
ಹುಬ್ಬಳ್ಳಿ, ಜು 6: ವಿದ್ಯುತ್ ಫೀಡರ್ ಪಿಲ್ಲರ್ ಬಾಕ್ಸ್‍ನಿಂದ ಹರಡಿದ ವಿದ್ಯುತ್ ತಗುಲಿ ಹಸು-ಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹು-ಧಾ ಸ್ಮಾರ್ಟ್ ಸಿಟಿಯ ಅಕ್ಕಿಹೊಂಡದ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಸ್ಮಾರ್ಟ್ ಸಿಟಿ ಯೋಜನೆಗಳಿಂದಾಗಿ ಒಂದಲ್ಲಾ ಒಂದು ಯಡವಟ್ಟು ಅವಳಿನಗರದಲ್ಲಿ ನಡೆಯುತ್ತಿದೆ.
ಕೆಲ ದಿನಗಳಿಂದ ಇಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ಭಾಗವಾಗಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸಲಾಗಿತ್ತು ಎಂದು ತಿಳಿದು ಬಂದಿದ್ದು, ವಿದ್ಯುತ್ ನಿರ್ವಹಣೆಗೆ ಅಳವಡಿಸಲಾಗಿದ್ದ ವಿದ್ಯುತ್ ಫೀಡರ್ ಪಿಲ್ಲರ್ ಬಾಕ್ಸ್ ಬಳಿ ಶಾರ್ಟ್ ಆಗಿ ಸುತ್ತಲಿನ 5 ಮೀಟರ್ ವ್ಯಾಪ್ತಿಯಲ್ಲಿ ವಿದ್ಯುತ್ ಹರಡಿದೆ. ಮಳೆಯಿಂದಾಗಿ ನೆಲವೂ ತೇವವಾಗಿ ಅಲ್ಲೆ ಆಸರೆ ಪಡೆದಿದ್ದ ಹಸು ಮತ್ತು ಕರು ವಿದ್ಯುತ್ ತಗಲಿ ಸಾವನ್ನಪ್ಪಿದೆ.
ನಗರದಲ್ಲಿ ಅಕ್ಕಿಹೊಂಡ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದು, ಬೆಳಗಿನ ಸಮಯ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಜನ ಸಂಚಾರ ಕಡಿಮೆಯಿದ್ದ ಹಿನ್ನೆಲೆಯಲ್ಲಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಸ್ಮಾರ್ಟ್ ಸಿಟಿಯವರು ಅಂಡರ್ ಗ್ರೌಂಡ್ ಕೇಬಲ್ ಅಳವಡಿಸುತ್ತಿದ್ದು, ಇದರಿಂದಾಗಿ ಜನರಿಗೆ ಹಾನಿಯಾಗುವಂತಹ ಕೆಲಸ ಆಗುತ್ತಿದ್ದು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಸಾರ್ವಜನಿಕರು ಇದೇ ರಸ್ತೆ ಮಾರ್ಗವಾಗಿ ಸಂಚರಿಸುತ್ತಾರೆ. ಇಂತಹ ಘಟನೆಯಾದರೆ ಯಾರು ಹೊಣೆ? ಎಂದು ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆದ ಮೇಲೆ ವಾರ್ಡ್ ಸದಸ್ಯ ಹೊರತುಪಡಿಸಿ ಪಾಲಿಕೆ ಅಧಿಕಾರಿಗಳು ಅಥವಾ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಘಟನೆ ನಡೆದ ಬಳಿಕ ವಿದ್ಯುತ್ ಫೀಡರ್ ಪಿಲ್ಲರ್ ಬಾಕ್ಸ್ ದುರಸ್ತಿಗೊಳಿಸುವ ಕಾರ್ಯಕ್ಕೆ ಹೆಸ್ಕಾಂ ಸಿಬ್ಬಂದಿಗಳು ಮುಂದಾಗಿದ್ದು, ಸ್ಥಳೀಯರು ಈ ಘಟನೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.