ನಗರದಲ್ಲಿ ವರ್ಷಧಾರೆ ಹಲವೆಡೆ ಮನೆಗೋಡೆ ಕುಸಿತ

ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಶಂಕರ ಮಠ ವಾರ್ಡ್‌ನಲ್ಲಿ ಮನೆಯ ಗೋಡೆ ಕುಸಿದಿರುವುದು.

ಬೆಂಗಳೂರು, ನ.೧೮-ರಾಜಧಾನಿ ಬೆಂಗಳೂರಿನಲ್ಲಿ ಎಡೆಬಿಡದೆ ಬೀಳುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವು ಕಡೆ ಮನೆಗಳ ಗೋಡೆ ಕುಸಿದು ಮತ್ತೆ ಆತಂಕ ಸೃಷ್ಟಿಸಿದೆ.
ಮಳೆಯಿಂದಾಗಿ ನಗರದ ಕೆಲವು ಕಡೆ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನೂ, ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿಗಿದ್ದು, ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.
ಪ್ರಮುಖವಾಗಿ ಶಂಕರಮಠ ವಾರ್ಡಿನ ಕಾವೇರಿನಗರ ,ಆಂಜನೇಯ ಗುಡ್ಡ ಪ್ರದೇಶ ವ್ಯಾಪ್ತಿಯಲ್ಲಿ ಮನೆ ಗೋಡೆ ಕುಸಿದಿದ್ದು, ಇದರ ಪರಿಣಾಮ ಮನೆಯಲ್ಲಿ ಪಾತ್ರೆ ,ಸಾಮಾಗ್ರಿಗಳು ಹಾನಿಯಾಗಿದೆ.
ಇನ್ನೂ ಘಟನೆ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಮಾಜಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಬಿಬಿಎಂಪಿ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಿದರು.
ಪಾಲಿಕೆ ಮುಖ್ಯ ಆಯುಕ್ತರಿಗೆ ಮನವಿ ಮಾಡಿದ ಅವರು ಮನೆಯ ಮಾಲೀಕರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಅದೇ ರೀತಿ, ಇಲ್ಲಿನ ಪಾದರಾಯನಪುರ ವ್ಯಾಪ್ತಿಯ ಐಸ್ ಫ್ಯಾಕ್ಟರಿಯ ಬೃಹತ್ ಗೋಡೆ ಕುಸಿದ ಪರಿಣಾಮ ಆಟೋಗಳು ಜಖಂಗೊಂಡಿದೆ. ಘಟನೆ ಸ್ಥಳಕ್ಕೆ ಬಿಬಿಎಂಪಿ ವಲಯ ಅಧಿಕಾರಿಗಳು ಭೇಟಿ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಮನೆಯ ಮಾಲೀಕರು, ‘ಈ ಹಿಂದೆಯೂ ಮನೆಯ ಒಂದು ಮೂಲೆ ಕುಸಿದಿತ್ತು. ಈಗ ಮತ್ತೊಮ್ಮೆ ಗೋಡೆ ಕುಸಿದಿದೆ. ಸದ್ಯ ಮನೆಯಿಂದ ಖಾಲಿ ಮಾಡಿಸಿ ಅಧಿಕಾರಿಗಳು ತೆರಳಿದ್ದಾರೆ. ಮನೆ ಒಳಗೆ ಹೋಗದೆ ಹೊರಗೆ ನಿಂತಿದ್ದೇವೆ. ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಅಲ್ಲದೆ, ಮಳೆಗಾಲದಲ್ಲಿ ಪದೇ ಪದೇ ನಗರದ ಹಲವು ಕಡೆ ಈ ರೀತಿಯ ತೊಂದರೆ ಆಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ಮುಂದುವರೆದ ಜಿಟಿಜಿಟಿ ಮಳೆ..!
ನಗರದೆಲ್ಲೆಡೆ ಹಲವು ದಿನಗಳಿಂದ ಜಿಟಿಜಿಟಿ ಮಳೆ ಮುಂದುವರೆದಿದ್ದು, ದಿನವಿಡೀ ಚಳಿಯ ವಾತಾವರಣ ನಿರ್ಮಾಣಗೊಂಡಿದೆ.
ಇಲ್ಲಿನ ಶಿವಾಜಿನಗರ, ಇಂದಿರಾನಗರ, ಬಸವೇಶ್ವರನಗರ, ರಾಜಾಜಿನಗರದ, ಹಲಸೂರು, ಮಲ್ಲೇಶ್ವರ, ವಿಜಯನಗರ, ಯಶವಂತಪುರ, ಪೀಣ್ಯ, ಮಹಾಲಕ್ಷ್ಮಿ ಲೇಔಟ್, ಸಂಪಂಗಿರಾಮನಗರ, ನಾಗರಬಾವಿ, ಕೆಂಗೇರಿ, ರಾಜರಾಜೇಶ್ವರಿನಗರ, ಅನ್ನಪೂರ್ಣೇಶ್ವರಿನಗರ, ಬನಶಂಕರಿ, ಆರ್.ಟಿ.ನಗರ, ಹೆಬ್ಬಾಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದೆ.
ನಾಲ್ಕು ದಿನ ಮಳೆ
ರಾಜ್ಯದಲ್ಲಿ ನ. ೨೨ರವರೆಗೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು ಮೋಡಕವಿದ ವಾತಾವರಣ ಕಂಡು ಬೆಳಿಗ್ಗೆಯಿಂದಲೇ ತುಂತುರು ಮಳೆ ಬೀಳುತ್ತಿದೆ.
ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಮತ್ತು ಬಂಗಾಳ ಕೊಲ್ಲಿಯ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮಳೆಯಾಗುತ್ತಿದೆ. ರಾಜ್ಯದ ಕರಾವಳಿ ಮತ್ತು ದಕ್ಷಿಣ ಕನ್ನಡ ಒಳನಾಡು ಜಿಲ್ಲೆಗಳಲ್ಲಿ ಹಿಂಗಾರು ಅಬ್ಬರ ಮುಂದುವರಿಯಲಿದೆ. ಶನಿವಾರದವರೆಗೂ ಭಾರೀ ಮಳೆ ಬೀಳುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ,ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದ್ದು, ನವೆಂಬರ್ ೨೦ರಂದು ಅಧಿಕ ಮಳೆ ಸುರಿಯಲಿದೆ. ಇನ್ನು ದಕ್ಷಿಣ ಒಳನಾಡಿನ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಕೂಡ ಮಳೆಯಾಗಲಿದೆ.