ನಗರದಲ್ಲಿ ರಸ್ತೆ, ಚರಂಡಿ, ಬೀದಿ ದೀಪ, ಬಡವರಿಗೆ ಮನೆ – ಆದ್ಯತೆ

ಶ್ರೀ ಅಂಬಿಗರ ಚೌಡಯ್ಯ ವೃತ್ತದಿಂದ ಎಂ.ಈರಣ್ಣ ವೃತ್ತದವರೆಗೆ ಬೀದಿ ದೀಪ ಉದ್ಘಾಟನೆ
ರಾಯಚೂರು.ಜೂ.೦೮- ನಗರದ ಯಾವುದೇ ರಸ್ತೆಗೆ ಹೋದರೂ, ಎಲ್ಲಾ ರಸ್ತೆಗಳಲ್ಲೂ ದೀಪದ ಬೆಳಕನ್ನು ಕಾಣಬಹುದು. ಆ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ನಿನ್ನೆ ರಾತ್ರಿ ವಾರ್ಡ್ ೧೬ ರ ನಗರಸಭೆ ಸದಸ್ಯರ ನಿವಾಸದ ಮುಂದೆ ಈ ಕಾರ್ಯಕ್ರಮ ಆಯೋಜಿಸಿ, ಅಂಬಿಗರ ಚೌಡಯ್ಯ ವೃತ್ತದಿಂದ ಬಿಆರ್‌ಬಿ ವೃತ್ತದವರೆಗೆ ಬೀದಿ ದೀಪಗಳನ್ನು ಉದ್ಘಾಟಿಸಿ, ಮಾತನಾಡುತ್ತಾ, ಏಳು ವರ್ಷದಲ್ಲಿ ನಗರದಲ್ಲಿ ರಸ್ತೆ, ಯುಜಿಡಿ, ಬೀದಿ ದೀಪ, ಚರಂಡಿ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿದೆ. ಅಧಿಕಾರಕ್ಕೆ ಬಂದ ನಂತರ ಜನರಿಗೆ ನೆನಪುಳಿಯುವಂತಹ ಕೆಲಸ, ಕಾರ್ಯ ಮಾಡಿದರೇ ಮಾತ್ರ ನಮ್ಮನ್ನು ಜನ ನೆನಪಿಟ್ಟುಕೊಳ್ಳುತ್ತಾರೆ. ಈ ಹಿಂದೆ ನಗರದ ರಸ್ತೆಗಳ ಬಗ್ಗೆ ಮಾಧ್ಯಮಗಳಲ್ಲಿ ನಿತ್ಯ ಸುದ್ದಿಗಳು ಬರುತ್ತಿದ್ದವು. ಆದರೆ, ಈಗ ನಗರದ ಯಾವುದೇ ಭಾಗಕ್ಕೆ ಹೋದರೂ, ಉತ್ತಮ ರಸ್ತೆಗಳನ್ನು ಕಾಣಬಹುದಾಗಿದೆ.
ಹೆಚ್ಚು ಪ್ರಮಾಣದಲ್ಲಿ ನೀರು ಹರಿಯುವ ರಸ್ತೆಗಳಿಗೆ ಸಿಸಿ ರಸ್ತೆ ಮಾಡುವ ಮೂಲಕ ಈ ರಸ್ತೆಗಳು ಅನೇಕ ವರ್ಷಗಳ ಕಾಲ ಜನರ ಉಪಯೋಗಕ್ಕೆ ಬರುವಂತೆ ಮಾಡಲಾಗಿದೆ. ವಾರ್ಡ್ ೧೬ ರಲ್ಲಿ ೧.೬೦ ಕೋಟಿ ಕಾಮಗಾರಿ ಉಳಿದಿದೆ. ಇದನ್ನು ಶೀಘ್ರ ಪೂರ್ಣಗೊಳಿಸಲಾಗುತ್ತದೆ. ಅಂಬಿಗರ ಚೌಡಯ್ಯ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೂ ಸಿಸಿ ರಸ್ತೆ ನಿರ್ಮಿಸಲಾಗಿದೆ. ಯುಜಿಡಿ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಕುಡಿವ ನೀರಿನ ಸಮಸ್ಯೆ ಇಲ್ಲದಂತೆ ಜನರಿಗೆ ದಿನಬಿಟ್ಟು ದಿನ ನೀರು ಪೂರೈಸುವ ವ್ಯವಸ್ಥೆ ನಗರದಲ್ಲಿದೆ. ಗುಲ್ಬರ್ಗಾ, ಹುಬ್ಬಳ್ಳಿ ಭಾಗದಲ್ಲಿ ವಾರಗಟ್ಟಲೇ ನೀರು ದೊರೆಯುವುದೇ ಕಷ್ಟ.
