ನಗರದಲ್ಲಿ ಸುರಿದ ಭಾರಿ ಮಳೆಯಿಂದ ಅವಾಂತರ

ಶಹಾಬಾದ:ಜು.31:ನಗರದಲ್ಲಿ ಶನಿವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದ ಶಾಲಾ-ಕಾಲೇಜಿನ ಆವರಣಗಳು ಜಲಾವೃತ, ಬಾಲಕರ ವಸತಿ ನಿಲಯದಲ್ಲಿ ನುಗ್ಗಿದ ನೀರು, ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹ, ತಗ್ಗುಗಳಲ್ಲಿ ನೀರು ತುಂಬಿಕೊಂಡು ಸಾರ್ವಜನಿಕರು ಸಂಚಾರಕ್ಕೆ ತೊಂದರೆ ಉಂಟಾಯಿತು.

ಮಧ್ಯಾಹ್ನ 3 ಗಂಟೆಗೆ ಕತ್ತಲು ಆವರಿಸಿ ಆಕಾಶದಲ್ಲಿ ಕರಿಮೋಡಗಳು ಎಲ್ಲೆಡೆ ಮೂಡಿ ಮಳೆ ಬರುವ ಮುನ್ಸೂಚನೆ ನೀಡಿತು.ಅದರಂತೆಯೇ ಸುಮಾರು 1 ಗಂಟೆಗಳ ಕಾಲ ಭಾರಿ ಮಳೆಯಾದ್ದರಿಂದ ನಗರದ ಶಾಲಾ-ಕಾಲೇಜಿನ ಆವರಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಜಲಾವೃಗೊಂಡು ಶಾಲಾ ಮಕ್ಕಳಿಗೆ ಎಲ್ಲಿಲ್ಲದ ತೊಂದರೆಯಾಯಿತು.ಅಲ್ಲದೇ ನಗರದ ನೂತನ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ನೀರು ನುಗ್ಗುತ್ತಿರುವುದನ್ನು ಗಮನಿಸಿ ಪಕ್ಕದ ಹಳೆ ಹಾಸ್ಟೆಲ್ ಮೇಲ್ವಿಚಾರಕ ರವಿಕುಮಾರ ಅವರು ಮುಜಾಗೃತ ಕ್ರಮವಾಗಿ ಸುಮಾರು 35 ಮಕ್ಕಳನ್ನು ಪಕ್ಕದ ಹಾಸ್ಟೆಲ್ ಸ್ಥಳಾಂತರಿಸಿದರು.ಸುಮಾರು ಅರ್ಧಗಂಟೆಯಲ್ಲೇ ಹಾಸ್ಟೆಲ್ ಒಳಗಡೆ ಸುಮಾರು ತೊಡೆಯ ಮಟ್ಟದವರೆಗ ನೀರು ಸಂಗ್ರಹವಾಗಿದ್ದರಿಂದ ಬಹಳ ತೊಂದರೆ ಅನುಭವಿಸುವಂತಾಯಿತು.

ಸುದ್ದಿ ತಿಳಿದ ತಕ್ಷಣವೇ ತಹಸೀಲ್ದಾರ ಸುರೇಶ ವರ್ಮಾ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚೇತನ ಗುರಿಕರ್ ಬೇಟಿ ನೀಡಿ ಪರಿಶೀಲಿಸಿದರು.ಅಲ್ಲದೇ ಹಾಸ್ಟೆಲ್ ಒಳಗಡೆ ಪದೇ ಪದೇ ನೀರು ನುಗ್ಗಲು ಚರಂಡಿ ಕಾಮಗಾರಿ ಸಂಪೂರ್ಣ ಕೈಗೊಳ್ಳದಿರುವುದೇ ಕಾರಣ.ಕೂಡಲೇ ಚರಂಡಿ ಕಾಮಗಾರಿ ಸಂಪೂರ್ಣಗೊಳಿಸಿ.ಇಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.ಅಲ್ಲದೇ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚೇತನ ಗುರಿಕರ್ ಲಿಖಿತ ದೂರನ್ನು ನೀಡಿದರು.

ರಸ್ತೆಯ ಮೇಲೆ ನೀರು: ನಗರದ ಮುಖ್ಯ ರಸ್ತೆಯಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಮಾಡಿರುವುದರಿಂದ ಮಳೆ ಬಂದಾಗಲೊಮ್ಮೆ ನೀರು ರಸ್ತೆಯ ಮೇಲೆ ಸಂಗ್ರಹವಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಿತು.ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರಿ ವೃತ್ತದವರೆಗೆ ಸಾಕಷ್ಟು ಪ್ರಮಾಣದಲ್ಲಿ ರಸ್ತೆಯ ಮೇಲೆಯೇ ನೀರು ನೀತಿದ್ದರಿಂದ ಇಲ್ಲಿನ ಮುಖ್ಯ ರಸ್ತೆ ಹಳ್ಳವಾಗಿ ಮಾರ್ಪಟ್ಟಿತ್ತು. ಸಾರ್ವಜನಿಕರು ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಕಂಡು ಬಂದಿತು.ಚರಂಡಿಗಳು ತುಂಬಿಕೊಂಡು ರಸ್ತೆಯ ಮೇಲೆ ಪಾಲಾಸ್ಟಿಕ,ಕಸ, ಕೊಳಕು ನೀರು ರಸ್ತೆಯ ತುಂಬೆಲ್ಲಾ ಹರಿಯಿತು. ಅಲ್ಲದೇ ಗೋಳಾ(ಕೆ) ಹೋಗುವ ರೇಲ್ವೆ ಸೇತುವೆ ಬಳಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದರಿಂದ ಅಲ್ಲಿಯೂ ಅಧಿಕಾರಿಗಳು ಜೆಸಿಬಿಯಿಂದ ಕಸವನ್ನು ತೆಗೆದು ನೀರು ಹರಿದು ಹೋಗುವಂತೆ ಮಾಡಲಾಯಿತು.