(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ಸಚಿವ ಬಿ.ಶ್ರೀರಾಮುಲು ಅವರು ನಗರದ ಬುಡಾ ಕಛೇರಿ ಹಿಂಭಾಗದ ಟೇಕೂರ್ ಸುಬ್ರಮಣ್ಯಂ ಪಾರ್ಕ್ ನಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ.
ಸ್ವತಃ ಶ್ರೀರಾಮುಲು ಅವರ ಆಸಕ್ತಿಯಿಂದ ತಮ್ಮ ಸ್ವಂತ ವೆಚ್ಚದಲ್ಲಿ ಸಿದ್ಧಪಡಿಸಿರುವ 10 ವರೆ ಅಡಿ ಎತ್ತರದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪುಡ್ ಪಾರ್ಕ್ ಬದಿಯಲ್ಲಿ ತಂದು ರಾತ್ರೋರಾತ್ರಿ ಇರಿಸಲಾಗಿದೆ. ನಿನ್ನೆ ಸಂಜೆ ಇದರ ಉದ್ಘಾಟನೆಗೂ ಮುಂದಾಗಿ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ ಸಹ ನೀಡಲಾಗಿತ್ತು. ಆದರೆ ಜಿಲ್ಲಾಡಳಿತ ಇದಕ್ಕೆ ತಡೆಯೊಡ್ಡಿದೆಂದು ಹೇಳಲಾಗುತ್ತಿದೆ. ಸದ್ಯ ಮುಖ ಮುಚ್ಚಿರುವ ಸ್ಥಿತಿಯಲ್ಲಿ ಪ್ರತಿಮೆ ಇರಿಸಲಾಗಿದೆ.
ವಿವಾದಕ್ಕೆ ಕಾರಣ
ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಮೆಯನ್ನು ಸ್ಥಾಪಿಸಲು ಬಳ್ಳಾರಿ ಜಿಲ್ಲಾ ಹಾಲುಮತ ಮಹಾಸಭಾ, ಮಹಾನಗರ ಪಾಲಿಕೆಗೆ ಮನವಿ ಮಾಡಿತ್ತು. ಶಾಸಕರಾದ ಸೋಮಶೇಖರರೆಡ್ಡಿ, ನಾಗೇಂದ್ರ ಅವರು ಸಮ್ಮತಿಸಿ ಶಿಫಾರಸ್ಸು ಪತ್ರ ನೀಡಿದ್ದರು. ಪಾಲಿಕೆ ಸಭೆಯಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರದೆ ಅನುಮತಿ ನೀಡಿಲ್ಲ. ಇನ್ನು ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡದೆ ಬುಡಾದ ಪಾರ್ಕ್ ನ ಮೂಲೆಯಲ್ಲಿ ಪ್ರತಿಷ್ಠಾಪನೆ ಮಾಡಿರುವುದರಿಂದ ಬುಡಾ ಸಹ ಅನುಮತಿ ನೀಡಿಲ್ಲ. ಇದು ಒಂದು ಕಾರಣವಾದರೆ, ಮತ್ತೊಂದು ಕಾರಣ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಈ ರೀತಿ ಕದ್ದುಮುಚ್ಚಿ ರಾತ್ರೋರಾತ್ರಿ ಮಾಡುವ ಅಗತ್ಯತೆ ಇಲ್ಲ ರಾಜ್ಯಮಟ್ಟದ ಗಣ್ಯರನ್ನು ಕರೆದು ಸಾವಿರಾರು ಜನರನ್ನು ಕರೆಸಿ ಪ್ರತಿಷ್ಠಾಪನೆ ಮಾಡಬೇಕೆಂದು ಜಿಲ್ಲಾ ಕುರುಬರ ಸಂಘ ಮೌಖಿಕವಾಗಿ ಜಿಲ್ಲಾಡಳಿತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಿವಾದವಿಲ್ಲದೆ, ಪಾಲಿಕೆ ಬುಡಾ ಅನುಮತಿ ಪಡೆದು ಪ್ರತಿಮೆ ಅನಾವರಣ ಆಗಬೇಕೆಂದು ಜಿಲ್ಲಾಡಳಿತ ತಡೆ ಹಿಡಿದಿದೆ.
ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ನಿನ್ನೆ ಸಂಜೆ ಸಚಿವ ಶ್ರೀರಾಮುಲುರಿಂದ ಪ್ರತಿಮೆ ಅನಾವರಣಗೊಳ್ಳುತ್ತಿತ್ತು. ಇದಕ್ಕಾಗಿ ಸಂಜೆವರೆಗೂ ಸಮುದಾಯದ ಮತ್ತು ಬಿಜೆಪಿ ಕಡೆಯವರ ಗುಂಪು ಪ್ರತಿಮೆ ಅನಾವರಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿತ್ತು.
ಇದು ಬಿಜೆಪಿ ಆಡಳಿತದಲ್ಲಿ ಆಗುವುದು ಬೇಡ ಚುನಾವಣೆ ದೃಷ್ಠಿಯಲ್ಲಿರಿಸಿಕೊಂಡು ಕುರುಬ ಸಮುದಾಯದ ಮತ ಸೆಳೆಯಲು ಅವರು ಪ್ರಯತ್ನ ಮಾಡಿದ್ದಾರೆ. ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತೆ ಆಗ ಅದ್ದೂರಿಯಾಗಿ ಮಾಡೋಣ ಎಂದು ಕಾಂಗ್ರೆಸ್ ಪರವಾದ ಕುರುಬ ಸಮುದಾಯದ ಪ್ರಯತ್ನ ಈ ವಿವಾದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಪಾಲಿಕೆಗೆ ಅನುಮತಿ ಕೋರಿತು. ಕೆಲ ಕಾನೂನು ತೊಡಕಿನಿಂದ ಪ್ರತಿಮೆ ಅನಾವರಣ ನಿನ್ನೆ ಆಗಿಲ್ಲ. ಕಾನೂನು ರೀತಿಯಲ್ಲಿ ಮುಂದಿನ ದಿನದಲ್ಲಿ ಅನಾವರಣ ಮಾಡಲಿದೆ.
ಈರನಗೌಡ ಅಧ್ಯಕ್ಷರು, ಬಳ್ಳಾರಿ ಜಿಲ್ಲಾ ಹಾಲುಮತ ಮಹಾಸಭಾ
ಸಂಗೊಳ್ಳಿ ರಾಯಣ್ಣ ನಮ್ಮ ಸಮುದಾಯದ ಬಹುದೊಡ್ಡ ವ್ಯಕ್ತಿತ್ವ ಅಂತಹವರ ಪ್ರತಿಮೆ ಅನಾವರಣ ಬೃಹತ್ ಪ್ರಮಾಣದಲ್ಲಿ ನಡೆಯಬೇಕು, ಜಿಲ್ಲೆಯ ಸಮುದಾಯಕ್ಕೆ ಈ ಮಾಹಿತಿ ತಲುಪಬೇಕು, ಯಾರದೋ ಮನಸೋ ಇಚ್ಛೆಯಂತೆ ನಡೆಯಬೇಕಿಲ್ಲ, ಕಾನೂನು ರೀತಿಯಲ್ಲಿ ಮುಂದಿನ ದಿನಗಳಲ್ಲಿ ಆಗಲಿ.
ಅಲ್ಲೀಪುರ ಕೆ.ಮೋಹನ್,
ಖಜಾಂಚಿ, ಜಿಲ್ಲಾ ಕುರುಬರ ಸಂಘ, ಬಳ್ಳಾರಿ.