ನಗರದಲ್ಲಿ ಸೋಂಕು ತುಸು ಏರಿಕೆ

ಬೆಂಗಳೂರು, ನ.೨೦- ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ನಂತರ ಪುನಃ ಕೋವಿಡ್ ಸೋಂಕಿನ ಪ್ರಕರಣಗಳು ತುಸು ಏರಿಕೆಯಾಗುತ್ತಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು ನಗರ ವ್ಯಾಪ್ತಿಲ್ಲಿ ಕಳೆದ ೧೫ ದಿನಗಳಿಂದ ಕೋವಿಡ್ -೧೯ ಪ್ರಕರಣಗಳಲ್ಲಿ ಸ್ವಲ್ಪ ಅಧಿಕವಾಗಿದೆ ಎಂದು ಬಿಬಿಎಂಪಿ ಅಧಿಕೃತ ಮೂಲಗಳು ತಿಳಿಸಿವೆ. ಇದೇ ತಿಂಗಳ ೬ ರಂದು ೧೩೫ ಪಾಸಿಟಿವ್ ಪ್ರಕರಣಗಳನ್ನು ವರದಿ ಮಾಡಿದೆ.
ಇದಾದ ಬಳಿಕ ನ. ೧೨ ರಂದು ೧೪೭, ನವೆಂಬರ್ ೧೭ ರಂದು ೧೬೨ ಕೊರೋನಾ ಪ್ರಕರಣಗಳು ಏರಿಕೆಯಾಗಿವೆ.ಮತ್ತೊಂದೆಡೆ
ಕಳೆದ ೧೫ ದಿನಗಳಲ್ಲಿ ೪೨ ಕೋವಿಡ್ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಿದರೆ, ಖಾಸಗಿ ಆಸ್ಪತ್ರೆಗಳಿಗೆ ೨೩೧ಮಂದಿ ಸೇರಿದ್ದಾರೆ.
ಕಾರಣವೇನು: ಹಬ್ಬ ಹರಿದಿನಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿರುವುದೇ ಪ್ರಕರಣಗಳ ಹೆಚ್ಚಳಕ್ಕೆ ಒಂದು ಕಾರಣವಾದರೆ, ಕಳೆದ ಎರಡು ತಿಂಗಳುಗಳಲ್ಲಿ, ಅನೇಕ ಹಬ್ಬಗಳು, ಮದುವೆಗಳು ಮತ್ತು ಇತರ ಸಾಮಾಜಿಕ ಕೂಟಗಳಲ್ಲಿ ಜನರು ಒಟ್ಟಾಗಿ ಸೇರಿದ್ದಾರೆ.
ಇನ್ನೂ, ನವೆಂಬರ್ ಎರಡನೇ ವಾರದಲ್ಲಿ ಪಾಸಿಟಿವ್ ಫಲಿತಾಂಶ ಬಂದ ಐದು ಮಹಿಳೆಯರಿದ್ದು, ಇವರು ಬಟ್ಟೆ ಅಂಗಡಿವೊಂದರಲ್ಲಿ ಖರೀದಿಗೆ ಹೋದಾಗ ಸೋಂಕು ತಗುಲಿದೆ. ಹಾಗೇ, ಸರ್ಕಾರವೂ ಕೋವಿಡ್ ಪರೀಕ್ಷೆ ಪ್ರಮಾಣ ತಗ್ಗಿಸಿರುವುದು ಸೋಂಕು ಹರಡಲು ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಜನರ ನಿರ್ಲಕ್ಷ್ಯ ದಿಂದಾಗಿ ಸೋಂಕು ಹರಡುತ್ತಿದೆ. ಸಾರ್ವಜನಿಕವಾಗಿ ಹೊರಗಿರುವಾಗ ಮಾಸ್ಕ್ ಧರಿಸಬೇಕು ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕುಎಂದು ತಿಳಿಸಿದರು.
ಪ್ರಗತಿ ಹೊಂದಿದ ದೇಶಗಳಲ್ಲಿ ಶೀತ ಋತುವಿನಲ್ಲಿ, ಪ್ರಕರಣಗಳು ಹೆಚ್ಚಾಗುತ್ತವೆ ಎಂದು ನಂಬುತ್ತಾರೆ. ಆದರೆ ಬೆಂಗಳೂರು ಬಹುತೇಕ ಭಾಗ ಉಷ್ಣವಲಯದ ಹವಾಮಾನವನ್ನು ಹೊಂದಿದೆ, ಆದ್ದರಿಂದ ಹವಾಮಾನದ ಏರಿಕೆಯನ್ನು ನಾವು ದೂಷಿಸಲು ಸಾಧ್ಯವಿಲ್ಲ ಎಂದರು.