
ಕೋಲಾರ, ಮಾ ೧೮- ಮಾಜಿ ಸಚಿವ ವರ್ತೂರ್ ಪ್ರಕಾಶ್ ಬುಲೆಟ್ ಏರಿ ಕೋಲಾರ ನಗರದಲ್ಲಿ ಗುರುವಾರ ಸಂಚಾರ ಮಾಡಿ ರಸ್ತೆಗಳ ಅವ್ಯವಸ್ಥೆಗಳನ್ನು ವೀಕ್ಷಣೆ ಮಾಡಿ ಅಚ್ಚರಿ ಮೂಡಿಸಿದರು.
ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ನಗರದ ರಸ್ತೆಗಳಲ್ಲಿ ಬಿದ್ದಿರುವ ಹಳ್ಳಗಳನ್ನು ಪಟ್ಟಿ ಮಾಡಿಕೊಂಡು ಅವುಗಳಿಗೆ ಕಾಂಕ್ರೀಟ್ ಹಾಕಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಈ ರೀತಿ ಸಂಚಾರ ಮಾಡುತ್ತಿದ್ದೇನೆ, ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರ ಇದ್ದಾಗ ರಾಜ್ಯದಲ್ಲೂ ಅಭಿವೃದ್ಧಿ ಮಾಡಲಿಲ್ಲ, ಇಲ್ಲಿನ ಶಾಸಕರಿಗೆ ಅಧಿಕಾರವಿದ್ದರೂ ಕೂಡ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಒಂದು ನಯಾ ಪೈಸಾ ಅನುದಾನ ತಂದು ಅಭಿವೃದ್ಧಿ ಮಾಡುವುದಕ್ಕೆ ಆಗಲಿಲ್ಲ, ೫ ವರ್ಷದಿಂದ ಸುಮ್ಮನೆ ಕಾಲಹರಣ ಮಾಡಿಬಿಟ್ಟು ಕೋಲಾರವನ್ನು ೨೫ ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ, ಈಗ ಸಿದ್ದರಾಮಯ್ಯನವರ ಜಪ ಮಾಡುತ್ತಿದ್ದಾರೆ ಅವರು ಬಂದರೆ ಕೋಲಾರ ಕ್ಷೇತ್ರ ೫೦ ವರ್ಷಗಳ ಹಿಂದಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಳಿ ಕೈಕಾಲು ಹಿಡಿದು ಕ್ಷೇತ್ರಕ್ಕೆ ಅನುದಾನ ತಂದಿದ್ದೇನೆ, ಗ್ರಾಮಾಂತರಕ್ಕೆ ಹತ್ತು ಕೋಟಿ ಕೋಲಾರ ನಗರಕ್ಕೆ ೧೦ ಕೋಟಿ ತಂದಿದ್ದೇನೆ, ನಗರದಲ್ಲಿ ಸಿಸಿ ರಸ್ತೆ ಇಲ್ಲದ ಮತ್ತು ಹಳ್ಳ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಲು ಹೊರಟಿದ್ದೇನೆ, ಜೊತೆಗೆ ಕೋಲಾರ ನಗರವನ್ನು ಜಿಲ್ಲೆಯಲ್ಲಿ ಅತ್ಯುತ್ತಮ ನಗರವನ್ನಾಗಿ ಮಾರ್ಪಾಡು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ತೇಜಸ್ ವರ್ತೂರ್ ಪ್ರಕಾಶ್, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಡಿ.ಎನ್.ಡಿ.ದೇವರಾಜ್, ಮಾಜಿ ನಗರ ಸಭಾ ಸದಸ್ಯ ಮುಕೇಶ್, ರೈತ ಮೋರ್ಚಾ ನಗರ ಘಟಕದ ಅಧ್ಯಕ್ಷ ಮಂಜುನಾಥ್, ಯುವ ಮುಖಂಡ ಅಭಿ ಬಾರದ್ವಜ್ಜ ನಾಯ್ಡು, ಕಾಶಿ, ಕೋಗಿಲಹಳ್ಳಿ ಲೋಕೇಶ್ ಇದ್ದರು.