ಆದರೆ, ನಗರದಲ್ಲಿ ಮಾತ್ರ ದಿನ ಬಿಟ್ಟು ದಿನ ನೀರು ಒದಗಿಸಲಾಗುತ್ತದೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ೫೦೦೦ ಮನೆಗಳನ್ನು ನೀಡಲಾಗುತ್ತದೆ. ಇದರಲ್ಲಿ ೨೭೪೩ ಮನೆಗಳು, ಮನೆಯಿಲ್ಲದವರಿಗೆ ಒದಗಿಸಲಾಗುತ್ತದೆ. ಸ್ಲಂನಲ್ಲಿರುವ ಜನರು ಸ್ವಂತ ನಿವೇಶನ ಹೊಂದಿದ್ದಲ್ಲಿ ಅವರು ಮನೆ ಕಟ್ಟಿಸಿಕೊಳ್ಳಲು ೨೭೪೩ ಮನೆಗಳನ್ನು ನೀಡಲಾಗುತ್ತದೆ. ಹೀಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಅನುದಾನ ಬಿಡುಗಡೆಗೊಳಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುತ್ತದೆಂದರು.
ನಗರಸಭೆ ಅಧ್ಯಕ್ಷರಾದ ಈ.ವಿನಯಕುಮಾರ ಅವರು ಮಾತನಾಡುತ್ತಾ, ವಾರ್ಡ್ ೧೬ ರಲ್ಲಿ ಹರೀಶ್ ನಾಡಗೌಡ ಅವರು ಅಭಿವೃದ್ಧಿಗಾಗಿ ನಿರಂತರ ಕಾಳಜಿ ವಹಿಸುವ ನಾಯಕರಾಗಿದ್ದಾರೆ. ಹೆಚ್ಚಿನ ಅನುದಾನ, ಬೀದಿ ದೀಪ ಇನ್ನಿತರ ಸೌಲಭ್ಯ ದೊರೆಯುವಂತೆ ಮಾಡಲು ಸಿಂಹಘರ್ಜನೆ ಮಾಡುವ ಸ್ವಭಾವದವರಾಗಿದ್ದಾರೆ. ಇವರ ಪ್ರಯತ್ನದಿಂದ ವಾರ್ಡ್ ಅಭಿವೃದ್ಧಿ ಸಾಧ್ಯವಾಗಿದೆಂದು ಹೇಳಿದರು. ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್ ಮಾತನಾಡುತ್ತಾ, ನಗರದ ೩೫ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ೧೪ ಮತ್ತು ೧೫ ನೇ ಹಣಕಾಸು ಯೋಜನೆ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗುತ್ತದೆ. ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚಿನ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆಂದು ಹೇಳಿದರು.
ನಗರಸಭೆ ಮಾಜಿ ಸದಸ್ಯರಾದ ಹರೀಶ್ ನಾಡಗೌಡ ಅವರು ಮಾತನಾಡುತ್ತಾ, ನಗರದ ರಸ್ತೆಗಳ ನಿರ್ಮಾಣ ಮತ್ತು ಬೀದಿ ದೀಪ ಅಳವಡಿಸುವ ಮೂಲಕ ರಾಯಚೂರು ರಸ್ತೆಗಳು ಬೆಂಗಳೂರು ರಸ್ತೆಯ ಮಾದರಿ ಕಳೆ ತುಂಬುವಂತೆ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮಾಡಿದ್ದಾರೆ. ಬಿಆರ್‌ಬಿ ವೃತ್ತದಿಂದ ಎಂ.ಈರಣ್ಣ ವೃತ್ತದವರೆಗೆ ಸಿಸಿ ರಸ್ತೆ ಮತ್ತು ಬೀದಿ ದೀಪ ಹಾಕುವ ಮೂಲಕ ಸಮಗ್ರ ಅಭಿವೃದ್ಧಿಗೆ ನಾಂದಿಯಾಡಿದ್ದಾರೆ. ಶಿವರಾಜ ಪಾಟೀಲ್ ಅವರು ಜನಪರವಾಗಿ ಕಾರ್ಯ ನಿರ್ವಹಿಸುವ ಕಾಳಜಿ ಹೊಂದಿದವರಾಗಿದ್ದಾರೆಂದು ಹೇಳಿದರು.