ನಗರದಲ್ಲಿ ಸೋಂಕು ಉಲ್ಬಣ ಆಕ್ಸಿಜನ್‌ಗೆ ಪರದಾಟ

Oxygen cylinder are been transportation on tractors for hospital

ಬೆಂಗಳೂರು, ಏ.೩೦- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆಯ ಉಲ್ಬಣದ ಮಧ್ಯೆ, ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ಸಾಮಾನ್ಯ ಜನರಿಗೆ ಮಾತ್ರವಲ್ಲದೆ, ಗಣ್ಯ ವ್ಯಕ್ತಿಗಳಿಗೂ ಕಾಡುತ್ತಿದ್ದು, ಆಕ್ಸಿಜನ್ ಬೆಡ್ ಪಡೆಯಲು ಹರಸಾಹಸ ಪಡೆಯುತ್ತಿದ್ದಾರೆ.
ವೈದ್ಯಕೀಯ ಸೌಲಭ್ಯಗಳ ವಿಷಯದಲ್ಲಿ ಅತ್ಯಾಧುನಿಕ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಆಮ್ಲಜನಕ ಸೌಲಭ್ಯ ಹೊಂದಿರುವ ಆಸ್ಪತ್ರೆಯ ಹಾಸಿಗೆಯನ್ನು ಪಡೆಯುವುದು ಅಸಾಧ್ಯವಾಗಿದ್ದು, ಮಂತ್ರಿಗಳು, ಅಧಿಕಾರಿಗಳು, ಗಣ್ಯರು ಸೇರಿದಂತೆ ವಿವಿಐಪಿಗಳಿಗೆ ಸಹ ಇದು ಒಂದು ಸವಾಲಾಗಿದೆ ಪರಿಣಮಿಸಿದೆ.
ಈಗಾಗಲೇ ನಗರದ ಬಹುತೇಕ ಹೈಟೆಕ್ ಆಸ್ಪತ್ರೆಗಳಲ್ಲಿಯೇ ಆಕ್ಸಿಜನ್ ಬೆಡ್ ಇಲ್ಲ. ಹಾಸಿಗೆಗಳಿಲ್ಲ ಎಂದು ಪ್ರಕಟಿಸಿರುವ ಫಲಕಗಳು ಆಸ್ಪತ್ರೆಗಳ ಮುಖ್ಯ ದ್ವಾರದ ಮುಂಭಾಗ ರಾರಾಜಿಸುತ್ತಿವೆ. ಮತ್ತೊಂದೆಡೆ ಮುಖ್ಯಮಂತ್ರಿಗಳ ಕಚೇರಿಯಲ್ಲಿಂದಲೇ ಕರೆ ಮಾಡಿ ಮನವಿ ಮಾಡಿದರೂ, ಬೆಡ್ ಹೊಂದಿರುವುದು ಕಷ್ಟಕರ ಎನ್ನಲಾಗಿದೆ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚೆಗೆ, ಸೋಂಕಿಗೆ ತುತ್ತಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಣಿಪಾಲ್ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪ್ರಯತ್ನಿಸಿದರೂ, ಸಿಗಲಿಲ್ಲ.ಆನಂತರ, ಅಂತಿಮವಾಗಿ ಅಪೋಲೊ ಆಸ್ಪತ್ರೆಗೆ ಸೇರಿದರು.
ಇನ್ನು, ಮುಖ್ಯಮಂತ್ರಿ ಯಡಿಯುರಪ್ಪ ಅವರ ಸಚಿವ ಸಂಪುಟದ ಹಿರಿಯ ಮಂತ್ರಿಯೊಬ್ಬರು ತಮ್ಮ ಆಪ್ತ ಸಂಬಂಧಿಕರೊಬ್ಬರಿಗೆ ಉಸಿರಾಡಲು ತೊಂದರೆಯಾಗಿದ್ದ ಆಮ್ಲಜನಕ ಸೌಲಭ್ಯದೊಂದಿಗೆ ಹಾಸಿಗೆಯನ್ನು ಪಡೆಯಲು ಕಷ್ಟಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ಆಮ್ಲಜನಕದ ಪೂರೈಕೆಯ ಅನಿಶ್ಚಿತತೆಯಿಂದಾಗಿ ಯಾವುದೇ ಖಾಸಗಿ ಆಸ್ಪತ್ರೆ ರೋಗಿಯನ್ನು ದಾಖಲಿಸಲು ಸಿದ್ಧವಾಗಿಲ್ಲದ ಕಾರಣ ನಾನು ಆಮ್ಲಜನಕ ಸಿಲಿಂಡರ್ ಖರೀದಿಸಿ ಮನೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿತ್ತು. ಅಂತಿಮವಾಗಿ ನಾವು ಅವರನ್ನು ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದೆವು ಎಂದು ಸಚಿವರೇ ಮಾಹಿತಿ ಬಿಚ್ಚಿಟ್ಟರು.
