
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ.5- ನಗರದಲ್ಲಿನ ಬಡ ಜನರಿಗೆ ಮನೆ, ನಿವೇಶನ ನೀಡುವುದು, ಮೆಣಸಿನಕಾಯಿ ಮಾರುಕಟ್ಟೆ ಮಾಡುವುದು, ಮಿಂಚೇರಿ ಬೆಟ್ಟದ ಅಭಿವೃದ್ಧಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಕಟ್ಟಡಕ್ಕೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬಾಕಿ ಇರವ ಹಣ ಬಿಡುಗಡೆ ಮಾಡಿಸುವ ಕಾರ್ಯವನ್ನು ಶಾಸಕರಾದವರು ಮಾಡಿಸಬೇಕೆ ಹೊರೆತು. ಅದು ಬಿಟ್ಟು ವಯಕ್ತಿಕ ನಿಂದನೆ, ಎಚ್ಚರಿಕೆಯ ಮಾತುಗಳಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸ ಬೇಡಿ ಎಂದು ಎಡಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಮುಖಂಡರಾದ ಜೆ.ಸತ್ಯಬಾಬು, ವಿ.ಎಸ್.ಶಿವಶಂಕರ್, ಚಂದ್ರಕುಮಾರಿ, ಜೆ.ಎಂ.ಚೆನ್ನಬಸಯ್ಯ ಅವರು.
ಶಾಸಕರಾಗಲಿ, ಅವರ ಬೆಂಬಲಿಗರಾಗಲಿ ಅಭಿವೃದ್ಧಿ ವಿಷಯದಲ್ಲಿ ಮಾತನಾಡ ಬೇಕು. ಮಾತನಾಡುವಾಗ ವೈಯಕ್ತಿಕ ದೂಷಣೆ ಮಾಡುವುದು, ಪ್ರಚೋದನಕಾರಿ ಮಾತುಗಳನ್ನಾಡುವುದು ಸರಿಯಲ್ಲ ಎಂದರು.
ಆಕಸ್ಮಿಕ ಕೊಲೆಯ ಪ್ರಕರಣವೊಂದನ್ನು ತೆಗೆದುಕೊಂಡು ಕೆಆರ್ ಪಿ ಪಕ್ಷದವರು ನಗರ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.
ಗೂಂಡಾ ಪ್ರವೃತ್ತಿಯ ಮಾತುಗಳು ಜನರಲ್ಲಿ ಭಯವನ್ನು ತರುತ್ತವೆ ಎಂದರು.
ಈ ವಿಷಯದಲ್ಲಿ ಕೆಆರ್ಪಿ ಅಷ್ಟೇ ಅಲ್ಲ ಶಾಸಕ ಭರತ್ ರೆಡ್ಡಿ, ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಜನಾರ್ಧನರೆಡ್ಡಿ ಅವರ ಬಗ್ಗೆ ಆಡಿದ ಮಾತಗಳು ಸಹ ಸರಿಯಲ್ಲ. ಬೆದರಿಕೆಯ ಮಾತುಗಳ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿ ಎಂದು ಆಗ್ರಹಿಸಿದರು.
ನಗರ ಶಾಸಕ ಭರತ್ ರೆಡ್ಡಿ ಅವರು ಇನ್ನೂ ಚಿಕ್ಕವಯಸ್ಸಿನವರು, ಭವಿಷ್ಯತ್ತನ್ನು ಗಮನದಲ್ಲಿರಿಸಿಕೊಂಡು ಪರಸ್ಪರ ಕೆಸರೆರಚಾಟಕ್ಕೆ ಒತ್ತು ನೀಡದೆ. ತಾವೇ ಹೇಳಿದಂತೆ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಬಗ್ಗೆ ಗಮನಕೊಡುವುದು ಸರಿ ಎಂದರು.
ಅಭಿವೃದ್ಧಿ ಎಂದರೆ ರಸ್ತೆ ಮಾಡಿದ್ದಷ್ಟೇ ಅಲ್ಲ. ಜನರ ಜೀವನ ಮಟ್ಟ ಸುಧಾರಣೆ ಆಗಬೇಕು. ಕಳೆದ 260 ದಿನಗಳಿಂದ ಕುಡಿತಿನಿಯಲ್ಲಿನ ರೈತರ ಹೋರಾಟಕ್ಕೆ ಪರಿಹಾರ ಕಂಡುಕೊಂಡಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕರು ಬಂದು ಒಮ್ಮೆ ಮಾತನಾಡಿ ಹೋಗಿದ್ದು ಬಿಟ್ಟರೆ, ಉಳಿದ ಜನಪ್ರತಿನಿಧಿಗಳಿಂದ ಸ್ಪಂದನೆ ಇಲ್ಲದಾಗಿದೆ.
ತಾಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಶಪಡಿಸಿಕೊಂಡ ಜಮೀನಿನಲ್ಲಿ ಕೈಗಾರಿಕೆಗಳ ಆರಂಭಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಈಕೆಲಸಕ್ಕೆ ಒತ್ತು ನೀಡಲಿ ಎಂದರು.