಶೌಚಾಲಯವನ್ನು ಆಗಿಂದಾಗ್ಯ ಪರಿವೀಕ್ಷಣೆ ಮಾಡಿಸಿ, ನ್ಯೂನ್ಯತೆಯನ್ನು ಸಂಬಂಧಿಸಿದ ಕಾರ್ಯನಿರ್ವಹಣೆ ಏಜೆನ್ಸಿ ಸರಿಪಡಿಸಲಾಗುತ್ತಿದೆ ಎಂದು ಹೇಳಿದರು.
ಮಹಿಳೆಯರಿಗಾಗಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಶೌಚಾಲಯಗಳಲ್ಲಿ ಮಾನದಂಡಗಳನ್ವಯ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಲಾಗಿರುತ್ತದೆ ಹಾಗೂ ಇವುಗಳು ಬಳಕೆಯೂ ಸೂಕ್ತವಾಗಿರುತ್ತದೆ ಮತ್ತು ಕಾಲಕಾಲಕ್ಕೆ ಅವುಗಳನ್ನು ದುರಸ್ಥಿಗೊಳಿಸಿ ವಲಯಮಟ್ಟದಲ್ಲಿ ಸಮರ್ಪಕವಾಗಿ ನಿರ್ವಹಣೆಯನ್ನು ಮಾಡಲಾಗುತ್ತಿದೆ ಎಂದರು
ಮುಖ್ಯ ಆಯುಕ್ತರುರವರ ಅಧ್ಯಕ್ಷತೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣ/ನಿರ್ವಹಣೆ ಸಂಕ್ಷಿಪ್ತ ಯೋಜನೆಗಳನ್ನು ರೂಪಿಸಲು ೧೧ ಜನ ಸದಸ್ಯರನ್ನೊಳಗೊಂಡಂತೆ ಸಮಿತಿಯನ್ನು ರಚಿಸಲಾಗಿರುತ್ತದೆ. ಸದರ ಸಮಿತಿಯು ಶೌಚಾಲಯಗಳ ಕಾರ್ಯಾಚರಣೆ ಹಾಗೂ ನಿರ್ಮಾಣ, ಸ್ಥಳ ಗುರುತಿಸುವಿಕೆ ಜವಾಬ್ದಾರಿಯನ್ನು ನೀಡಲಾಗಿದೆ ಎಂದರು.