ನಗರದಲ್ಲಿ ಸ್ನೇಹ ಸಮ್ಮಿಲನದಿಂದ ಬಕ್ರೀದ್ ಹಬ್ಬ ಆಚರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.29: ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸಿದರು.
 ನಗರದ ಮಸೀದಿಗಳು ಮತ್ತು ಈದ್ಗಗಳಲ್ಲಿ ಸಾಮೂಹಿಕ ಈದ್ ನಮಾಜ್‌ ಮಾಡಲಾಯಿತು. ಮಕ್ಕಳು, ಹಿರಿಯರು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ನಮಾಜ್‌ಗೂ ಮುನ್ನ ಕೆಲ ಹೊತ್ತು ‘ತಕ್ಬೀರ್‌’ ಮೊಳಗಿಸಲಾಯಿತು ಈ ಸಂಧರ್ಭದಲ್ಲಿ ಶಾಸಕ ಬಿ.ಎಂ ನಾಗರಾಜ್ ಪಾಲ್ಗೊಂಡಿದ್ದರು.
 ನಮಾಜ್‌ ಬಳಿಕ ಪರಸ್ಪರ ಶುಭಾಶಯ ತಿಳಿಸಿ, ಗೆಳೆಯರ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡುವರು. ಯಾವುದಾದರೂ ಕಾರಣದಿಂದ ಕೋಪಿಸಿಕೊಂಡಿರುವರು ಕೂಡ ದ್ವೇಷವನ್ನು ಮರೆತು ಶುಭಾಶಯ ವಿನಿಮಯ ಮಾಡುವರು. ವ್ಯಕ್ತಿಗಳು, ಕುಟುಂಬಗಳ ನಡುವೆ ಬಾಂಧವ್ಯ ಬೆಳೆಯಲು ಹಬ್ಬ ನೆರವಾಗುತ್ತದೆ.
 ಮನೆಗಳಲ್ಲಿ ಹಬ್ಬದ ಊಟ, ವಿಶೇಷ ಖಾದ್ಯಗಳನ್ನು ತಯಾರಿಸುವರು. ಗೆಳೆಯರು, ಬಂಧುಗಳನ್ನು ಆಹ್ವಾನಿಸಿ ಜೊತೆಯಾಗಿ ಊಟ ಮಾಡಿ, ಸಂಭ್ರಮ ಹಂಚಿಕೊಳ್ಳುವರು. ಹಬ್ಬದ ದಿನ ದಾನವಾಗಿ ದೊರೆಯುವ ಮಾಂಸ, ಹಣ, ದಿನಸಿ ಸಾಮಗ್ರಿಗಳಿಂದ ಎಷ್ಟೋ ಬಡಕುಟುಂಬಗಳಿಗೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುತ್ತದೆ.
 ಜಾನುವಾರು ಬಲಿ ನೀಡುವುದು ‘ಬಕ್ರೀದ್‌’ನ ಪ್ರಮುಖ ಆಚರಣೆಯಾಗಿದೆ. ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದಿದ್ದ ಘಟನೆಯೊಂದರ ನೆನಪಿನಲ್ಲಿ ಜಾನುವಾರು ಬಲಿ ನೀಡಲಾಗುತ್ತದೆ.
 ಬಕ್ರೀದ್‌ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ತಿಂಗಳ ಕೊನೆಯಲ್ಲಿ ಬರುವ ಈದ್-ಉಲ್-ಫಿತರ್ ನಂತರ ಸುಮಾರು ಎರಡು ತಿಂಗಳು ಕಳೆದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಾನುವಾರುಗಳನ್ನು ಬಲಿ ನೀಡುವ ಮೂಲಕ ಮುಸ್ಲಿಮರು ಬಕ್ರೀದ್ ಆಚರಿಸುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಮೇಕೆ, ಕುರಿ, ಒಂಟೆ ಬಲಿ ಕೊಡುತ್ತಾರೆ. ಬಕ್ರೀದ್ ಹಬ್ಬವನ್ನು ಬಕ್ರಿ ಈದ್, ಈದ್ ಕುರ್ಬಾನ್, ಈದ್ ಅಲ್-ಅಧಾ ಅಥವಾ ಕುರ್ಬಾನ್ ಬಯಾರಾಮಿ ಎಂದೂ ಕರೆಯಲಾಗುತ್ತದೆ ಎಂದು ಇಮಾಮ್ ಖತೀಬ್ ಸಯ್ಯದ್ ಖಲಂದರ್ ನೂರೀ ಉಪದೇಶವನ್ನು ನೀಡಿದರು.