ಈ ಕುರಿತು ಪ್ರತಿಕ್ರಿಯಿಸಿರುವ ಸಿನಿಮಾ ನಟರೊಬ್ಬರು, ನಗರದ ಆಸ್ಪತ್ರೆಗಳಲ್ಲಿ ಕೇವಲ ಹಾಸಿಗೆಗಳು ಮತ್ತು ಆಮ್ಲಜನಕದ ಸಮಸ್ಯೆ ಮಾತ್ರವಲ್ಲ. ತಜ್ಞ ವೈದ್ಯರ ತೀವ್ರ ಕೊರತೆಯೂ ಇದೆ ಎಂದು ನುಡಿದರು.
ಮತ್ತೊಂದು ಘಟನೆ ಎಂದರೆ ಸಿಎಂ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಮತ್ತೊಬ್ಬ ಹಿರಿಯ ಅಧಿಕಾರಿ, ತನ್ನ ಅತ್ತೆಗೆ ಹಾಸಿಗೆ ಕೊಡಿಸಲು ಪರದಾಟ ನಡೆಸಿದರು. ಮಂಗಳವಾರ ಸಂಜೆ ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಇಂದಿರಾನಗರದಲ್ಲಿರುವ ಅವರ ನಿವಾಸದ ಬಳಿಯ ಪ್ರಮುಖ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಹಲವು ಮನವಿಗಳ ಹೊರತಾಗಿಯೂ, ಆಕೆಯನ್ನು ಮನೆಗೆ ಕರೆದೊಯ್ಯಲು ಅವರಿಗೆ ಸೂಚಿಸಲಾಯಿತು.ಯಾವುದೇ ಹಾಸಿಗೆ ಖಾಲಿ ಇಲ್ಲ, ಮತ್ತು ಅವರನ್ನು ಮನೆಯಲ್ಲಿಯೇ ಇಡುವಂತೆ ತಿಳಿಸಲಾಯಿತು.ಆದರೆ, ರಾತ್ರಿ ಮುಂದುವರೆದಂತೆ ರೋಗಿಯ ಸ್ಥಿತಿ ಹದಗೆಟ್ಟಿತು. ಆಮ್ಲಜನಕದ ಮಟ್ಟವು ತಗ್ಗಿತು. ಆನಂತರ ಹಲವು ಪ್ರಯತ್ನಗಳ ಬಳಿಕ ಅವರನ್ನು ಒಂದು ಸಣ್ಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾದರೂ ಇನ್ನೂ ಜೀವನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ರೆಮ್‌ಡೆಸಿವಿರ್: ಆಕ್ಸಿಜನ್, ಬೆಡ್ ಮಾತ್ರವಲ್ಲದೆ, ಔಷಧಕ್ಕೂ ಪರದಾಟ ನಡೆಸುವ ಸ್ಥಿತಿ ಬಂದಿದ್ದು, ಗಣ್ಯ ವ್ಯಕ್ತಿಯೊಬ್ಬರು ರೆಮ್‌ಡೆಸಿವಿರ್ ಇಂಜೆಕ್ಷನ್‌ಗಾಗಿ ೫೦,೦೦೦ ರೂ. ನೀಡಿದ್ದಾರೆ. ಇದು ಅಧಿಕೃತವಾಗಿ ಲಭ್ಯವಿಲ್ಲ, ಆದರೆ, ಕಳಾ ಸಂತೆಯಲ್ಲಿ ಮನೆಗೆ ಬಂದು ಸಹ ನೀಡಲು ಸಿದ್ಧರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.